ನವಲಗುಂದ: ತಾಲೂಕಿನ ಯಮನೂರ ಗ್ರಾಮದ ಶ್ರೀ ಚಾಂಗದೇವ ಮಹಾರಾಜ ಉರ್ಫ್ ರಾಜಾಬಾಗ ಸವಾರರ ದೇವಸ್ಥಾನದಲ್ಲಿ ಉರೂಸ್ ಅಂಗವಾಗಿ ದೇವಸ್ಥಾನದ ಪ್ರಮುಖರಾದ ಶ್ರೇಯಸ್ ಬರ್ಗೆ ಹಾಗೂ ಶುಭಂ ಬರ್ಗೆ ಅವರು ಪೂಜೆ ಸಲ್ಲಿಸಿದರು.
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಚಾಂಗದೇವರ ದೇವಸ್ಥಾನಕ್ಕೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಅವರು ದೇವಸ್ಥಾನದ ಪವಿತ್ರ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಮನಸ್ಸಿಗೆ ಒಂದು ರೀತಿಯ ಅವರ್ಣನೀಯ ಶಾಂತಿ ಸಿಕ್ಕಿತು. ಭಕ್ತರ ಕಷ್ಟಗಳನ್ನು ನೀಗುವ, ಶ್ರದ್ಧೆ ಮತ್ತು ನಂಬಿಕೆಯ ಪವಿತ್ರ ನೆಲೆಯಲ್ಲಿ ನಿಂತು ಆ ದೈವಕ್ಕೆ ಶಿರಬಾಗಿ ನಮಸ್ಕರಿಸುವಾಗ ಬದುಕಿನ ಎಲ್ಲ ಆತಂಕಗಳೂ ದೂರಾದಂತಾದವು. ಜಾತಿ-ಮತಗಳ ಭೇದಲ್ಲದ, ಪ್ರೀತಿ-ಮಾನವೀಯತೆಯೇ ಧರ್ಮವೆಂದು ಸಾರುವ ಈ ನೆಲದ ಶಕ್ತಿ ಅಪಾರ. ಶ್ರೀ ಚಾಂಗದೇವರ ಆಶೀರ್ವಾದದ ಹಸ್ತ ಸದಾ ನಮ್ಮೆಲ್ಲರ ಮೇಲಿರಲಿ, ನಾಡಿಗೆ ಸುಖ-ಶಾಂತಿ, ಸಮೃದ್ಧಿ ಸಿಗಲಿ ಎಂದರು.ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನಾಶೀರ್ವಾದ ಪಡೆದರು. ಚಾಂಗದೇವರ ದರ್ಶನಕ್ಕಾಗಿ ಆಗಮಿಸಿದ ಭಕ್ತ ಸಮೂಹಕ್ಕೆ ಶನಿವಾರ ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಅಭಿಮಾನಿ ಬಳಗದಿಂದ 5 ಕ್ವಿಂಟಲ್ ಪಲಾವ್ ವಿತರಿಸಲಾಯಿತು. ಸಿಪಿಐ ರವಿಕುಮಾರ ಕಪ್ಪನವರ, ಪಿಎಸ್‌ಐ ಜರ್ನಾದನ ಭಟ್ರಳ್ಳಿ ನೇತೃತ್ವದ ಪೊಲೀಸರ ತಂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.