ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗೆ ಶಕ್ತಿ ತುಂಬಿದ್ದೇ ಮೋದಿ

KannadaprabhaNewsNetwork | Published : May 6, 2024 12:33 AM

ಸಾರಾಂಶ

ದೇಶಾದ್ಯಂತ ಬ್ರಿಟಿಷರ ಅವಧಿಯಲ್ಲಿ ಸ್ಥಾಪಿತವಾದ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು, ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬರಲು ಕಾಂಗ್ರೆಸ್‌ ಪ್ರಮುಖ ಕಾರಣ‍. ಕಾರ್ಮಿಕರಿಗೆ ಸಂಬಳ ಕೊಡಲೂ ಆಗದಂತೆ ನಷ್ಟದ ಹಾದಿಗೆ ತಂದ ಕೀರ್ತಿ ಕಾಂಗ್ರೆಸ್‌ ಸರ್ಕಾರಗಳಿಗೆ ಸಲ್ಲುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ಟೀಕಿಸಿದ್ದಾರೆ.

- ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವಿವಿಧೆಡೆ ಪ್ರಚಾರ ಸಭೆ । ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

- - - - ಸಂಬಳ ನೀಡದೇ ಕಂಪನಿ, ಕಾರ್ಖಾನೆ ಮುಚ್ಚುವಂತೆ ಮಾಡಿದ್ದ ಕಾಂಗ್ರೆಸ್‌

- ಪ್ರಿಯಾಂಕಾ ಗಾಂಧಿ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಟಾಂಗ್‌ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ದೇಶಾದ್ಯಂತ ಬ್ರಿಟಿಷರ ಅವಧಿಯಲ್ಲಿ ಸ್ಥಾಪಿತವಾದ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು, ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬರಲು ಕಾಂಗ್ರೆಸ್‌ ಪ್ರಮುಖ ಕಾರಣ‍. ಕಾರ್ಮಿಕರಿಗೆ ಸಂಬಳ ಕೊಡಲೂ ಆಗದಂತೆ ನಷ್ಟದ ಹಾದಿಗೆ ತಂದ ಕೀರ್ತಿ ಕಾಂಗ್ರೆಸ್‌ ಸರ್ಕಾರಗಳಿಗೆ ಸಲ್ಲುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ಟೀಕಿಸಿದರು.

ನಗರದಲ್ಲಿ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಭಾನುವಾರ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವಿವಿಧೆಡೆ ಪ್ರಚಾರ ಸಭೆ ನಡೆಸಿ, ಮತಯಾಚಿಸಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ದಾವಣಗೆರೆಯಲ್ಲಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದರು. ಆರ್ಥಿಕವಾಗಿ ನೆಲಕಚ್ಚಿದ್ದ ಹಲವಾರು ಸಾರ್ವಜನಿಕ ಸ್ವಾಮ್ಯದ ಉದ್ದಮೆಗಳಿಗೆ ಪುನಶ್ಚೇತನ ನೀಡಿದ್ದು ಮೋದಿ ಆಡಳಿತ ಎಂದರು.

ಮೋದಿ ಅಧಿಕಾರಕ್ಕೆ ಬಂದ ನಂತರ ಗೇಲ್ ಇಂಡಿಯಾ ಕಂಪನಿ, ಬಿಎಚ್‌ಇಎಲ್‌, ಭಾರತ್ ಎಲೆಕ್ಟ್ರಾನಿಕ್ಸ್‌, ಕೋಲ್ ಇಂಡಿಯಾ, ಹಿಂದುಸ್ಥಾನ ಏರೋನಾಟಿಕ್ಸ್ ಸೇರಿದಂತೆ ಹಲವಾರು ಉದ್ದಿಮೆಗಳು ಲಾಭದತ್ತ ಮುಖ ಮಾಡಿವೆ. ಇದಕ್ಕೆ ನರೇಂದ್ರ ಮೋದಿ ಅಳವಡಿಸಿಕೊಂಡ ಆತ್ಮನಿರ್ಭರ ಭಾರತ ಯೋಜನೆ ಕಾರಣ. ಆತ್ಮನಿರ್ಭರ ಮೂಲಕ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದೆ. ಭಾರತವೂ ಈಗ ಸೆಮಿ ಕಂಡಕ್ಟರ್ ಉತ್ಪಾಟನೆ ಬಗ್ಗೆ ಆಲೋಚಿಸುತ್ತಿದೆ. ಅಭಿವೃದ್ಧಿಯೆಂದರೆ ಇದಲ್ಲದೇ ಮತ್ತೇನು? ಎಂದರು.

2004 ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ನಿತ್ಯ ಯಾವ ಸುದ್ದಿಗಳು ಪತ್ರಿಕೆಗಳು ಮುಖಪುಟದಲ್ಲಿ ಇರುತ್ತಿದ್ದವು ಎಂಬುದನ್ನು ಪ್ರಿಯಾಂಕಾ ಗಾಂಧಿ ನೆನಪು ಮಾಡಿಕೊಳ್ಳಬೇಕು. ದೇಶದ ವಿವಿಧೆಡೆ ಬಾಂಬ್ ಸ್ಫೋಟ, ಅಮಾಯಕರ ಸಾವು, ಭ್ರಷ್ಟಾಚಾರ, ಸೈನಿಕರ ಮೇಲೆ ದಾಳಿ, ಭಯೋತ್ಪಾದಕರ ಅಟ್ಟಹಾಸ, 2ಜಿ ತರಂಗಾಂತರ ಹಗರಣ, ಕಾಮನ್ ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ, ಸತ್ಯಂ ಹಗರಣ, ಐಪಿಎಲ್ ಹಗರಣ ಒಂದಾ ಎರಡಾ ಎಂದು ಕುಟುಕಿದರು.

ನರೇಂದ್ರ ಮೋದಿ 10 ವರ್ಷದಲ್ಲೇ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡುತ್ತಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದಾರೆ. 10 ವರ್ಷದಲ್ಲಿ ಮೋದಿ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆಂದರೆ, 60 ವರ್ಷ ದೇಶ ಆಳಿದ ಕಾಂಗ್ರೆಸ್ ಗೆ ಇದೆಲ್ಲಾ ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಚಿತ್ರ ನಟಿ, ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ವಿಪ ವಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿ.ಎಸ್.ಜಗದೀಶ, ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಂ.ಪಿ. ಕೃಷ್ಣಮೂರ್ತಿ ಪವಾರ್, ಎಚ್.ಎನ್. ಶಿವಕುಮಾರ, ಕೆ.ಸಿ.ಗುರು, ಶಾಮನೂರು ಪ್ರವೀಣ, ಕೆ.ಪ್ರಸನ್ನಕುಮಾರ, ವೀಣಾ ನಂಜಪ್ಪ, ರೇಖಾ ಸುರೇಶ ಗಂಡಗಾಳೆ, ಜ್ಯೋತಿ ಸಿದ್ದೇಶ, ಡಿ.ಎಸ್.ಶಿವಶಂಕರ, ಶಿವನಗೌಡ ಪಾಟೀಲ, ತ್ಯಾವಣಿಗೆ ವೀರಭದ್ರಸ್ವಾಮಿ ಸೇರಿದಂತೆ ಸಾವಿರಾರು ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿದ್ದರು.

- - -

ಬಾಕ್ಸ್‌ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಾಮನೂರು ಅಡ್ಡಿ - ಜಿಲ್ಲಾಸ್ಪತ್ರೆ ಆದಾಯ ಮೇಲೆ ಎಸ್‌ಎಸ್‌ ಕುಟುಂಬದ ಕಣ್ಣು: ಗಾಯತ್ರಿ ಆರೋಪ ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಮನೂರು ಕುಟುಂಬವೇ ಅಡ್ಡಿಯಾಗಿದೆ. ಇಲ್ಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗದಂತೆ ಶಾಮನೂರು ಕುಟುಂಬ ನೋಡಿಕೊಳ್ಳುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಆರೋಪಿಸಿದರು.

ನಗರದಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ದಾವಣಗೆರೆಗೆ ಅಭಿವೃದ್ಧಿಗೆ ಅಡ್ಡಿಯಾಗಿರುವುದೇ ಶಾಮನೂರು ಕುಟುಂಬ. ಇದು ದಕ್ಷಿಣ ಸೇರಿದಂತೆ ಇಡೀ ಲೋಕಸಭಾ ಕ್ಷೇತ್ರದ ಜನತೆಗೂ ಗೊತ್ತಿರುವ ಸಂಗತಿ. ಸರ್ಕಾರಿ ವೈದ್ಯಕೀಯ ಕಾಲೇಜು ದಾವಣಗೆರೆಗೆ ಬಂದರೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಸಿಗುತ್ತಿರುವ ಕೋಟ್ಯಂತರ ರು. ಆದಾಯಕ್ಕೆ ಹೊಡೆತ ಬೀಳುತ್ತದೆಂಬ ಲೆಕ್ಕಾಚಾರದಿಂದಾಗಿಯೇ ಶಾಮನೂರು ಕುಟುಂಬ ಅಡ್ಡಿಪಡಿಸುತ್ತಿದೆ. ಜಿಲ್ಲಾಸ್ಪತ್ರೆಗೆ ನಮ್ಮ ಸರ್ಕಾರವಿದ್ದಾಗ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಮಂಜೂರು ಮಾಡಿದ್ದರೂ, ಅದನ್ನು ಶಾಮನೂರು ಕುಟುಂಬ ವ್ಯವಸ್ಥಿತ ವಾಗಿ ತಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಹಲವಾರು ಬಡರೋಗಿಗಳು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲು ದಾವಣಗೆರೆಯಲ್ಲಿ ವ್ಯವಸ್ಥೆ ಇಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಹೋಗುವ ದುಸ್ಥಿತಿ ಶಾಮನೂರು ಕುಟುಂಬ ತಂದೊಡ್ಡಿದೆ. ಇಂತಹ ಶಾಮನೂರು ಕುಟುಂಬದ ಅಭ್ಯರ್ಥಿಗೆ ತಿರಸ್ಕರಿಸುವ ಕೆಲಸ ಮತದಾರರು ಮತ್ತೆ ಮಾಡಬೇಕಿದೆ. ಬಿಜೆಪಿ ಅಭ್ಯರ್ಥಿಯಾದ ತಮಗೆ ಮತ ನೀಡಿ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಶಕ್ತಿ ತುಂಬಿ ಎಂದು ಗಾಯತ್ರಿ ಅವರು ಮನವಿ ಮಾಡಿದರು.

- - - ಕೋಟ್ಸ್ ದಾವಣಗೆರೆ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ 6 ಸಲ ಸತತವಾಗಿ ಬಿಜೆಪಿ ಗೆದ್ದಿದೆಯೆಂದರೆ ಅದು ಸುಮ್ಮನೆ ಅಲ್ಲ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮ, ಮತದಾರರ ಆಶೀರ್ವಾದ, ಸಿದ್ದೇಶ್ವರ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಗೆ ಶ್ರೀರಕ್ಷೆಯಾಗಿವೆ. ಈ ಸಲ ಗಾಯತ್ರಿ ಸಿದ್ದೇಶ್ವರರನ್ನು ನಾವೆಲ್ಲರೂ ಸೇರಿ, ಕನಿಷ್ಠ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸೋಣ

- ಎಸ್.ಎ.ರವೀಂದ್ರನಾಥ, ಮಾಜಿ ಸಚಿವ

- - -

ದೇಶದ ಜನತೆ ನರೇಂದ್ರ ಮೋದಿಯಂತಹ ನಾಯಕ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ. ಅಲ್ಲಿ ಮೋದಿ ಪ್ರಧಾನಿ ಆಗಬೇಕೆಂದರೆ ಇಲ್ಲಿ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ನಾನು ಹೆಚ್ಚಿನ ಮತಗಳ ಅಂತರದಲ್ಲಿ ಗೆದ್ದು ದೆಹಲಿಗೆ ಹೋಗಬೇಕು. ನೀವೆಲ್ಲರೂ ತಪ್ಪದೇ ನನ್ನ ಕ್ರಮ ಸಂಖ್ಯೆ-1, ಕಮಲದ ಗುರುತಿಗೆ ನೀವು ಮತ ಹಾಕಬೇಕು. ನಿಮ್ಮವರೆಲ್ಲರಿಂದಲೂ ನನಗೆ ಮತಗಳ ಹಾಕಿಸಬೇಕು

- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ

- - - ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ದೌರ್ಜನ್ಯದಿಂದ ಮತದಾರರು ಹೈರಾಣಾಗಿದ್ದಾರೆ. ಇಲ್ಲಿ ಸಿದ್ದೇಶಣ್ಣ ಸಂಸದರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಮ್ಮ ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು ಕೈಗೊಂಡ ಅಭಿವೃದ್ಧಿ ಕಾರ್ಯ, ಸಿದ್ದೇಶಣ್ಣನ ಜನಪರ, ಅಭಿವೃದ್ಧಿ ಕಾರ್ಯಗಳು ಗಾಯತ್ರಿ ಸಿದ್ದೇಶ್ವರರನ್ನು ದಾಖಲೆ ಅಂತರದಲ್ಲಿ ಗೆಲ್ಲಿಸುವುದು ನಿಶ್ಚಿತ

- ಮಾಳವಿಕ, ಬಿಜೆಪಿ ರಾಜ್ಯ ವಕ್ತಾರೆ

- - - -5ಕೆಡಿವಿಜಿ1, 2, 3, 4:

ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು.

Share this article