ಉಗ್ರಗಾಮಿಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಪ್ರಧಾನಮಂತ್ರಿಗಳು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು
ಹಾಸನ :ಪ್ರವಾಸಿಗರನ್ನು ನಿಷ್ಕರುಣೆಯಿಂದ ಹತ್ಯೆ ಮಾಡಿದಂತಹ ಉಗ್ರಗಾಮಿಗಳಿದ್ದಾರೋ ಅವರನ್ನ ಸಂಪೂರ್ಣವಾಗಿ ನಾಶ ಮಾಡುವವರೆಗೂ ಪ್ರಧಾನಮಂತ್ರಿಗಳು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಎಂದು ತಿಳಿಸಿದರು.
ತಾಲೂಕಿನ ದ್ಯಾಪಲಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಉದ್ಘಾಟನೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡಿ, ನಮ್ಮ ದೇಶದ ಕಾಶ್ಮೀರದಲ್ಲಿ 26 ಜನರನ್ನು ಹತ್ಯೆ ಮಾಡಿದ್ದಾರೆ. ಕಾಶ್ಮೀರವನ್ನು ಸ್ವರ್ಗಕ್ಕೆ ಸಮ ಎನ್ನುತ್ತಾರೆ. ಅಲ್ಲಿಗೆ ಹೋಗಿದ್ದ ಪ್ರವಾಸಿಗರನ್ನು ನಿಷ್ಕರುಣೆಯಿಂದ ಹತ್ಯೆ ಮಾಡಿದ್ದಾರೆ. ಅವರು ಎಲ್ಲೇ ಅಡಗಿದ್ದರೂ ಅವರನ್ನು ಹೊರತಂದು ಶಿಕ್ಷೆ ಕೊಡುವವರೆಗೆ ನಾನು ಬಿಡುವುದಿಲ್ಲ ಎಂದು ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ. ಪ್ರಧಾನಿ ರಷ್ಯಾ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ಪಾಕಿಸ್ತಾನದಿಂದ ಆಮದು ಆಗುತ್ತಿದ್ದ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇನ್ನೂ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ಪ್ರಧಾನಿ ಜೊತೆ ನಾವು ನಿಲ್ಲುತ್ತೇವೆ:
ರಾಷ್ಟ್ರದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ನೀಡಿದ್ದಾರೆ. ಪ್ರಧಾನಮಂತ್ರಿಗಳ ಜೊತೆ ನಾವು ನಿಲ್ಲುತ್ತೇವೆ. ಅತ್ಯಂತ ಹೇಯಕೃತ್ಯಕ್ಕೆ ಕೈಹಾಕಿದವರನ್ನು ನೆಲಸಮ ಮಾಡಲೇಬೇಕು ಎಂದು ಪ್ರಧಾನಿಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಅಂತಹ ಪ್ರಧಾನಮಂತ್ರಿಗಳಿಗೆ ಆ ಮಹಾನುಭಾವ ಆಂಜನೇಯಸ್ವಾಮಿ ಶಕ್ತಿ ನೀಡಲಿ ಎಂದ ಗೌಡರು, ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ಈಗ ನಾನು ಬೇರೆ ಏನೂ ಮಾತನಾಡಲ್ಲ. ಈ ಜಿಲ್ಲೆಗೆ ದೇವೇಗೌಡರು ಬರಲ್ಲ ಎಂದು ಯಾರೂ ತಿಳಿಯಬಾರದು. ನಾನು ಬರ್ತೇನೆ ಆಗ ರಾಜಕೀಯ ಮಾತನಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಹಾಸನ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪ್ರಕಾಶ್ ಈಗ ಇಲ್ಲ. ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿ ಈ ಕ್ಷೇತ್ರದಲ್ಲಿ ಒಂದು ಕೆಟ್ಟ ಹೆಸರು ಮಾಡದೇ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಮಾಜಿ ಶಾಸಕ ಪ್ರಕಾಶ್ ಲೂಟಿ ಮಾಡಿಲ್ಲ. ಪ್ರಕಾಶ್ ಆಸ್ತಿ ಎಷ್ಟಿದೆ, ಲೂಟಿಕೋರರ ಕೈಯಲ್ಲಿ ಜಿಲ್ಲೆ ಸೇರಿದೆ ಎಂದು ಪರೋಕ್ಷವಾಗಿ ಪ್ರೀತಂ ಜೆ. ಗೌಡ ಹೆಸರೇಳದೆ ಟೀಕೆ ಮಾಡಿದರು. 2004 -2005 ರಲ್ಲಿ ಈ ಗ್ರಾಮದಲ್ಲಿ ಅನಾಹುತವಾದಾಗ ನಾನು ವಸತಿ ಸಚಿವ ಹಾಗೂ ದೇವೇಗೌಡರು ಲೋಕಸಭಾ ಸದಸ್ಯರಾಗಿದ್ದರು. ಗ್ರಾಮದಲ್ಲಿ ಸುಮಾರು ೭೮ ಮನೆಗಳನ್ನು ಸರ್ಕಾರದ ಹಣದಲ್ಲಿ ನಾನು ಕಟ್ಟಿಸಿ ಕೊಟ್ಟಿದ್ದೇನೆ. ೧೦ ಮನೆಗಳನ್ನು ನಿಲ್ಲಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಹೊಳೆನರಸೀಪುರ ಗಿರಾಕಿಗೆ ಬಸವ ಜಯಂತಿಯಲ್ಲಿ ದೇವೇಗೌಡರು, ರೇವಣ್ಣನವರದ್ದು ಮುಗಿದು ಹೋಯಿತು ಅಂತಾ ಮೊನ್ನೆ ಹೇಳಿದ್ದಾರೆ. ಹೇಮಾವತಿ ನಾಲೆ ಮುಳುಗಡೆ ಒಳಗಾದ 48 ಗ್ರಾಮಗಳಿಗೆ ಕೋಟ್ಯಂತರ ಹಣ ಕೊಡಿಸಿದ್ದೇನೆ, ನನ್ನನು ಬಿಟ್ಟರೆ ಯಾರೂ ಕೂಡ ಆ ಕೆಲಸ ಮಾಡಿಕೊಟ್ಟಿಲ್ಲ ಎಂದು ಹೇಳಿಕೊಂಡರು.
ಕೆಲವು ಅಧಿಕಾರಿಗಳು ನಮ್ಮದು ಅಧಿಕಾರ ಮುಗಿದು ಹೋಗಿದೆ ಅಂತಾ ಭ್ರಮೆಯಲ್ಲಿ ಇದ್ದಾರೆ. ಅವರಿಗೆಲ್ಲ ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಎಚ್ಚರಿಸಿದರು. ಕೆಲವು ರಾಜಕಾರಣಿಗಳು ದೇವೇಗೌಡರು, ಕುಮಾರಸ್ವಾಮಿ, ರೇವಣ್ಣನನ್ನು ಮುಗಿಸಲು ಕಾಯುತ್ತಿದ್ದಾರೆ. ನಮ್ಮದೆಲ್ಲಾ ಮುಗಿದುಹೋಗಿದೆ ಅಂತಾ ತಿಳಿದುಕೊಂಡಿದ್ದಾರೆ. ನಾವು ೧೯೮೯ ಹಾಗೂ 1999 ರಲ್ಲಿ ಮುಗಿದ ಹೋದಂತಹ ಸಂದರ್ಭದಲ್ಲಿ ನಾವು ಕೇವಲ ಮೂರು ವರ್ಷಗಳಲ್ಲಿ 18 ಲೋಕಸಭೆ ಸದಸ್ಯ ಸ್ಥಾನ ಹಾಗೂ 180 ಶಾಸಕ ಸ್ಥಾನ ಗಳಿಸಿದ್ದೇವೆ ಎಂದು ಹೇಳಿದರು.
ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ:
ಹಾಸನ ಬೆಂಗಳೂರು ಮೈಸೂರು ರೈಲ್ವೆ ಮಾರ್ಗ ಮಾಡಿ ಸುಮಾರು 18 ರೈಲುಗಳು ಒಡಾಡುತ್ತಿದೆ. ದೇವೇಗೌಡರು ಪ್ರಧಾನಿಯಾಗದೆ ಹೋಗಿದ್ದರೆ ಹಾಸನ ಮೈಸೂರು ರೈಲ್ವೆ ಮಾರ್ಗ ಆಗುತ್ತಿರಲಿಲ್ಲ. ಹಾಸನ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಎರಡು ಪ್ರಥಮ ದರ್ಜೆ ಮಹಿಳಾ ಕಾಲೇಜು, ನರ್ಸಿಂಗ್ ಕಾಲೇಜು ಸೇರಿ ಹಾಸನ ಜಿಲ್ಲೆಗೆ ಸುಮಾರು ೫ ಸಾವಿರ ಕೋಟಿ ಹಣವನ್ನು ಶಿಕ್ಷಣಕ್ಕೆ ಕೊಟ್ಟಿದೆ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ600 ಪಿಯು ಕಾಲೇಜು, 275 ಪ್ರಥಮ ದರ್ಜೆ ಕಾಲೇಜುಗಳನ್ನು ನಿರ್ಮಾಣ ಮಾಡಿದ್ದಾರೆ. ಹಾಸನ ಜಿಲ್ಲೆಯ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ಕುರುಬ ಸಮಾಜ ವೀರಶೈವ ಸಮಾಜಕ್ಕೆ ರಾಜಕೀಯ ಅವಕಾಶ ನೀಡಿದ್ದೇನೆ ಎಂದರು.
ಮೈಸೂರು ಬಿಳಿಕೆರೆ ಮಾರ್ಗ ರಸ್ತೆ ಮಾಡಲು ೨೫೦೦ ಕೋಟಿ ಹಣವನ್ನು ದೇವೇಗೌಡರು ರಸ್ತೆಗೆ ಕೊಡಿಸಿದ್ದಾರೆ. ಹಾಸನ ಜಿಲ್ಲೆಯ ಡೇರಿ 3 ಸಾವಿರ ಕೋಟಿ ಬಂಡವಾಳ ಇದೆ. ಮೊದಲು ಕೇವಲ 8 ಕೋಟಿ ಮಾತ್ರ ಬಂಡವಾಳ ಡೇರಿಯಲ್ಲಿ ಇತ್ತು. ಬೆಳಿಗ್ಗೆ ಎದ್ದರೆ ರೈತರ ಬಗ್ಗೆ ಯೋಚಿಸುವ ದೇವೇಗೌಡರು ಹಾಸನ ಜಿಲ್ಲೆಗೆ ಕೆಲಸ ಮಾಡಿಸುವ ಬಗ್ಗೆ ದಿನದ ೨೪ ಗಂಟೆ ಯೋಚನೆ ಮಾಡುತ್ತಾರೆ ಎಂದು ಹೇಳಿದರು.
ಎನ್‌ಡಿಎಗೆ ನಮ್ಮ ಬೆಂಬಲ:
ರಾಷ್ಟ್ರದಲ್ಲಿ ಮೋದಿ ಸರ್ಕಾರ ಇದೆ. ದೇಶ ಉಳಿಯಲು ಮೋದಿಯವರು ಇರಬೇಕು. ವೈಯಕ್ತಿಕವಾಗಿ ಅವರ ಬಗ್ಗೆ ನಮಗೆ ಗೌರವ ಇದೆ. ನಮ್ಮ ಪೂರ್ತಿ ಬೆಂಬಲ ಎನ್‌ಡಿಎಗೆ ಕೊಡುತ್ತೇವೆ. ಜಿಲ್ಲೆಯ ಕಥೆ ನಮಗೆ ಬೇಡ ಎಂದು ಹೇಳಿದರು, ಕಳೆದ 1 ವರ್ಷದಲ್ಲಿ ಹಾಸನ ಜಿಲ್ಲೆಯ ಬಿಜೆಪಿ ನಾಯಕರ ಕಥೆ ಮುಂದೆ ಹೇಳುತ್ತೇನೆ ಎಂದು ಗೌಪ್ಯವಾಗಿ ಇಟ್ಟರು.
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ, ದ್ಯಾಪಲಪುರ ದೇವಾಲಯ ಕಟ್ಟಿದ್ದು ಯಾರು ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. 25 ವರ್ಷಗಳಿಂದ ಶಾಸಕರಾಗಿದ್ದ ಪ್ರಕಾಶ್. ರೇವಣ್ಣ ಹಾಗೂ ದೇವೇಗೌಡರಿಗೆ ಅಧಿಕಾರ ಸಿಕ್ಕಿರುವುದು ಕೇವಲ ನಾಲ್ಕು ವರ್ಷ ಮಾತ್ರ. ಆದರೂ ನಾವು ಹಾಸನ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಹಾಸನ ಜಿಲ್ಲೆಯ ರಸ್ತೆಗಳು ಪಕ್ಕದ ಜಿಲ್ಲೆಯ ರಸ್ತೆ, ಸರ್ಕಾರಿ ಕಟ್ಟಡ ಶಾಲೆ ಕಟ್ಟಡ ಇವುಗಳನ್ನು ವ್ಯತ್ಯಾಸ ನೋಡಿದರೆ ನಿಮಗೆ ಗೊತ್ತಾಗುತ್ತದೆ ಎಂದರು.
ಅನುದಾನ ನೀಡುತ್ತಿಲ್ಲ:
ಶಾಸಕ ಎಚ್.ಡಿ.ರೇವಣ್ಣನವರು ಜಿಲ್ಲೆಯ 650 ದೇವಾಲಯ ಕಟ್ಟಡ ಜಿರ್ಣೋದ್ಧಾರ ಮಾಡಿದ್ದಾರೆ. ಪೊಳ್ಳು ಅಶ್ವಾಸನೆಗಳು, ಸುಳ್ಳು ಭರವಸೆಗಳನ್ನು ಕೊಟ್ಟು ಚುನಾವಣೆಯಲ್ಲಿ ಮತ ಕೇಳಲು ಬರುತ್ತಾರೆ. ದ್ಯಾಪಲಪುರ ಗ್ರಾಮದ ದೇವಾಲಯ ಹಾಗೂ ಗ್ರಾಮದ ರಸ್ತೆಗೆ ಹಣ ಕೊಟ್ಟಿದ್ದೇನೆ. ನಮಗೆ ಬರುವ ಅನುದಾನ ಎರಡು ಕೋಟಿ ಅದನ್ನು 8 ತಾಲೂಕುಗಳಿಗೂ ಕೊಡುತ್ತಿದ್ದೇನೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ನಿಮಗೆ ಗೊತ್ತಿದೆ. ಬಾಯಿ ಬಿಟ್ಟರೆ ಬರೀ ಭಾಗ್ಯದ ಹೆಸರೇಳಿಕೊಂಡು ಒಂದು ರಸ್ತೆ ಗುಂಡಿ ಮುಚ್ಚಲು ಶಾಸಕರುಗಳಿಗೆ ಒಂದು ರುಪಾಯಿ ಅನುದಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶ ಕಂಡ ಅಪರೂಪದ ರಾಜಕಾರಣಿ. ದ್ಯಾಪಲಪುರ ಗ್ರಾಮದ ಮಗ .ಬೆಳಿಗ್ಗೆ ತಿಂಡಿ ಕೂಡ ಸೇವಿಸದೆ ದ್ಯಾಪಲಪುರ ಗ್ರಾಮದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಅಷ್ಟು ಪ್ರೀತಿಯನ್ನು ದೇವೇಗೌಡರು ದ್ಯಾಪಲಪುರ ಗ್ರಾಮದ ಮೇಲೆ ಇಟ್ಟುಕೊಂಡಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಬರುವಾಗ ದ್ಯಾಪಲಪುರ ಗ್ರಾಮದ ಜನರ ಬಗ್ಗೆ ವಿಚಾರಿಸಿಕೊಂಡು ಬಂದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಚುನಾವಣೆ ಮಾಡೊಣ ಉಳಿದ ಸಂದರ್ಭದಲ್ಲಿ ರೇವಣ್ಣನವರು ಹಾಗೂ ದೇವೇಗೌಡರ ಆಶೀರ್ವಾದದಲ್ಲಿ ಗ್ರಾಮದ ಕೆಲಸ ಮಾಡೋಣ ಎಂದರು.