- ರಾಂಪುರದಲ್ಲಿ ಶಿಲಾ ಮೂರ್ತಿ ಸ್ಥಾಪನೆ ಧರ್ಮಸಭೆಯಲ್ಲಿ ಉಜ್ಜಯಿನಿ ಶ್ರೀಗಳ ವಿಷಾದ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ವೈಚಾರಿಕತೆಯ ಹೆಸರಲ್ಲಿ ಪ್ರಶ್ನೆ ಮಾಡುವ ಮೊದಲು ನಂಬಿಕೆ, ಶ್ರದ್ಧೆ, ವಿಶ್ವಾಸ ದೊಡ್ಡದು. ನಂಬಿಕೆ ಇದ್ದರೆ ಕಲ್ಲಿನ ಮೂರ್ತಿಯಲ್ಲಿಯೂ ದೈವವನ್ನು ಕಾಣುತ್ತೇವೆ. ಆಧುನಿಕತೆ ಬೆಳೆದಂತೆ ಜನರಲ್ಲಿ ನಂಬಿಕೆ, ವಿಶ್ವಾಸ ಕಳೆಗುಂದುತ್ತಿದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರು ವಿಷಾದಿಸಿದರು.ತಾಲೂಕಿನ ಸಾಸ್ವೇಹಳ್ಳಿ ಸಮೀಪದ ರಾಂಪುರದಲ್ಲಿ ಲಿಂ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಶಿಲಾಮಂಟಪ, ಕತೃಗದ್ದುಗೆ, ಶಿಲಾ ಮೂರ್ತಿ ಸ್ಥಾಪನೆಯ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಗವಂತ ಕೊಟ್ಟ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆ ಕಾರ್ಯವನ್ನು ರಾಂಪುರ ಬೃಹನ್ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಗಳು ಮಾಡಿ ಈ ಭಾಗದ ಜನರ ದೇವರಾಗಿದ್ದಾರೆ ಎಂದರು.
ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಯಜಮಾನನಿಲ್ಲದೇ ಮಠ ಸೊರಗುವುದು ಸಾಮಾನ್ಯ. ಆದರೆ, ರಾಂಪುರ ಬೃಹನ್ಮಠದಲ್ಲಿ ಮಠದ ಪರಂಪರೆ ಉಳಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ಶ್ರೀಗಳು ನಿರ್ವಹಿಸಿದ್ದಾರೆ. ಕಡಿಮೆ ಸಮಯದಲ್ಲಿ ಭಕ್ತರ ಸಹಕಾರದಿಂದ ಶಿಲಾ ಮಂಟಪ ನಿರ್ಮಾಣ ಮಾಡಿರುವುದು ಸಾಧನೆಯೇ ಸರಿ ಎಂದರು.ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಮಾತನಾಡಿ, ಗುರುಸೇವೆಯಿಂದ ಎಲ್ಲ ಫಲಗಳು ಸಿಗುತ್ತವೆ. ಗುರುವನ್ನು ಕೆಣಕಬಾರದು. ಗುರುವಿನ ಮೇಲೆ ನಂಬಿಕೆ ಇಟ್ಟರೆ ಒಳ್ಳೆಯದಾಗುತ್ತದೆ ಎಂದರು.
ಚನ್ನಗಿರಿ ವಿರಕ್ತ ಮಠದ ಬಸವ ಜಯಚಂದ್ರ ಸ್ವಾಮೀಜಿ ಮಾತನಾಡಿ, ರಾಂಪುರ ಬೃಹನ್ಮಠವು ಎಂದಿಗೂ ಆಳುವವರನ್ನು ಓಲೈಸಿಲ್ಲ. ಅಳುವವರ ನೋವಿಗೆ ಸ್ಪಂದಿಸಿ, ಕಣ್ಣೀರನ್ನು ಒರೆಸಿದ ಮಠ ಇದಾಗಿದೆ. ಶ್ರೀ ಮಠಕ್ಕೆ ಕಾಶಿ ಶ್ರೀಗಳು ಪೀಠಾಧ್ಯಕ್ಷರನ್ನು ಆಯ್ಕೆ ಮಾಡಿ ಮಠದ ಗುರು ಪರಂಪರೆಯನ್ನು ಮುಂದುವರಿಸಬೇಕು ಎಂದರು.ಮಠದ ಉಸ್ತುವಾರಿ ಶಿವಕುಮಾರ ಹಾಲಸ್ವಾಮಿಗಳು ಮಾತನಾಡಿ, ಶಿಲಾ ಮಂಟವು ಭಕ್ತರಿಂದ ನಿರ್ಮಾಣವಾಗಿದೆಯೇ ಹೊರತು, ಸರ್ಕಾರದ ಯಾವುದೇ ಅನುದಾನಗಳಿಂದ ಅಲ್ಲ. ಭಕ್ತರೇ ತಮ್ಮ ಶ್ರೀಗಳನ್ನು ಮಠದಲ್ಲಿ ನೆಲೆಗೊಳಿಸಿದ್ದಾರೆ ಎಂದರು.
ಈ ಸಂದರ್ಭ ಶಿಕಾರಿಪುರದ ಕಡೇನಂದಿಹಳ್ಳಿ ಮಠದ ರೇವಣಸಿದ್ಧ ಶಿವಾಚಾರ್ಯರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಮಾಜಿ ಸದಸ್ಯ ಎ.ಆರ್ ಚಂದ್ರಶೇಖರ್ ಮಾತನಾಡಿದರು. ತೀರ್ಥಹಳ್ಳಿಯ ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ವಿಜಯನಗರ ಜಿಲ್ಲೆಯ ಬುಕ್ಕಸಾಗರ ಮಠದ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಬೃಹನ್ಮಠದ ಶಾಖ ಮಠದ 20ಕ್ಕೂ ಹೆಚ್ಚು ಹಾಲಸ್ವಾಮೀಜಿ ಮಠಾಧೀಶರು, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಸುತ್ತಮುತ್ತಲ ಗ್ರಾಮದ ಮುಖಂಡರು ಇದ್ದರು.- - - -15ಎಚ್.ಎಲ್.ಐ1.ಜೆಪಿಜಿ:
ಸಾಸ್ವೇಹಳ್ಳಿ ಸಮೀಪದ ರಾಂಪುರ ಬೃಹನ್ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯರ ಕತೃಗದ್ದುಗೆ, ಶಿಲಾ ಮಂಟಪ, ಶಿಲಾ ಮೂರ್ತಿ ಸ್ಥಾಪನೆ ಪ್ರಯುಕ್ತ ನಡೆದ ಧರ್ಮಸಭೆಯನ್ನು ಕಾಶಿ ಶ್ರೀಗಳು ಉದ್ಘಾಟಿಸಿದರು.