ಸರ್ವಾಧಿಕಾರಿ ಟ್ರಂಪ್‌ಗೆ ಮೋದಿ ಗುಲಾಮ: ಖರ್ಗೆ

KannadaprabhaNewsNetwork |  
Published : Mar 09, 2026, 02:00 AM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ವಾಧಿಕಾರಿ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಆತನ ಗುಲಾಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ವಾಧಿಕಾರಿ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಆತನ ಗುಲಾಮ. ನಿತ್ಯ ಕಾಫಿ, ಟೀ ಕುಡಿಯುವಾಗ ಇಬ್ಬರು ಮಾತಾಡ್ತಾರಂತೆ, ಅಷ್ಟೊಂದು ಗೆಳೆತನವಿದೆ. ಆದ್ರೂ ನಮ್ಮ ಸಮುದ್ರ ಹೊಕ್ಕು ಇರಾನ್ ಹಡಗನ್ನು ಹೊಡೆದರೂ ಮೋದಿ ಸುಮ್ನೆ ಕುಂತಾನ, ಇವ್ರೆಲ್ಲ ಸೇರಿಕೊಂಡು ದೇಶದ ಮಾರ್ಯಾದೆ ಹಾಳು‌‌ ಮಾಡ್ಯಾರ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಚಿತ್ತಾಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ₹1069 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಮೋದಿ ತಮ್ಮ ವಿದೇಶಾಂಗ ನೀತಿಯಿಂದಾಗಿ ನಮ್ಮ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುತ್ತಿದ್ದಾರೆ. ರಷ್ಯಾದಿಂದ ಈಗ 1 ತಿಂಗಳು ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರಿವಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯದ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಖರ್ಗೆ, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ನಾನ್ ಅಲೈನ್‌ಮೆಂಟ್ ಒಪ್ಪಂದ ಮಾಡಿಕೊಂಡಿದ್ದರಿಂದ ಅದು ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ, ಮೋದಿ ಈಗ ಮಾಡುತ್ತಿರುವುದೇನು? ಮೋದಿ ಇಸ್ರೇಲ್‌ಗೆ ಹೋಗಿ ಬಂದ‌ ನಂತರ ಇರಾನ್ ಮೇಲೆ‌ ಬಾಂಬ್ ಹಾಕಲಾಯಿತು. ದೇಶದ ಮಖ್ಯಸ್ಥ ಖಮೇನಿಯನ್ನು ಅಮೆರಿಕದವರು ಹತ್ಯೆ ಮಾಡಿದರು.‌ 1 ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರುತ್ತದೆಯೇ? ವಿಶ್ವ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯಾ? ಎಂದು ಪ್ರಶ್ನಿಸಿದರು‌.ಎಫ್‌ಸ್ಟೀನ್ ಫೈಲ್ ಇಟ್ಟುಕೊಂಡು ಮೋದಿಗೆ ಟ್ರಂಪ್ ಬೆದರಿಕೆ:

ಭಾರತದ ಶೇ.65 ರೈತರು ಕೃಷಿ ಅವಲಂಬಿತರಾಗಿದ್ದರೆ ಅಮೆರಿಕದಲ್ಲಿ ಶೇ.3ರಷ್ಟು ಅವಲಂಬಿತರಾಗಿದ್ದಾರೆ. ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ, ರಷ್ಯಾದಿಂದ ತೈಲ ಖರೀದಿ ಮಾಡಿದರೆ ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆಂದು ಮೋದಿಗೆ ಹೇಳುತ್ತಾರೆ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ. ಎಫ್‌ಸ್ಟೀನ್‌ ಫೈಲ್ಸ್‌ನಲ್ಲಿ ಮೋದಿ ಹೆಸರಿದೆ ಎನ್ನಲಾಗುತ್ತಿದ್ದು, ಅದನ್ನು ಇಟ್ಟುಕೊಂಡೆ ಮೋದಿಗೆ ಟ್ರಂಪ್ ಹೆದರಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.ಬಿಜೆಪಿಯವರಿಗೆ ನನ್ನ, ರಾಹುಲ್‌, ಸಿದ್ದುರನ್ನು ಬೈಯುವುದೇ ಕೆಲಸ

ಬಿಜೆಪಿಯವರಿಗಂತೂ ಕೆಲಸವೇ ಇಲ್ಲ. ಸೋನಿಯಾ, ರಾಹುಲ್, ನಾನು, ಪ್ರಿಯಾಂಕ್, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗೆ ಬೈಯ್ಯುವುದೇ ಅವರ ಕೆಲಸವಾಗಿದೆ. ನಮ್ಮ ಸರ್ಕಾರ‌ ಇದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗದಗ ವಾಡಿ ರೈಲ್ವೆ ಲೈನ್, ರಸ್ತೆಗಳು, ಹೈವೈಗಳು ಮಾಡಿದ್ದು ನಾವೇ ಹೊರತು ನೀವಲ್ಲ. ಯುವಕರಲ್ಲಿ ಜಗಳ ಹಚ್ಚುವುದು ಹಾಗೂ ದ್ವೇಷ ಹರಡುವುದೇ‌ ಇವರ ಕೆಲಸವಾಗಿದೆ. ನಮ್ಮನ್ನು ಟೀಕಿಸುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರ ಮಾತಿಗೆ ಮರುಳಾಗಬಾರದು. ನಾವು ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಸಿಎಂ, ಡಿಸಿಎಂಗೆ ಬೆಂಬಲ ನೀಡುವಂತೆ ಮನವಿ:

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವು ಸದಾ ಬೆಂಬಲ ನೀಡಬೇಕು ಎಂದು ಜನರಿಗೆ ಮನವಿ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನು 20 ಸೀಟ್ ಬಂದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಮ್ಮ ನಿರೀಕ್ಷೆಯಂತೆ ಸೀಟು ಬರಲಿಲ್ಲ ಅದು ನಮ್ಮ ದುರ್ದೈವ. ನಮ್ಮ ಸೋಲನ್ನು‌ ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ನಾವು ಜನರ ಪ್ರೀತಿ ವಿಶ್ವಾಸದಿಂದ ಮುಂದುವರೆಯುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಗೆ ಹಜ್ ಭವನ ಘೋಷಣೆ: ಸಲೀಂ ಅಹ್ಮದ್‌ಗೆ ಅಭಿನಂದನೆ
ಹಕ್ಕುಪತ್ರ ಪಡೆಯಲು ಮಾರ್ಚ್ ಅಂತ್ಯದೊಳಗೆ ಶುಲ್ಕ ಪಾವತಿಸಿʼ: ಕೆ.ಎಸ್‌.ಆನಂದ್‌.