ಬಲಿಷ್ಠ ಭಾರತಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ಸೂಲಿಬೆಲೆ

KannadaprabhaNewsNetwork |  
Published : Mar 03, 2024, 01:32 AM IST
ಶಹಾಪುರ ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ನಮೋ ಬ್ರಿಗೇಡ್ ವತಿಯಿಂದ ನಡೆದ ನಮೋ ಭಾರತ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. | Kannada Prabha

ಸಾರಾಂಶ

ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಬೇಕು.

ಶಹಾಪುರ: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಗದ್ದುಗೆಗೇರಿಸಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮನವಿ ಮಾಡಿದರು.

ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ನಮೋ ಬ್ರಿಗೇಡ್ ಶಹಾಪುರ ತಾಲೂಕು ಘಟಕದವತಿಯಿಂದ ನಡೆದ ನಮೋ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹ್ಯಾಕ್ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡಿದ್ದರು. ಆದರೆ, ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹ್ಯಾಕ್ ಮಾಡುವ ಅವಶ್ಯಕತೆ ಅವರಿಗಿಲ್ಲ ಎಂದರು.

ಈ ಹಿಂದೆ ಅನೇಕ ಬಾರಿ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮಾತುಗಳನ್ನು ಹೇಳುತ್ತಿದ್ದರು.

ಆದರೆ, ಇದೀಗ ಸೋನಿಯಾ ಗಾಂಧಿ ಅವರು ತಾವು ಸ್ಪರ್ಧಿಸುತ್ತಿದ್ದ ಲೋಕಸಭಾ ಕ್ಷೇತ್ರದಿಂದ ಪ್ರಸ್ತುತ ಚುನಾವಣೆಯಲ್ಲಿ ದೂರ ಉಳಿದು ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದನ್ನು ನೋಡಿದರೆ 2024ರಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಮಾತು ಸತ್ಯವಾಗುತ್ತದೆ ಎನ್ನುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಎಂದರು.

ಭಾರತ್ ಮಾಲಾ ಯೋಜನೆಯಡಿ ನ್ಯಾಷನಲ್ ಹೈವೇ, ರೈಲ್ವೆ ಯೋಜನೆ, ಜನ್ ಧನ್ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಉಜ್ವಲಾ ಯೋಜನೆ, ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸಂಸತ್ ಭವನ ನಿರ್ಮಾಣ, ರಾಮಂದಿರ ನಿರ್ಮಾಣ, ಕಾಶಿ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಭಾರತ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಅವರ ಶಕ್ತಿ ಈ ದೇಶದ ಬಗ್ಗೆ ಅವರಿಗಿರುವ ಕಾಳಜಿ, ತಾಕತ್ತಿನ ಬಗ್ಗೆ ಹೇಳುತ್ತಾ ಹೋದರೆ ಒಂದು ದಿನ ಸಾಕಾಗುವುದಿಲ್ಲ ಎಂದರು.

ಮೋದಿ ಅವರು ಅಪ್ಪನ ಹೆಸರು, ಜಾತಿ ಹೇಳಿಕೊಂಡು ರಾಜಕೀಯ ಮಾಡಲ್ಲ. ಅಧಿಕಾರ ಇದೆ ಅಂತ ದರ್ಪ ತೋರುವುದಕ್ಕಲ್ಲ. ಜನಸಾಮಾನ್ಯರ ಶೋಷಣೆ ಮಾಡುವುದಕ್ಕಲ್ಲ. ಸಾಮಾನ್ಯರು ಹೆದರುತ್ತಾರೆ, ನಮ್ಮಂತಹವರು ಎದೆಗೊಟ್ಟು ಎದುರಿಸುತ್ತಾರೆ. ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರಕ್ಕೆ ಯಾರೂ ಬರಬಾರದಾ, ಇದೇನು ಪ್ರತ್ಯೇಕಾ ರಿಪಬ್ಲಿಕ್ಕಾ? ಎಂದು ಅವರು ಪ್ರಶ್ನಿಸಿದರು.

ನಿಮ್ಮ ಕೈಯಲ್ಲಿ ಮಂತ್ರಿಸ್ಥಾನ, ಅಧಿಕಾರ, ಪೊಲೀಸ್ ಬಲ, ಲಾಠಿ, ದರ್ಪ ಇದ್ದರೆ ನಮ್ಮ ಕೈಯಲ್ಲಿ ಸಂವಿಧಾನವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಚಂದ್ರಶೇಖರ್ ಮಾಗನೂರು, ಬಿಜೆಪಿಯ ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಡಾ. ಚಂದ್ರಶೇಖರ್ ಸುಬೇದಾರ್, ಮಹೇಶ್ ಪಾಟೀಲ್ ಆಲ್ದಾಳ, ಅಡಿವೆಪ್ಪ ಜಾಕಾ, ಹಿರಿಯ ನ್ಯಾಯವಾದಿ ಆರ್.ಎಂ. ಹೊನ್ನಾರೆಡ್ಡಿ, ಮಲ್ಲಿಕಾರ್ಜುನ ಕಂದಕುರ್, ಬಸವರಾಜ ಅರುಣಿ, ಸುಧಾಕರ್ ಗುಡಿ, ಡಾ. ಗಂಗಮ್ಮ, ಶಿವಕುಮಾರ ಶಿರವಾಳ, ಉಮೇಶ್ ಮಹಾಮನಿ, ಅಬ್ದುಲ್ ಹಾದಿಮನಿ, ರಾಘವೇಂದ್ರ ಯಕ್ಷಿಂತಿ, ಚಂದ್ರಶೇಖರ್ ಯಾಳಗಿ ಸೇರಿದಂತೆ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ