ಮೋದಿ ಹತಾಶ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ-ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : May 4, 2024 12:34 AM

ಸಾರಾಂಶ

ನರೇಂದ್ರ ಮೋದಿ ಹತಾಶರಾಗಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಣಿಬೆನ್ನೂರು: ನರೇಂದ್ರ ಮೋದಿ ಹತಾಶರಾಗಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶುಕ್ರವಾರ ಸಂಜೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿ ಜಾರಿ ಮಾಡಿದ ಮೇಲೆ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂದು ಮೋದಿ ಸುಳ್ಳು ಹೇಳಿದ್ದಾರೆ. ಆದರೆ ಸರ್ಕಾರ ದಿವಾಳಿಯಾಗಿಲ್ಲ, ಯಾರಾದರೂ ಸರ್ಕಾರಿ ನೌಕರರರು ಸಂಬಳ ಬಂದಿಲ್ಲ ಎಂದಾದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು. ದೇಶದಲ್ಲಿ ಬದಲಾವಣೆಯಾಗಲು, ಸಮ ಸಮಾಜ ನಿರ್ಮಾಣವಾಗಲು, ಎಲ್ಲರಿಗೂ ಸಾಮಾಜಿಕ ನ್ಯಾಯ, ದಲಿತರಿಗೆ, ಮಹಿಳೆಯರಿಗೆ ಆರ್ಥಿಕ ಶಕ್ತಿ ದೊರೆಯಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವೇ ಹೊರತು ಬಿಜೆಪಿಯಿಂದಲ್ಲ ಎಂದು ಗುಡುಗಿದರು. ಮೋದಿ ಇತ್ತೀಚಿಗೆ ಬಾಗಲಕೋಟೆಗೆ ಬಂದಾಗ ಕುರುಬರೆಲ್ಲ ಓಟು ಕೊಡಲಿ ಎಂದು ಕರಿ ಕಂಬಳಿ ಹೊದ್ದು ನಾಟಕ ಮಾಡಿದ್ದಾರೆ. ರಾಣಿಬೆನ್ನೂರಿನಲ್ಲಿ ಕುರುಬ ಸಂಘದವರು ನನಗೆ ಕರಿ ಕಂಬಳಿ ಹೊದೆಸಿದರು. ಅದು ಕುರುಬರ ಸಂಕೇತ, ಕನಕದಾಸರ ಸಂಕೇತ. ಆದರೆ ಮೋದಿ ಅವರಿಗೆ ಕಂಬಳಿ ಹಾಕಿಕೊಳ್ಳಲು ಯಾವ ನೈತಿಕತೆಯಿದೆ. ಯಾಕೆಂದರೆ ರಾಜ್ಯದಲ್ಲಿ ಕುರುಬ ಸಮಾಜದವರಿಗೆ ಒಂದೇ ಟಿಕೆಟ್ ನೀಡಿಲ್ಲ. ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ, ಸಂಘದ ಗರಡಿಯಲ್ಲಿ ಪಳಗಿದ ಈಶ್ವರಪ್ಪ ಪುತ್ರ ಕಾಂತೇಶನಿಗೆ ಟಿಕೆಟ್ ಕೊಡಲಿಲ್ಲ. ಆರ್.ಶಂಕರ್‌ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅವನಿಗೂ ಮೋಸ ಮಾಡಿದರು. ಹಾವೇರಿ ಜಿಲ್ಲೆಯ ಕುರುಬರು ಬಿಜೆಪಿಗೆ ಓಟು ಹಾಕುವಿರಾ? ಕುರುಬರು ಕೂಡ ಕರ್ನಾಟಕ ಜನಸಂಖ್ಯೆಯಲ್ಲಿ ಶೇ.7 ಜನಸಂಖ್ಯೆ ಹೊಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಟಿಕೆಟ್ ಕೊಟ್ಟಿರಲಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗ ಹಾವೇರಿ, ಗದಗ, ರಾಣಿಬೆನ್ನೂರರಿಗೆ ಏನು ಮಾಡಿದ್ದಾರೆ? ಏನೂ ಮಾಡದ ಇವರನ್ನು ಏಕೆ ಗೆಲ್ಲಿಸಬೇಕು? ಅಧಿಕಾರದಲ್ಲಿ ಇದ್ದಾಗ ಲೂಟಿ ಹೊಡೆದ್ರು. ನಿಮಗೆ ತಾಕತ್ತು, ದಮ್ಮು ಇದೆಯಾ ಎಂದು ಕೇಳುತ್ತಿದ್ದ ಬೊಮ್ಮಾಯಿ ಮೋದಿ ಹತ್ರ ಯಾಕೆ ತೋರಿಸಲಿಲ್ಲ ದಮ್ಮು?. ದಯಮಾಡಿ ಇವರನ್ನು ಸೋಲಿಸಿ ಎಂದು ಮನವಿ ಮಾಡಿದರು. ಮುಸ್ಲಿಂಮರ ಮೀಸಲಾತಿ ಕಿತ್ತುಕೊಳ್ಳುವುದಾಗಿ ಮೋದಿ ಹೇಳ್ತಾರೆ. ಆದರೆ ಕಲಂ 15ರಲ್ಲಿ ಏನು ಬರೆದಿದೆ ಎಂದು ತಿಳಿದುಕೊಳ್ಳಿ. ಮುಸ್ಲಿಂಮರಿಗೆ ಶಿಕ್ಷಣಕ್ಕಾಗಿ ಮೀಸಲಾತಿ ನೀಡಿದ್ದಾರೆ. ಮಂಡಲ ಕಮಿಷನರ್ ವರದಿ ಜಾರಿ ಮಾಡಿದಾಗ ವಿರೋಧ ಮಾಡಿದವರು ಬಿಜೆಪಿಯವರು. ಮೀಸಲಾತಿ ವಿರೋಧಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅಭ್ಯರ್ಥಿಗೆ ಮತ ನೀಡಬಾರದು ಎಂದರು. ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಕಳೆದ ಬಾರಿ 25 ಸೀಟು ಬಿಜೆಪಿ ಗೆಲ್ಲಿಸಿದ್ದೀರಿ. ಆದರೆ ಮೋದಿ ಏನು ಮಾಡಿದ್ರು? ಉದ್ಯೋಗ ಕೊಡಲಿಲ್ಲ. ಅಚ್ಚೇ ದಿನ ಬರಲಿಲ್ಲ. ಅವರ ಮಾತಿಗೂ ಮಾಡುತ್ತಿರುವುದಕ್ಕೂ ಸಂಬಂಧವೇ ಇಲ್ಲ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಸುಳ್ಳಿನ ಅವಾರ್ಡ್ ಕೊಡಬೇಕು ಎಂದರೆ ಅದನ್ನು ನರೇಂದ್ರ ಮೋದಿ ಅವರಿಗೆ ಕೊಡಬೇಕು. ಏನು ಘನಂದಾರಿ ಕೆಲಸ ಮಾಡಿದ್ರು ಅಂತಾ ಇವರಿಗೆ ಮತ ನೀಡಬೇಕು. ರಾಮ ರಾಜ್ಯ ಮಾಡ್ತೇವೆ ಎಂದವರು ರಾವಣ ರಾಜ್ಯ ಮಾಡಿದ್ರು, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದಕ್ಕಾಗಿ ಮತ ನೀಡಬೇಕಾ? ಎಂದರು. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಶಾಸಕ ಪ್ರಕಾಶ ಕೋಳಿವಾಡ, ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಸಚಿವ ಎಚ್.ಕೆ. ಪಾಟೀಲ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರುಗಳಾದ ಪ್ರಕಾಶ ಕೋಳಿವಾಡ, ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣನವರ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಹಾವೇರಿ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಗದಗ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಸಚಿವ ಆರ್.ಶಂಕರ್ ಪ್ರಮುಖರಾದ ಅಜ್ಜಂಪೀರ ಖಾದ್ರಿ, ಸೋಮಣ್ಣ ಬೇವಿನಮರದ, ಡಿ.ಆರ್. ಪಾಟೀಲ, ರಾಮಣ್ಣ ಲಮಾಣಿ, ಎಸ್.ಆರ್.ಪಾಟೀಲ, ಐ.ಜಿ. ಸನದಿ, ಜಿ.ಎಸ್. ಪಾಟೀಲ, ನೆಹರು ಓಲೇಕಾರ, ರಾಮಣ್ಣ ಲಮಾಣಿ, ಬಿ.ಎಚ್. ಬನ್ನಿಕೋಡ, ಪ್ರಕಾಶಗೌಡ ಪಾಟೀಲ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this article