ತ್ವರಿತ ನೀರಾವರಿ ಪ್ರೋತ್ಸಾಹ ಯೋಜನೆಗೆ ಮೋದಿ ನಿರುತ್ಸಾಹ: ರಾಯರಡ್ಡಿ

KannadaprabhaNewsNetwork |  
Published : Apr 22, 2024, 02:15 AM IST
21ಕೆಕೆಆರ್1:ಕುಕನೂರು ತಾಲೂಕಿನ ಹಿರೇಬೀಡಿನಾಳ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಸಾರ್ವಜನಿಕ ಸಭೆಯನ್ನೂದ್ದೇಶಿಸಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಗತಿಯಲ್ಲಿರುವ ನೀರಾವರಿ ಯೋಜನೆಗೆ ಕಳೆದ ಹತ್ತು ವರ್ಷಗಳಿಂದ ಮೋದಿ ಸರ್ಕಾರದಿಂದ ಕೊಕ್ಕೆ ಬಿದ್ದಿದೆ.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಟೀಕೆ । ಪ್ರಧಾನಿ ಮೋದಿಯಲ್ಲಿ ಡೋಂಗಿತನ ಹೆಚ್ಚುಕನ್ನಡಪ್ರಭ ವಾರ್ತೆ ಕುಕನೂರು

ಈ ಹಿಂದೆ ಜಾರಿಗೆಯಲ್ಲಿದ್ದ ತ್ವರಿತ ನೀರಾವರಿ ಪ್ರೋತ್ಸಾಹ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರುತ್ಸಾಹ ತೋರಿಸಿದೆ. ಪ್ರಗತಿಯಲ್ಲಿರುವ ನೀರಾವರಿ ಯೋಜನೆಗೆ ಕಳೆದ ಹತ್ತು ವರ್ಷಗಳಿಂದ ಮೋದಿ ಸರ್ಕಾರದಿಂದ ಕೊಕ್ಕೆ ಬಿದ್ದಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆರೋಪಿಸಿದರು.

ತಾಲೂಕಿನ ಹಿರೇಬೀಡಿನಾಳ ಗ್ರಾಮದಲ್ಲಿ ಜರುಗಿದ ಲೋಕಸಭಾ ಚುನಾವಣೆ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಮೋದಿ ಸರ್ಕಾರ ನೀಡುತ್ತಿಲ್ಲ. ಇದರಿಂದ ಯೋಜನೆ ಸ್ಥಗಿತವಾಗಿವೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತ ಅವಧಿಯಲ್ಲಿ ಒಂದು ಎಕರೆ ಸಹ ನೀರಾವರಿ ಮಾಡಿಲ್ಲ. ಒಂದು ಡ್ಯಾಂ ಸಹ ಕಟ್ಟಿಲ್ಲ. ಆದರೆ ಈ ಹಿಂದೆ ಮಾಜಿ ಪ್ರಧಾನಿ ವಾಜಪೇಯಿ ಈ ಯೋಜನೆಗೆ ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿದರು.

ಭ್ರಷ್ಟಾಚಾರಕ್ಕೆ ಬಿದ್ದಿಲ್ಲ ಕಡಿವಾಣ:

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಬಿಜೆಪಿಗೆ ಸೇರಿದರೆ ಭ್ರಷ್ಟಾಚಾರಿಗಳಿಗೆ ಕ್ಲೀನ್‌ಚಿಟ್ ಸಿಗುತ್ತದೆ ಎಂದು ದೂರಿದರು.

ಸಹಕಾರಿ ಭಾರತಿಯಲ್ಲಿ ಆರ್.ಎಸ್.ಎಸ್.ನವರನ್ನು ಸೇರಿಸಿ ಅದರ ಮೂಲ ಉದ್ದೇಶಕ್ಕೆ ಈ ಮೋದಿ ಸರ್ಕಾರ ಕತ್ತರಿ ಹಾಕಿತು ಎಂದರು.

ರಾಮ, ಸೀತೆ, ತಿಲಕ, ಜಾತಿ ಹೆಸರಿನಲ್ಲಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ತತ್ವಗಳು ಮಾಯವಾಗುತ್ತಿವೆ. ಮೌಢ್ಯ ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.

ಪ್ರಮುಖರಾದ ಸಕ್ರಪ್ಪ ಚೌಡ್ಕಿ, ಅಶೋಕ ತೋಟದ, ಸುತ್ತಮುತ್ತಲಿನ ನಾನಾ ಗ್ರಾಮಸ್ಥರು ಇದ್ದರು. ಇದೇ ವೇಳೆ ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು.

ಈಗ ಆಹಾರದ ಕೊರತೆ ಇಲ್ಲ:

ಸಿಎಂ ಸಿದ್ದರಾಮಯ್ಯ 2013, ಮೇ 13ರಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಇದನ್ನು ನೋಡಿ ಆಗಿನ ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ 2013 ಜೂನ್‌ನಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಇಡೀ ರಾಷ್ಟ್ರಕ್ಕೆ ಜಾರಿಗೆ ತಂದರು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ ರಾಜ್ಯಗಳಿಗೆ ಕೊರತೆ ಆಗದಂತೆ ವಿತರಿಸುವ ಯೋಜನೆ ಈ ಕಾಯ್ದೆಯದ್ದಾಗಿದೆ. ಅನ್ನಭಾಗ್ಯಕ್ಕೂ ಮೊದಲು ಜನರು ಆಹಾರದ ಕೊರತೆಯಿಂದ ಭಿಕ್ಷೆ ಬೇಡುವುದು ಕಂಡು ಬರುತ್ತಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು ಅಕ್ಕಿ ಉಚಿತ ನೀಡುತ್ತಿರುವುದರಿಂದ ಈಗ ಆಹಾರದ ಕೊರತೆ ಯಾರಿಗೂ ಇಲ್ಲ. ಹಸಿವಿನಿಂದ ಯಾರೂ ಬಳಲುತ್ತಿಲ್ಲ. ರಾಜ್ಯದಲ್ಲಿ 4 ಕೋಟಿ 37 ಲಕ್ಷ ಜನರಿಗೆ ಕಾಂಗ್ರೆಸ್ ಸರ್ಕಾರ ಆಹಾರ ಧಾನ್ಯ ನೀಡುತ್ತಿದೆ ಎಂದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್