ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿ ಅನಿವಾರ್ಯ: ಬಿಜೆಪಿ ಅಭ್ಯರ್ಥಿ ಡಾ. ಕ್ಯಾವಟೂರ್

KannadaprabhaNewsNetwork | Published : Apr 9, 2024 12:46 AM

ಸಾರಾಂಶ

ಭಾರತದ ಆಂತರಿಕ ಸುರಕ್ಷತೆ ಮತ್ತು ಗಡಿ ಸುಭದ್ರತೆಗಾಗಿ ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾರತದ ಆಂತರಿಕ ಸುರಕ್ಷತೆ ಮತ್ತು ಗಡಿ ಸುಭದ್ರತೆಗಾಗಿ ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗುವುದು ಅವಶ್ಯಕ ಹಾಗೂ ಸೂಕ್ತ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟೂರ್ ತಿಳಿಸಿದರು.

ಲೋಕಸಭಾ ಚುನಾವಣಾ ನಿಮಿತ್ತ ತಾಲೂಕಿನ ವಿಧಾನಸಭಾ ಕ್ಷೇತ್ರದ ನವಲಿ, ಹುಲಿಹೈದರ್ ಮತ್ತು ಕನಕಗಿರಿ ಮಹಾಶಕ್ತಿ ಕೇಂದ್ರದಲ್ಲಿ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆಂತರಿಕ, ಬಾಹ್ಯ ರಕ್ಷಣಾ ವಿಷಯದಲ್ಲಿ ರಾಜಿಯಾಗದೆ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜಾತಿ, ಧರ್ಮ ವಿಷಯಗಳಿಗೆ ಅಂಟಿಕೊಳ್ಳದೆ ಅನೇಕ ಅಭಿವೃದ್ಧಿಶೀಲ ಯೋಜನೆಗಳನ್ನು ಜಾರಿ ಮಾಡಿ ದೇಶದ ಜನತೆಯಲ್ಲಿ ಅಭಿವೃದ್ಧಿಯ ಅರ್ಥವನ್ನು ಮನದಟ್ಟು ಮಾಡಿದ್ದಾರೆ ಎಂದರು.

ಯುಪಿಎ ಸರ್ಕಾರದ ನಂತರ ಅಧಿಕಾರಕ್ಕೇರಿದ ಕೇಂದ್ರ ಸರ್ಕಾರದ ಆಡಳಿತದಿಂದ ಇಂದು ಜಗತ್ತಿನ ಅನೇಕ ಸಮಸ್ಯೆಗಳಿಗೆ ಭಾರತವು ಪರಿಹಾರವಾಗಿ ನಿಂತುಕೊಂಡಿದೆ. ದೇಶದೇಶಗಳ ನಡುವೆ ಯುದ್ಧೋನ್ಮಾನ ಸಂದರ್ಭದಲ್ಲಿ ಸಂಧಾನಕಾರನಾಗಿ ಭಾಗವಹಿಸಿ, ಜಗತ್ತಿನ ಶಾಂತಿಯ ಜೊತೆಗೆ ಭಾರತ ದೇಶದ ತಾಕತ್ತು ಎಂತಹದು ಎಂದು ನರೇಂದ್ರ ಮೋದಿಯವರ ಆಡಳಿತದ ಕಾರ್ಯವೈಖರಿ ತೋರಿಸಿಕೊಟ್ಟಿದೆ ಎಂದು ತಿಳಿಸಿದರು.

ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಮಾತನಾಡಿ, ಅಭಿವೃದ್ಧಿಶೀಲ ಮತ್ತು ವಿಕಸಿತ ರಾಷ್ಟ್ರ ನಿರ್ಮಾಣಕ್ಕಾಗಿ ಈ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟೂರ್ ಅವರಿಗೆ ಮತ ನೀಡುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಆಡಳಿತವನ್ನು ಅಧಿಕಾರಕ್ಕೆ ತರಬೇಕಾಗಿ ಜನತೆಯಲ್ಲಿ ವಿನಂತಿಸಿಕೊಂಡರು.

ಮಾಜಿ ಶಾಸಕ ಬಸವರಾಜ್ ದಢೇಸೂಗುರು ಮಾತನಾಡಿ, ಸಂಪೂರ್ಣ ವ್ಯಾಪ್ತಿಯ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಅಭಿವೃದ್ದಿ ಕೆಲಸಗಳ ಆಲೋಚನೆಗಳೊಂದಿಗೆ ಮೇಲ್ದರ್ಜೆಗೆರಿಸಲು ಈ ಬಾರಿ ಡಾ. ಬಸವರಾಜ್ ಕ್ಯಾವಟರ್ ಅವರನ್ನು ಗೆಲ್ಲಿಸಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲು ಒಂದೊಂದು ಮತವು ಅಗತ್ಯ ಎಂದರು.

ಕೊಪ್ಪಳ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿದರು. ಕೇಂದ್ರ ಸರ್ಕಾರದ ಜನಪರ ಕಲ್ಯಾಣ ಯೋಜನೆಗಳನ್ನು ಬಳಸಿಕೊಂಡು ಇಂದು ಲಕ್ಷಾಂತರ ಭಾರತೀಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ನರೇಂದ್ರ ಮೋದಿಯವರೆ ಪ್ರಧಾನಿಯಾಗಬೇಕು ಎಂದು ಯುವಜನೆತೆ ನಿರ್ಧರಿಸಿದ್ದು 400 ಅಧಿಕ ಕ್ಷೇತ್ರಗಳ ಗೆಲುವು ಶತಸಿದ್ದ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕನಕಗಿರಿ ಮಂಡಲ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ಮಾಜಿ ಸಂಸದ ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ವಿರುಪಾಕ್ಷಪ್ಪ ಸಿಂಗನಾಳ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ ನಾಡಗೇರ, ಜೆಡಿಎಸ್ ಮುಖಂಡ ರಾಜ ನಾಯಕ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ, ವಾಗೇಶ ಹಿರೇಮಠ, ಶಿವಶರಣೇಗೌಡ ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. 8ಕೆಪಿಎಲ್27 ಕನಕಗಿರಿಯಲ್ಲಿ ಬಿಜೆಪಿ ಪ್ರಚಾರ ಸಭೆ

Share this article