ದೇಶದಲ್ಲಿ ಬದಲಾವಣೆ ತಂದ ಪ್ರಧಾನಿ । ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ದೆಹಲಿ ದರ್ಬಾರ್ ಕಾಯಕ ಸಂಸ್ಕೃತಿಯನ್ನೇ ಪ್ರಧಾನಿ ನರೇಂದ್ರ ಮೋದಿ ಕಳೆದ 11 ವರ್ಷದಲ್ಲಿ ಬದಲಾಯಿಸಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆದ್ಯತೆಯಾಗಿದ್ದ ರೋಟಿ, ಕಪಡಾ, ಮಖಾನ್‌ಗಿಂತಲೂ ಮುಂದೆ ಹೋಗಿ, ಬದಲಾವಣೆಯನ್ನು ತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ, ಕೃಷಿ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಶಸ್ತ್ರಾಸ್ತ್ರ, ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಜಾಗತಿಕ ಶಕ್ತಿಯಾಗಿ ರೂಪಿಸುವಲ್ಲಿ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸುತ್ತಿದ್ದಾರೆ ಎಂದರು.ವಿಕಸಿತ ಭಾರತ, ವಿಶ್ವ ಮಿತ್ರ ಭಾರತ, ವಿಶ್ವ ಗುರು ಭಾರತವಾಗುವುದು ನಮ್ಮ ಮುಂದಿನ ಸಂಕಲ್ಪವಾಗಿದೆ. ಜಿಎಸ್‌ಟಿ ಪರಿಚಯಿಸುವ ಮೂಲಕ ವಾರ್ಷಿಕ 10 ಲಕ್ಷ ಕೋಟಿಗೂ ಅದಿಕ ತೆರಿಗೆ ಸಂಗ್ರಹಿಸಲಾಗುತ್ತಿದೆ. ತೆರಿಗೆ ವಂಚನೆ ಮಾಡಿ ಮಹಾರಾಜರಂತೆ ಮೆರೆಯುತ್ತಿದ್ದಂತಹವರು ಈಗ ತೆರಿಗೆ ಹಣವನ್ನು ಕಟ್ಟುವಂತಹ ಅನಿವಾರ್ಯತೆ ತಂದಿದ್ದೇವೆ ಎಂದು ಹೇಳಿದರು.
ನೆಹರು ಶಿಲಾನ್ಯಾಸ ಮಾಡಿದ್ದನ್ನು ರಾಜೀವ್ ಗಾಂಧಿ ಉದ್ಘಾಟನೆ ಮಾಡುತ್ತಿದ್ದಂತಹ ಕಾಲವೂ ಹಿಂದೆ ಇತ್ತು. ಒಂದು ಕಾಮಗಾರಿ ಮುಗಿಯಲು ಮೂರು ತಲೆಮಾರುವರೆಗೂ ಕಾಯಬೇಕಾಗಿತ್ತು. ಈಗ ಕಾಲ ಮಿತಿಯಲ್ಲೇ ಯೋಜನೆಗಳು ಪೂರ್ಣಗೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಶಂಕು ಸ್ಥಾಪನೆ ನೆರವೇರಿಸಿ, ಉದ್ಘಾಟನೆ ಮಾಡುವಷ್ಟರ ಮಟ್ಟಿಗೆ ದೇಶವು ತೀವ್ರತೆ ಪಡೆದಿದೆ ಎಂದರು.
ಸ್ವಜನಪಕ್ಷಪಾತಿ ಸಿದ್ದರಾಮಯ್ಯ ಮಾರ್ಕ್ಸ್ ಕೊಡ್ತಾರಂತೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶೂನ್ಯ ಅಂಕ ಎಂದು ಹೇಳಿದ್ದಾರೆ. ಆದರೆ, ದೇಶದ ಜನತೆ ಮೋದಿ ಸರ್ಕಾರಕ್ಕೆ ಔಟ್ ಆಫ್ ಹಂಡ್ರೆಡ್ ಮಾರ್ಕ್ಸ್ ಗಳನ್ನು ಕೊಟ್ಟಿದ್ದಾರೆ ಎಂದರು.