ಮೋದಿ ಗ್ಯಾರಂಟಿ, ಗ್ಯಾರಂಟಿಗಳ ಗ್ಯಾರಂಟಿ: ಮಹಾ ಡಿಸಿಎಂ ಫಡ್ನವಿಸ್‌

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ನಡೆದದ್ದು ಟ್ರೈಲರ್‌, ಪಿಕ್ಟರ್‌ ಇನ್ನೂ ಬಾಕಿ ಇದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ 10 ವರ್ಷ ಕಾಲ ದೇಶವನ್ನು ಆಳುತ್ತಾರೆ ಎಂಬ ಆಶಾಭಾವವನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸುವ ಚುನಾವಣೆ. ನಾವು ಸರ್ಕಾರಗಳನ್ನು ಐದು ವರ್ಷಗಳಿಗೊಮ್ಮೆ ಚುನಾಯಿಸುತ್ತೇವೆ. ಆದರೆ ಮೋದಿ 10 ವರ್ಷಗಳಲ್ಲಿ ನೂರು ವರ್ಷದ ಕೆಲಸ ಮಾಡಿದ್ದಾರೆ. ಮೋದಿ ಗ್ಯಾರಂಟಿ ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳು ಯಾವುದೂ ಪೂರ್ಣವಾಗಿಲ್ಲ. ಜನರನ್ನು ಮೂರ್ಖರನ್ನಾಗಿ ಮಾಡಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೋದಿ ಗ್ಯಾರಂಟಿ ಎನ್ನುವುದೇ ಗ್ಯಾರಂಟಿಗಳ ಗ್ಯಾರಂಟಿ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಬಣ್ಣಿಸಿದ್ದಾರೆ.

ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳವಾರ ದ.ಕ.ಜಿಲ್ಲಾ ಮಟ್ಟದ ಬಿಜೆಪಿ ಬೂತ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರ ಟ್ರ್ಯಾಕ್‌ ರೆಕಾರ್ಡ್ ನೋಡಿದ್ರೆದರೆ ಗೊತ್ತಾಗುತ್ತದೆ, ಕೋಟ್ಯಂತರ ಜನರಿಗೆ ನೀರು, ವಿದ್ಯುತ್, ಶೌಚಾಲಯ ಸಿಕ್ಕಿದೆ. ಮೋದಿಯವರ ಯೋಜನೆ ಪಡೆದುಕೊಳ್ಳಲು ಯಾರಿಗೂ ಒಂದು ರುಪಾಯಿ ಕೊಡೋದು ಬೇಡ. ಹಿಂದೆ ಪ್ರಧಾನಿ ರಾಜೀವ್‌ ಗಾಂಧಿಯೇ ಕೇಂದ್ರದಿಂದ ನೀಡುವ ಒಂದು ರುಪಾಯಿ ಕೊನೆಯ ಫಲಾನುಭವಿಗೆ ತಲುಪುವಾಗ 15 ಪೈಸೆ ಆಗಿರುತ್ತದೆ, ಉಳಿದ 85 ಪೈಸೆ ಭ್ರಷ್ಟಾಚಾರಿಗಳ ಪಾಲಾಗುತ್ತದೆ ಎಂದಿದ್ದರು. ಆದರೆ ಈಗ ಕೇಂದ್ರ ಸರ್ಕಾರ ನೀಡುವ ಒಂದು ರುಪಾಯಿ ಕೂಡ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತದೆ. ಅಷ್ಟರ ಮಟ್ಟಿಗೆ ಭ್ರಷ್ಟಾಚಾರ ನಿಯಂತ್ರಣವಾಗಿದೆ ಎಂದರು.

ಸೋಮವಾರ ಮೋದಿ ಅವರು ಒಂದು ಮಿಸೈಲ್ ಬಗ್ಗೆ ಟ್ವೀಟ್ ಮಾಡಿದ್ದರು. ಹಾಗಾದರೆ ಆ ಕ್ಷಿಪಣಿಯಿಂದ ನಮಗೆ ಏನು ಲಾಭ ಎಂದು ಕೆಲವರು ಕೇಳಬಹುದು. ಆದರೆ ಭಾರತದ ಸಾಮರ್ಥ್ಯವನ್ನು ಬೇರೆ ದೇಶಗಳ ಎದುರು ನಾವು ತೋರಿಸುತ್ತೇವೆ. ಜಗತ್ತಿನಲ್ಲಿ ಚೀನಾ, ಅಮೆರಿಕ ದೇಶಗಳಿಗೆ ಸರಿಸಮಾನವಾಗಿ ಭಾರತ ಶಕ್ತಿಯುತ ರಾಷ್ಟ್ರವಾಗಿದೆ ಎಂದರು.ಕರ್ನಾಟಕದಲ್ಲಿ ದೇಶ ವಿರೋಧಿ ಜನರಿಗೆ ಸಿದ್ದರಾಮಯ್ಯ ಸರ್ಕಾರ ಬೆಂಬಲ ಕೊಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಬೆಂಬಲಿಸುವ ಸರ್ಕಾರ ಎಂಥದ್ದು? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೇಶವಿರೋಧಿಗಳಿಗೆ ಬಲ ಬಂದಿದೆ ಎಂದು ಅವರು ಆರೋಪಿಸಿದರು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿದೆ. ನಾವು ಬಿಜೆಪಿಗೆ ಮತ ನೀಡುತ್ತಿಲ್ಲ, ಭಾರತಕ್ಕಾಗಿ ಮತ ಚಲಾಯಿಸುತ್ತೇವೆ ಎಂದು ನೆನಪಿರಬೇಕು. ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ಉತ್ತರ ಕೊಡಬೇಕಿದೆ. ಬೂತ್ ಮಟ್ಟದಲ್ಲಿ ನಾವು ಪಕ್ಷವನ್ನು ಗಟ್ಟಿ ಮಾಡಬೇಕು. ಪ್ರತಿ ಬೂತ್‌ಗಳಲ್ಲಿ ಮೋದಿ ಸರ್ಕಾರದ ಫಲಾನುಭವಿಗಳನ್ನು ಭೇಟಿ ಮಾಡಬೇಕು. ಕೇಂದ್ರದ ಫಲಾನುಭವ ಪಡೆದ ಅವರು ನಮಗೂ ಫಲ ನೀಡುವಂತೆ ಕೋರಿಕೊಳ್ಳಬೇಕು ಎಂದು ಹೊಗಳಿದರು. ನಮ್ಮ ಸ್ವಾಭಿಮಾನಕ್ಕಾದ ಅಪಮಾನದಿಂದ ಹೊರಬಂದು ರಾಮಮಂದಿರ ನಿರ್ಮಿಸಲಾಗಿದೆ. ನವ ಭಾರತ ನಿರ್ಮಿಸಲು ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ಹೀಗಾಗಿ ನಾವೆಲ್ಲ ಅವರ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಈ ಬಾರಿ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಸೋಲಬಾರದು. ಪ್ರಸಕ್ತ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಎಲ್ಲ ಕಡೆ ಮೋದಿ ಹವಾ ಇದೆ ಎಂದರು.

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಅಧ್ಯಕ್ಷತೆ ವಹಿಸಿದ್ದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್ ಪೂಂಜಾ, ಭಗೀರಥಿ ಮುರುಳ್ಯ, ಸಹ ಪ್ರಭಾರಿ ರಾಜೇಶ್‌ ಕಾವೇರಿ, ಜಿಲ್ಲಾ ಸಹ ಉಸ್ತುವಾರಿ ನಿತಿನ್‌ ಕುಮಾರ್‌, ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್‌ ಚೌಟ, ಜಿಲ್ಲಾ ಕಾರ್ಯದರ್ಶಿ ಯತೀಶ್‌ ಅರುವಾರ್‌, ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್‌ ಮತ್ತಿತರರಿದ್ದರು.

ದೇಶದ್ರೋಹಿಗಳ ಬೆಂಬಲಿಸ ಬೇಡಿ

ಸಮಾವೇಶ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಜನರಿಗೆ ನರೇಂದ್ರ ಮೋದಿ ಗ್ಯಾರಂಟಿ ಮೇಲೆ ಮಾತ್ರ ವಿಶ್ವಾಸವಿದೆ. ಹೀಗಾಗಿ ರಾಜ್ಯದ ಜನತೆ ನರೇಂದ್ರ ಮೋದಿ ಜೊತೆಗಿದೆ. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಲ್ಲ ರಾಜ್ಯಗಳು ಬೆಂಬಲ ಕೊಡಲಿದೆ. ವೋಟ್ ಬ್ಯಾಂಕ್‌ಗಾಗಿ ದೇಶದ್ರೋಹಿಗಳನ್ನು ಯಾರೂ ಬೆಂಬಲಿಸಬಾರದು. ಯಾವುದೇ ದೇಶ ವಿರೋಧಿ ಘಟನೆಗಳನ್ನು ಆಯಾ ಸರ್ಕಾರಗಳು ಖಂಡಿಸಬೇಕು ಎಂದರು.

ಹರ್ಯಾಣ ಸಿಎಂ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಇಂಥದ್ದು ಆಗುತ್ತದೆ, ಅದೇನು ದೊಡ್ಡ ವಿಚಾರವಲ್ಲ ಎಂದರು. ಲೋಕಸಭಾ ಚುನಾವಣೆಗೆ ಟಿಕೆಟ್ ವಿಚಾರದಲ್ಲಿ ಚರ್ಚಿಸಿ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. 10 ವರ್ಷ ಟ್ರೈಲರ್‌, ಪಿಕ್ಚರ್‌ ಅಭಿ ಬಾಕಿ ಹೈ!

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ನಡೆದದ್ದು ಟ್ರೈಲರ್‌, ಪಿಕ್ಟರ್‌ ಇನ್ನೂ ಬಾಕಿ ಇದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ 10 ವರ್ಷ ಕಾಲ ದೇಶವನ್ನು ಆಳುತ್ತಾರೆ ಎಂಬ ಆಶಾಭಾವವನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ವ್ಯಕ್ತಪಡಿಸಿದರು.

2024ರಿಂದ 2029ರ ವರೆಗೂ ಮೋದಿಯೇ ರಾಷ್ಟ್ರದ ನಾಯಕ. ಕಳೆದ 10 ವರ್ಷದ ಅವಧಿಯಲ್ಲಿ ನೂರು ವರ್ಷದ ಸಾಧನೆ ಮಾಡಿದ್ದಾರೆ. ಮುಂದೆ ವಿಶ್ವದಲ್ಲಿ ಭಾರತ ಮೂರನೇ ಆರ್ಥಿಕತೆ ಹೊಂದಿದ ದೇಶವಾಗಲಿದೆ ಎಂದು ಡಿಸಿಎಂ ಫಡ್ನವಿಸ್‌ ಅವರು ಮೋದಿ ಆಡಳಿತವನ್ನು ಬಣ್ಣಿಸಿದರು.

Share this article