ಮೋದಿ ಜನ್ಮದಿನ: ಒಂದು ತಿಂಗಳು ಸೇವಾ ಸಂಕಲ್ಪ ಅಭಿಯಾನ

KannadaprabhaNewsNetwork |  
Published : Sep 03, 2026, 02:00 AM IST
ಕಾರ್ಯಾಗಾರದಲ್ಲಿ ವಿಪ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ನರೇಂದ್ರ ಮೋದಿ ಅವರು ಸತತ 25 ವರ್ಷಗಳ ಕಾಲ ರಾಜಕೀಯ ಸೇವೆ ಸಲ್ಲಿಸುತ್ತಿದ್ದು, ಅವರ ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ಜನಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು.

ಹುಬ್ಬಳ್ಳಿ:

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸೆ. 17ರಿಂದ ಅ. 17ರ ವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ಕಾರ್ಯಕರ್ತರು ತಮ್ಮ ವಾರ್ಡ್ ಹಾಗೂ ಬೂತ್‌ ಮಟ್ಟದಲ್ಲಿ ವಿವಿಧ ಸೇವಾ ಚಟುವಟಿಕೆ ನಡೆಸಬೇಕು ಎಂದು ವಿಪ ಸದಸ್ಯ ಲಿಂಗರಾಜ ಪಾಟೀಲ ಕರೆ ನೀಡಿದರು.

ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸೇವಾ ಸಂಕಲ್ಪ ಅಭಿಯಾನದ ಪೂರ್ವಭಾವಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಅವರು ಸತತ 25 ವರ್ಷಗಳ ಕಾಲ ರಾಜಕೀಯ ಸೇವೆ ಸಲ್ಲಿಸುತ್ತಿದ್ದು, ಅವರ ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ಜನಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

ಅಭಿಯಾನದ ಅಂಗವಾಗಿ ಆಶೀರ್ವಾದ ದೀಪ, 25 ಕೋಟಿ ಮಕ್ಕಳ ಕನಸಿನ ಭಾರತ, ನಮೋ ಸೇವಾ ಗಾಥಾ, ಅಂಗನವಾಡಿ ಉತ್ಸವ, ಕಹಾನಿ ಬದಲಾವಕಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ, ಸೇವಾ ಜ್ಯೋತಿ ಯಾತ್ರೆ, ಸೇವಾ ಯೋಗದಾನ, ಸೇವಾ ಸೇತು ಅಭಿಯಾನ ಹಾಗೂ ರಂಗೋಲಿ ರಾಷ್ಟ್ರ ಸೇರಿದಂತೆ ಹತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪ್ರಾಸ್ತಾವಿಕ ಮಾತನಾಡಿ, ಈ ಅಭಿಯಾನದಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಸ್ವದೇಶಿ ನಿರ್ಮಿತ ಮಣ್ಣಿನ ಹಣತೆ ಹಚ್ಚುವ ಮೂಲಕ ಅಭಿಯಾನಕ್ಕೆ ಬೆಂಬಲಿಸುವಂತೆ ಕರೆ ನೀಡಿದರು.

ಅಭಿಯಾನದ ಜಿಲ್ಲಾ ಸಂಚಾಲಕ ಶಿವು ಮೆಣಸಿನಕಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ನಾಡಜೋಶಿ, ಬಸವರಾಜ ಗರಗ, ಸಂಜಯ ಕಪಟಕರ, ಶಂಕರ ಶೇಳಕೆ, ಮಂಡಳ ಅಧ್ಯಕ್ಷರಾದ ರಾಜು ಕಾಳೆ, ಮಂಜುನಾಥ ಕಾಟಕರ, ಶಶಿ ಡಂಗನವರ, ರಾಜು ಕೋರ್ಯಾಣಮಠ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದವಾ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ-ಧಾರವಾಡ ಗಡೀಲಿ ಅಕ್ರಮ ಡೀಸೆಲ್‌ ದಂಧೆ!
ಸಣ್ಣ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಿದ್ದ ಅರಸು