ಕಾರವಾರ: ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಿ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ವಿನಂತಿಸಿದರು.
ರೂಪಾಲಿ ಎಸ್. ನಾಯ್ಕ ಪ್ರತಿಯೊಂದು ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ ಜನಪ್ರಿಯ ಯೋಜನೆಗಳನ್ನು ವಿವರಿಸಿ, ಅಪಾರ ಸಂಖ್ಯೆಯ ಜನರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದರು.
ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಚುಕ್ಕಾಣಿ ಹಿಡಿಯಬೇಕು. ಕೇವಲ ದೇಶದ ಆಂತರಿಕ ಅಭಿವೃದ್ಧಿ ಅಷ್ಟೇ ಅಲ್ಲ. ಜಾಗತಿಕವಾಗಿಯೂ ಭಾರತವನ್ನು ಬಲಿಷ್ಠವನ್ನಾಗಿ ರೂಪಿಸಿ ಭಾರತ ಜಾಗತಿಕ ನಾಯಕನಾಗಬೇಕು. ಈ ಸಂಕಲ್ಪದೊಂದಿಗೆ ಹಗಲಿರುಳು ದೇಶಕ್ಕಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ. ಪ್ರತಿಯೊಬ್ಬರೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮತ ನೀಡುವ ಮೂಲಕ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ವಿನಂತಿಸಿದರು.ಕ್ಷೇತ್ರದ ವಿವಿಧ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿದ ರೂಪಾಲಿ ಎಸ್. ನಾಯ್ಕ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದರು. ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾರವಾರ ಕೋಡಿಬಾಗ ರಸ್ತೆಗೆ ಒಂದೇ ವಾರದಲ್ಲಿ ಚಕಮಕ್ ಜಂಗ್ ಹೆಂಜಾ ನಾಯ್ಕ ಹೆಸರನ್ನು ನಾಮಕರಣ ಮಾಡಲು ಸಾಧ್ಯವಾಯಿತು ಎಂದರು.
ಅಂಕೋಲಾದ ಶಾಂತಾದುರ್ಗಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕೋಡ್ಸಣಿ ಹಾಲಕ್ಕಿ ಸಮಾಜದ ಮುಖಂಡ ಮಂಕಾಳು ಗೌಡ ಅವರ ನಿವಾಸದಲ್ಲಿ ಸಭೆಯಲ್ಲಿ ಪಾಲ್ಗೊಂಡರು.
ಪಕ್ಷದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ರಾಜ್ಯ ಮಾಧ್ಯಮ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಕಾರವಾರ ನಗರ ಮಂಡಲದ ನಾಗೇಶ ಕುರ್ಡೇಕರ ಮತ್ತು ಅಂಕೋಲಾ ಮಂಡಲದ ಗೋಪಾಲಕೃಷ್ಣ ವೈದ್ಯ, ಪಕ್ಷದ ಪ್ರಮುಖರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.