ಕನ್ನಡಪ್ರಭ ವಾರ್ತೆ ಮಂಗಳೂರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮುಂದುವರಿಯುವಂತಾಗಲು ಬಿಜೆಪಿ ಬೆಂಬಲಿಸುವ ಸಲುವಾಗಿ ಚದುರಿಹೋದ ವಿವಿಧ ಸಂಘಟನೆಗಳನ್ನು ಒಂದೇ ಛತ್ರದಡಿ ತರುವ ಸಲುವಾಗಿ ಮಂಗಳೂರಿನಲ್ಲಿ ಮೋದಿ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀರಾಮಸೇನೆ, ಅಭಿನವ ಭಾರತ, ಸಿಂಹವಾಹಿನಿ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಈ ಮೋದಿ ಬ್ರಿಗೇಡ್‌ನಲ್ಲಿ ಇದ್ದಾರೆ. ಮೋದಿ ಬ್ರಿಗೇಡ್ ಸಂಘಟನೆಗೆ ಕದ್ರಿ ಅಭಿಷೇಕ ಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಚಾಲನೆ ನೀಡಿದರು. ಮೋದಿ ಬ್ರಿಗೇಡ್ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಬಾಕಿ ಇದೆ. ಮೋದಿ ಅವರ ಸಾಧನೆಯನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಆಗಬೇಕು. ಮೋದಿ ಪ್ರಧಾನಿಯಾಗದಂತೆ ತಡೆಯುವ ಎಲ್ಲ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪಪ್ರಚಾರಗಳಿಗೆ ಕಿವಿಗೊಡದೆ ಮೋದಿ ಆಡಳಿತ ಮತ್ತೊಮ್ಮೆ ದೇಶಕ್ಕೆ ಅಗತ್ಯ ಎಂಬುದನ್ನು ಮನಗಂಡು ಮನಃಪೂರ್ವಕ ದುಡಿಯಯಬೇಕು ಎಂದರು. ದೇಶದಲ್ಲಿ ಧರ್ಮ ಒಡೆಯುವ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ಎಲ್ಲ ಹಿಂದುಗಳು ಜಾಗೃತರಾಗಿರಬೇಕು. ಕ್ಷುಲ್ಲಕ ಕಾರಣಕ್ಕೆ ವೈಮಸ್ಸು ತಾಳದೆ, ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ತಲೆಬಾಗದೆ ಹಿಂದು ಸಮಾಜದ ಅಖಂಡತೆ ಹಾಗೂ ದೇಶದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಮೋದಿ ಮತ್ತೊಮ್ಮೆ ಎಂಬ ಭಾವನೆಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಉದ್ಘಾಟಿಸಿ ಮಾತನಾಡಿ, ಮೋದಿಯನ್ನು ಕೆಳಗಿಳಿಸಲು ದೇಶದ್ರೋಹಿಗಳು ಪ್ರಯತ್ನಿಸುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಯಾವುದೇ ಹಗರಣ ಇಲ್ಲದೆ ದೇಶವನ್ನು ಆಳಿದ ಪ್ರಧಾನಿ ನರೇಂದ್ರ ಮೋದಿ. ಮೋದಿ ಮತ್ತೊಮ್ಮೆ ಪ್ರಧಾನಿಗಾಗಿ ಪ್ರತಿ ಬೂತ್‌ಗಳಲ್ಲಿ ರಾಷ್ಟ್ರ ಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕು ಎಂದರು. ಶ್ರೀನವಾಕ್ಷರಿ ಬಾರ್ಕೂರಿನ ದಾಮೋದರ ಶಾಸ್ತ್ರಿ ದಿಕ್ಸೂಚಿ ಭಾಷಣದಲ್ಲಿ, ಮೋದಿ ಬ್ರಿಗೇಡ್ ಹೆಸರಿನಲ್ಲಿ ರಾಷ್ಟ್ರ ನಾಯಕನ ಆಯ್ಕೆಗೆ ಮುಂದಾಗಬೇಕು. ಮುಂದೆ ಮೋದಿ ಪ್ರಧಾನಿಯಾಗದಿದ್ದರೆ ದೇಶಕ್ಕೆ ದೊಡ್ಡ ನಷ್ಟವಾಗಲಿದೆ ಎಂದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ವಿಪಕ್ಷಗಳ ಮೋದಿ ವಿರೋಧಿ ನಡವಳಿಕೆಯನ್ನು ಎಲ್ಲರೂ ಸೇರಿ ಹಿಮ್ಮೆಟ್ಟಿಸಬೇಕಾಗಿದೆ ಎಂದರು. ಮೋದಿ ಬ್ರಿಗೇಡ್ ಮುಖ್ಯಸ್ಥ ಪ್ರಶಾಂತ್ ಬಂಗೇರ, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರೇಮ್ ಪೊಳಲಿ, ಧರ್ಮೇಂದ್ರ, ಲೋಕೇಶ್ ರಾವ್, ಪುಷ್ಪಾ ಅಮಿತ್‌ರಾಜ್ ಇದ್ದರು.