ಕನ್ನಡಪ್ರಭ ವಾರ್ತೆ ವಿಜಯಪುರ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ನಂತೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ದಮನಿಸುವ ಕೆಲಸ ಬಿಜೆಪಿ ಮಾಡಿಲ್ಲ. ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಏನಾದರೂ ಅಧಿಕಾರದಲ್ಲಿದ್ದರೆ ದೇಶದ ಪರಿಸ್ಥಿತಿ ಊಹಿಸಲು ಸಾಧ್ಯವಾಗಿರದಷ್ಟು ಕೆಟ್ಟಿರುತ್ತಿತ್ತು. ಅಂತಾರಾಷ್ಟ್ರೀಯ ಮಟ್ಟದ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ವೆಚ್ಚ ಕಡಿತದ ಜೊತೆಯಲ್ಲಿ ಪೆಟ್ರೋಲ್-ಡಿಸೇಲ್ ವಾಹನಗಳ ಬಳಕೆ ತಗ್ಗಿಸಲು ಮತ್ತು ಚಿನ್ನಾಭರಣ ಖರೀದಿ ಮಿತಗೊಳಿಸಲು ಕರೆ ನೀಡಿದ್ದಾರೆ ವಿನಃ ಕಾಂಗ್ರೆಸ್‌ನಂತೆ ದೇಶದ ಹೆಸರಲ್ಲಿ ಜನರ ಚಿನ್ನಾಭರಣ ಕಿತ್ತುಕೊಂಡಿಲ್ಲ ಎಂದರು.ದೇಶದ ಆರ್ಥಿಕತೆ ಕುಸಿದಿದೆ ಎಂದು ಕಾಂಗ್ರೆಸ್‌ನಂತೆ ಬಿಜೆಪಿ ಎಂದೂ ಕೈಚೆಲ್ಲಿ ಕುಳಿತಿಲ್ಲ. ತುರ್ತು ಪರಿಸ್ಥಿತಿ ಹೇರಿಲ್ಲ. ಭೀಕರ ಬರದಲ್ಲೂ ದೇಶದ ಹೆಸರಲ್ಲಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ. ದೇಣಿಗೆ ಕೇಳಿಲ್ಲ. ರಕ್ಷಣಾ ನಿಧಿ ಸಂಗ್ರಹಿಸಿಲ್ಲ. 1962ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ವಿವೇಚನಾ ರಹಿತ ನಿರ್ಧಾರದಿಂದಾಗಿ ಭಾರತ ಸೋಲುಕಂಡಿತ್ತು. ಪರಿಣಾಮ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ನಿಧಿ ಸಂಗ್ರಹಿಸಲು ಮುಂದಾಗಿತ್ತು.
1963ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ರಾಜ್ಯಾದ್ಯಂತ ಸಂಚರಿಸಿ ರಕ್ಷಣಾ ನಿಧಿ ಸಂಗ್ರಹಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಪರಿಣಾಮ ವಿಜಯಪುರದಲ್ಲಿ ಕೆ.ಬಿ.ಚೌಧರಿ ಸಂಸದರಾಗಿದ್ದಾಗ ವಿಜಯಪುರದಲ್ಲಿ ಜು.2ರಂದು ಇಂದಿರಾಗಾಂಧಿ ಹಾಗೂ ಎಸ್.ನಿಜಲಿಂಗಪ್ಪ ಅವರಿಗೆ ಜನ ಚಿನ್ನದಿಂದ ತುಲಾಭಾರ ನೆರವೇರಿಸಿದ್ದರು. ಆಗ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಆದರೂ ನಮ್ಮ ಜನ ಉದಾರ ಮನೋಭಾವದವರು. ದೇಶಕ್ಕಾಗಿ ಮೈಮೇಲಿನ ಚಿನ್ನಾಭರಣವನ್ನೇ ರಕ್ಷಣಾ ನಿಧಿಗೆ ಅರ್ಪಿಸಿದ್ದರು. ಆದರೆ, ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಂದ ನಯಾಪೈಸೆ ನಿಧಿ ಸಂಗ್ರಹಿಸಿಲ್ಲ ಎಂದು ಅವರು ದೂರಿದರು.ಪೆಟ್ರೋಲ್-ಡಿಸೇಲ್ ಕೊರತೆ ಉಂಟಾಗಿಲ್ಲ. ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿಲ್ಲ. ಎಂಥದ್ದೇ ಬಿಕ್ಕಟ್ಟು ಎದುರಾದರೂ ದೇಶವನ್ನು ಪ್ರಧಾನಿ ಮೋದಿಜಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ವಿನಃ ಜನರಿಗೆ ತೊಂದರೆಯಾಗಲು ಬಿಟ್ಟಿಲ್ಲ. ಕೊರೋನಾ ಸಂದರ್ಭದಲ್ಲಿ ಮೋದಿ ಬದಲು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ದೇಶಕ್ಕೆ ದೊಡ್ಡ ತೊಂದರೆಯಾಗುತ್ತಿತ್ತು. ಆದರೆ, ಮೋದಿಜಿ ಅಂತಹ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಿದರು, ಕೊರೊನಾ ವಿರುದ್ಧ ಜನತೆಯ ವಿಶ್ವಾಸದೊಂದಿಗೆ ಹೋರಾಡಿದರು ಎಂದು ಜಿಗಜಿಣಗಿ ಹೇಳಿದ್ದಾರೆ.
ಈಗ ಕೊಲ್ಲಿ ರಾಷ್ಟ್ರಗಳ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆನ್ನಿಗೆ ದೇಶದ ಜನ ನಿಲುತ್ತಿರುವುದನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮೋದಿ ಚಪ್ಪಾಳೆ ತಟ್ಟಿ, ಗಂಟೆ ಭಾರಿಸಿ ಎಂದಿದ್ದು ಕರೋನಾ ವಾರಿಯರ್ಸ್‌ರನ್ನು ಅಭಿನಂದಿಸುವುದಕ್ಕೋಸ್ಕರವೇ ವಿನಃ ಅಸಹಾಯಕತೆಯಿಂದಲ್ಲ. ಹಾಗೆ ಅಸಹಾಯಕತೆಯಿಂದ ಜನರಿಂದ ಚಿನ್ನದ ತುಲಾಭಾರ ನೆರವೇರಿಸಿಕೊಳ್ಳಲು. ರಕ್ಷಣಾ ನಿಧಿ ಸಂಗ್ರಹಿಸಲು ಇದು ಅಸಮರ್ಥ ಕಾಂಗ್ರೆಸ್ ಆಡಳಿತಾವಧಿಯಲ್ಲ. ಬದಲಾಗಿ ಸದೃಢ ಭಾರತದ ಸದೃಢ ನಾಯಕ ಮೋದಿ ಆಡಳಿತ ಎಂಬುದು ನೆನಪಿರಲಿ.