ಮೋದಿ ವಿಶ್ವಾಸವಿಟ್ಟು ಬೃಹತ್ ಇಲಾಖೆ ಕೊಟ್ಟಿದ್ದಾರೆ: ಎಚ್‌ಡಿಕೆ

KannadaprabhaNewsNetwork |  
Published : Jun 18, 2024, 12:48 AM ISTUpdated : Jun 18, 2024, 03:45 PM IST
ಸಿದ್ಧಲಿಂಗ ಸ್ವಾಮೀಜಿಯಿಂದ ಆಶೀರ್ವಾದ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಎರಡು ಬೃಹತ್ ಇಲಾಖೆಯನ್ನು ಕೊಟ್ಟಿದ್ದಾರೆ. ಈ ಎರಡು ಇಲಾಖೆಗಳು ದೇಶದ ಜಿಡಿಪಿಗೆ ಆರ್ಥಿಕ ಶಕ್ತಿ ತುಂಬುವಂತಹದ್ದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ತಿಳಿಸಿದ್ದಾರೆ.

  ತುಮಕೂರು : ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಎರಡು ಬೃಹತ್ ಇಲಾಖೆಯನ್ನು ಕೊಟ್ಟಿದ್ದಾರೆ. ಈ ಎರಡು ಇಲಾಖೆಗಳು ದೇಶದ ಜಿಡಿಪಿಗೆ ಆರ್ಥಿಕ ಶಕ್ತಿ ತುಂಬುವಂತಹದ್ದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ತಿಳಿಸಿದ್ದಾರೆ.ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು.

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಹೆಚ್ಚಿನ ಜವಾಬ್ದಾರಿಯನ್ನ ನಮ್ಮ ಸಂಸತ್ ಸದಸ್ಯರಿಗೆ ಕೊಟ್ಟಿದ್ದಾರೆ. ನನ್ನ ಇಲಾಖೆಯಲ್ಲಿ ವಿಚಾರ ತಿಳಿದುಕೊಳ್ಳಲಿಕ್ಕೆ ಪ್ರಯತ್ನ ಮಾಡುತ್ತೇನೆ. ನಮ್ಮ ಮುಂದೆ ಕಠಿಣ ಹಾದಿ ಇದೆ ಎಂದರು.ಈ ಎರಡೂ ಇಲಾಖೆಯಲ್ಲಿ ಅವಕಾಶಗಳು ಹೆಚ್ಚಿವೆ. ಹಾಗೆಯೇ ಕೆಲ ಸಮಸ್ಯೆಗಳೂ ಇವೆ. ಜವಾಬ್ದಾರಿ ತೆಗೆದುಕೊಂಡ ಮೇಲೆ ದೇವರ ಅನುಗ್ರಹ ಗುರುಹಿರಿಯರ ಆಶೀರ್ವಾದವೂ ಬೇಕು. ಈ ಹಿನ್ನೆಲೆಯಲ್ಲಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ‌. ನಿನ್ನೆ ಚುಂಚನಗಿರಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ ಎಂದರು.ರಾಜ್ಯ ಮತ್ತು ದೇಶದ ಸಮಸ್ಯೆಗಳಿಗೆ ಪರಿಹಾರ ತರುವ ಪ್ರಯತ್ನದಲ್ಲಿ ಗುರುಹಿರಿಯರ ಆಶೀರ್ವಾದ ಬೇಕಾಗಿದೆ. ಈ ನಿಟ್ಟಿನಲ್ಲಿ ಭೇಟಿ ಕೊಟ್ಟಿದ್ದೇನೆ. ನಾಡಿನ ಜನತೆ ನಿರೀಕ್ಷೆ ಇಟ್ಟು, ಜೆಡಿಎಸ್ ಹಾಗೂ ಬಿಜೆಪಿಗೆ ದೊಡ್ಡ ಬೆಂಬಲ ಕೊಟ್ಟಿದ್ದಾರೆ. ಕೆಲ ಕಾರ್ಯಕ್ರಮಗಳನ್ನ ರಾಜ್ಯಕ್ಕೆ ಮತ್ತು ದೇಶಕ್ಕೆ ತರಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.ಸಿದ್ದಲಿಂಗ ಶ್ರೀಗಳು ನನಗೆ ಶುಭಾಶಯ ಕೋರಿ ಅಭಿನಂದನೆ ಪತ್ರ ನೀಡಿ ಆಶೀರ್ವಾದ ಮಾಡಿದ್ದಾರೆ

. ಅವರ ಆಶೀರ್ವಾದ ನನಗೆ ಕೆಲಸ ಮಾಡಲು ಮತ್ತಷ್ಟು ಶಕ್ತಿ ಕೊಟ್ಟಿದೆ. ಲೋಕಸಭಾ ಚುನಾವಣೆ ಬಳಿಕ ರಾಜಕೀಯದಲ್ಲಿ ಹಲವು ಬದಲಾವಣೆ ತರಬಹುದು ಅಂತ ಹೇಳಿದ್ದೆ. ಸ್ವಲ್ಪ ದಿವಸ ಕಾದು ನೋಡೋಣ ಎಂದರು.ಇವಿಎಂ ಮಿಷನ್ ಹ್ಯಾಕ್ ಆರೋಪವನ್ನು ಹಲವು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದಾರೆ. ಅದನ್ನು ಇನ್ನು ಯಾರು ಸಾಬೀತು ಮಾಡಲಿಕ್ಕೆ ಆಗಿಲ್ಲ. ಅದೆಲ್ಲಾ ಊಹಾಪೋಹ ಅಂತ ಎಲೆಕ್ಷನ್ ಕಮಿಷನರ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ನಲ್ಲೂ ಇದರ ಬಗ್ಗೆ ಚರ್ಚೆಯಾಗಿದೆ. 

ಇದರ ಬಗ್ಗೆ ಎಲ್ಲಾ ಮಾತಾಡುತ್ತಿದ್ದವರು ಇನ್ನು ಸಾಕ್ಷಿ ಕೋಡೋಕೆ ಆಗಿಲ್ಲ ಎಂದರು.ಕರ್ನಾಟಕದಲ್ಲೂ 136 ಸೀಟ್ ಗೆದ್ದರಲ್ಲಾ ಇವಿಎಂ ಮಿಷನ್ ಹ್ಯಾಕ್ ಮಾಡಿದ್ರಾ ಎಂದು ಪ್ರಶ್ನಿಸಿದರು. ಎಲ್ಲಾ ಕಡೆನೂ ಸ್ಥಳೀಯರಿಗೆ ಉದ್ಯೋಗ ಇಲ್ಲ ಅನ್ನೋ ಕೂಗು ಇದ್ದು ಇದರ ಬಗ್ಗೆ ಏನು ನಿಯಮ ಮಾಡುವುದಕ್ಕೆ ಆಗುವುದಿಲ್ಲ. ವಿಶ್ವಾಸ ಮತ್ತು ತಿಳುವಳಿಕೆ ಮೂಡಿಸಿ ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಅಂತ ಉದ್ಯಮಿಗಳನ್ನು ಕರೆದು ಸಭೆ ಮಾಡುವುದಾಗಿ ತಿಳಿಸಿದರು.ರಾಜ್ಯಕ್ಕೆ ಯಾವ್ಯಾವ ಕೈಗಾರಿಕೆ ತರಬಹುದು ಎಲ್ಲವನ್ನು ಕೂಲಕುಷವಾಗಿ ಚರ್ಚೆ ಮಾಡಲಾಗುವುದು. ಕರ್ನಾಟಕಕ್ಕೆ ಆದ್ಯತೆ ಕೊಡುತ್ತೇನೆ ಜೊತೆಗೆ ದೇಶದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. 

ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದರು.ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ದಾರಿ ಹಿಡಿಯುವ ನಿರ್ಧಾರ ಮಾಡಬಾರದು. ದೇಶದಾದ್ಯಂತ ರೈತರು ಸಂಕಷ್ಟದಲ್ಲಿದ್ದು, ಅವರನ್ನು ರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದರು.ರಾಜ್ಯದ ಜನತೆ ನನ್ನ ಮೇಲೆ ಅತ್ಯಂತ ಪ್ರೀತಿಯನ್ನಿಟ್ಟು ಗುರುತರವಾದ ಜವಾಬ್ದಾರಿಯನ್ನು ನೀಡಿದ್ದಾರೆ. ಎಲ್ಲರ ನಿರೀಕ್ಷೆ ನಾನು ಕೃಷಿ ಸಚಿವನಾಗಬೇಕಿತ್ತು ಎಂಬುದು, ಆದರೆ ಪ್ರಧಾನಂಮತ್ರಿಗಳ ದೂರದೃಷ್ಟಿಯಿಂದ ಕೈಗಾರಿಕಾ ಖಾತೆ ನೀಡಿದ್ದು, ಅದರ ಜೊತೆಗೆ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಬೇಕಿರುವ ಕೃಷಿ ಯೋಜನೆಗಳ ಬಗ್ಗೆ ಚರ್ಚೆ ಮಾಡುವ ಅವಕಾಶವಿದೆ. ಪ್ರಧಾನಮಂತ್ರಿಗಳು ಹಾಗೂ ಕೃಷಿ ಸಚಿವರ ಮನವೊಲಿಸಿ ರಾಜ್ಯದ ರೈತರಿಗಾಗಬೇಕಿರುವ ಅನುಕೂಲತೆಗಳನ್ನು ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು‌.

 ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ತೆಂಗುಬೆಳೆಗಾರರ ಸಮಸ್ಯೆ ಗಂಭೀರವಾಗಿದ್ದು, ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ತೆಂಗುಬೆಳೆಗಾರರಿಗೆ ಸಿಗಬೇಕಾದ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದರು. ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಒದಗಿಸಲು ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅನ್ಯಾಯವಾಗಿದ್ದು, ನಾನು ಮುಖ್ಯಮಂತ್ರಿಯಾಗಿದ್ದಾಗ ನಾಡಿನ ಜನರ ಒಳಿತಿಗಾಗಿ ಯಾವ ಯೋಚನೆ ಮಾಡದೆ ಸರ್ಕಾರಕ್ಕೆ ಅಧಿಕ ಆದಾಯ ತರುತ್ತಿದ್ದ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡಿದೆ. ಸಂಪನ್ಮೂಲ ಸಂಗ್ರಹಣೆಯ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹೇರುವುದನ್ನು ಬಿಟ್ಟು, ಕಾಂಗ್ರೆಸ್ ಪಕ್ಷದ ಮುಖಂಡರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಅವರಿಗೆ ನೀಡಿರುವ ಸೌಲಭ್ಯವನ್ನು ತಡೆಹಿಡಿದಿದ್ದರೆ ವರ್ಷಕ್ಕೆ ಸುಮಾರು ಐನೂರು ಕೋಟಿ ಹಣ ಉಳಿಯುತ್ತಿತ್ತು ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ