ಅಭ್ಯರ್ಥಿಗಳು ಸಾಂಕೇತಿಕ, ಪಕ್ಷಗಳ ತತ್ವ, ಸಿದ್ಧಾಂತವೇ ಮುಖ್ಯ: ಕಾಗೇರಿ

KannadaprabhaNewsNetwork |  
Published : Apr 01, 2024, 12:47 AM IST
ಕಾರವಾರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಆಡಳಿತದ ಕಾರ್ಯವೈಖರಿಯಿಂದ ಯಾವಾಗ ಈ ಸರ್ಕಾರ ಹೋಗುತ್ತದೆ ಎನ್ನುತ್ತಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಾರವಾರ: ಈ ಲೋಕಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುವ ಚುನಾವಣೆಯಾಗಿದೆ. ಇಬ್ಬರು ಅಭ್ಯರ್ಥಿಗಳು ಸಾಂಕೇತಿಕವಾಗಿ ಇರುತ್ತಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ರಾಷ್ಟ್ರೀಯತೆಯನ್ನು ಜನತೆ ಮುಂದಿಡುವುದು, ಸಾಕಾರಗೊಳಿಸಿರುವುದು, ೧೦ ವರ್ಷದಲ್ಲಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಮಾಡಿದ ಸಾಧನೆ ಒಂದು ಕಡೆಯಾದರೆ, ಕಾಂಗ್ರೆಸ್ ಅರಾಜಕತೆ, ಓಲೈಕೆ ರಾಜಕಾರಣ, ಭ್ರಷ್ಟಾಚಾರ ತಿಳಿಸುವುದು ಮತ್ತೊಂದು ಕಡೆಯಾಗಿದೆ ಎಂದರು. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಆಡಳಿತದ ಕಾರ್ಯವೈಖರಿಯಿಂದ ಯಾವಾಗ ಈ ಸರ್ಕಾರ ಹೋಗುತ್ತದೆ ಎನ್ನುತ್ತಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಹೊಸ ಕೆಲಸ ಬಂದಿಲ್ಲ. ಗ್ಯಾರಂಟಿ ಯೋಜನೆಯ ಫಲ ಅರ್ಧದಷ್ಟು ಜನರಿಗೆ ತಲುಪಿಲ್ಲ. ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲರ ವರೆಗೆ ದೂರು ಹೋಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೆ ಅಪರಾಧಿ ಮನೋಭಾವನೆ ಹೊಂದಿದವರಿಗೆ ನಮ್ಮ ಸರ್ಕಾರ ಬಂದಿದೆ ಎಂದೆನಿಸಿದೆ. ಕೋಮುದ್ವೇಷ ಹೆಚ್ಚಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ, ರಾಮ, ಹನುಮ ಧ್ವಜವನ್ನು ಕಿತ್ತೆಸೆಯುವ ದುರಹಂಕಾರ ಮನಸ್ಥಿತಿ ಬೆಳೆಯುತ್ತಿದೆ ಎಂದರು.

ಶಾಸಕ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ ಪ್ರಚಾರದಲ್ಲಿ ಭಾಗಿಯಾಗುವ ಪ್ರಶ್ನೆಗೆ ಉತ್ತರಿಸಿ, ಅನಂತಕುಮಾರ ಹೆಗಡೆ ದೇಶದ ಅಭಿವೃದ್ಧಿ ವಿಚಾರದಲ್ಲಿ ಅವರದ್ದೆ ಕೊಡುಗೆ ನೀಡಿದ್ದಾರೆ. ತಾವು ಆಯ್ಕೆಯಾದರೆ ಮುಂದೆಯು ಅವರ ಸಲಹೆ ಪಡೆಯುತ್ತೇವೆ. ಜಿಲ್ಲಾಧ್ಯಕ್ಷರು ಒಳಗೊಂಡು ಹಲವರು ಅನಂತಕುಮಾರ ಅವರನ್ನು ಸಂಪರ್ಕಿಸಿದ್ದಾರೆ. ಶಿವರಾಮ ಹೆಬ್ಬಾರ ಕೂಡಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ನೂರಕ್ಕೆ ನೂರು ಮೋದಿ ಪ್ರಧಾನಿಯಾಗಲು ಕೆಲಸ ಮಾಡುತ್ತಾರೆ. ಎಲ್ಲರ ಮನಸ್ಸಿನಲ್ಲೂ ಮೋದಿ ಪ್ರದಾನಿಯಾಗಬೇಕು ಎಂದಿದೆ ಎಂದು ಸ್ಪಷ್ಟಪಡಿಸಿದರು.

ಹೆದ್ದಾರಿ, ಬಂದರು, ಮಿನುಗಾರರ ಸಮಸ್ಯೆ ಬಗೆಹರಿಸಬೇಕಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಕೂಡಾ ಪ್ರಯತ್ನ ಮಾಡುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಕಿಸುತ್ತಿದ್ದಾರೆ. ಕಾರವಾರದಿಂದ ಶಿರಸಿಗೆ, ಭಟ್ಕಳಕ್ಕೆ, ಅಲ್ಲಿಗೆ ಇಲ್ಲಿಗೆ ಯಾವ ಕಚೇರಿಯನ್ನು ತೆಗೆದುಕೊಂಡು ಹೋಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ವಿರೊಧಿಗಳು ಸ್ವಾರ್ಥ ಸಾಧಿಸಿಕೊಳ್ಳಲು ನೋಡುತ್ತಾರೆ ಎಂದರು.

ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಮಾಡಬೇಕು ಎನ್ನುವುದು ಕೋಟಿ ಕೋಟಿ ಜನರ ಆಶಯವಾಗಿದೆ. ಈ ಲೋಕಸಭಾ ಚುನಾವಣೆ ಜಗತ್ತನ್ನು ಸೆಳೆದಿದೆ. ಎಲ್ಲ ರಾಷ್ಟ್ರಗಳು ಭಾರತದ ಚುನಾವಣೆಯತ್ತ ದೃಷ್ಟಿ ನೆಟ್ಟಿವೆ. ಬದಲಾದಂತಹ ಭಾರತವು ಇಡೀ ಜಗತ್ತಿಗೆ ನೇತೃತ್ವ ಕೊಡುವ ಸ್ಥಿತಿಗೆ ತಲುಪಿದೆ. ನರೇಂದ್ರ ಮೋದಿ ನೇತೃತ್ವದ ಜಗತ್ತಿನ ಗಮನ ಸೆಳೆದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆಯಾದ ಕ್ಷಣದಿಂದ ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸುವ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದರು.

ಎಂಎಲ್‌ಸಿ ಗಣಪತಿ ಉಳ್ವೇಕರ, ನಗರಸಭೆ ಸದಸ್ಯ ಡಾ. ನಿತಿನ ಪಿಕಳೆ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ನಾಗರಾಜ ನಾಯಕ, ನಾಗೇಶ ಕರ್ಡೇಕರ, ಸದಾನಂದ ಭಟ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಸಾನ್‌ ಸನ್ಮಾನ್‌ ಇ - ಕೆವೈಸಿಗೆ ಸರ್ವರ್‌ ಅಡ್ಡಿ!
ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್