ಬೆಂಗ್ಳೂರು-ಬೆಳಗಾವಿ ವಂದೇ ಭಾರತ್‌ಗೆ ಮೋದಿ ಚಾಲನೆ

KannadaprabhaNewsNetwork |  
Published : Aug 11, 2025, 12:30 AM ISTUpdated : Aug 11, 2025, 10:02 AM IST
ಬೆಂಗ್ಳೂರು-ಬೆಳಗಾವಿ ವಂದೇ ಭಾರತ್‌ಗೆ ಮೋದಿ ಚಾಲನೆ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಿಂದ ಕುಂದಾ ನಗರಿ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವ ಬಹುದಿನಗಳ ಬೇಡಿಕೆ ಭಾನುವಾರ ಈಡೇರಿತು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಿಂದ ಕುಂದಾ ನಗರಿ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವ ಬಹುದಿನಗಳ ಬೇಡಿಕೆ ಭಾನುವಾರ ಈಡೇರಿತು.

ಪ್ರಧಾನಮಂತ್ರಿ ಮೋದಿ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಬೆಳಗ್ಗೆ 11.30ಕ್ಕೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದೇ ವೇಳೆ ನಾಗ್ಪುರ-ಪುಣೆ ಹಾಗೂ ಅಮೃತಸರ-ಶ್ರೀ ಮಾತಾ ವೃಷ್ಣೋದೇವಿ ನೂತನ ವಂದೇ ಭಾರತ್ ರೈಲುಗಳಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದರು.

ಇದಕ್ಕೂ ಮುನ್ನ ಪುಷ್ಪಾಲಂಕೃತ ಕೇಸರಿ ಬಣ್ಣದ ರೈಲಿನೊಳಗೆ ಸಂಚರಿಸಿದ ಪ್ರಧಾನಿ ಮೋದಿ, ಕೇಂದ್ರೀಯ ವಿದ್ಯಾಲಯ ಸೇರಿ ಕೆಲವು ಶಾಲಾ ವಿದ್ಯಾರ್ಥಿಗಳ ಜೊತೆ ಮಾತನಾಡಿದರು. ಉದ್ಘಾಟನಾ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಆಯ್ದ ಕೆಲವರು ಬೆಳಗಾವಿವರೆಗೆ ಪ್ರಯಾಣ ಬೆಳೆಸಿದರು.

ಉದ್ಘಾಟನಾ ಕಾರ್ಯಕ್ರಮ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು, ಅಭಿಮಾನಗಳು ಜಮಾಯಿಸಿದ್ದರು. ಕೈಯಲ್ಲಿ ರಾಷ್ಟ್ರಧ್ವಜ, ಪ್ರಧಾನಿ ಭಾವಚಿತ್ರಗಳು, ಬಿಜೆಪಿ ಬಾವುಟಗಳ‍ನ್ನು ಹಿಡಿದು ಘೋಷಣೆ ಕೂಗಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಚಿವ ದಿನೇಶ್ ಗುಂಡೂರಾವ್ ಮತ್ತು ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು.

ಸೆಪ್ಟೆಂಬರ್‌ಗೆ ವಂದೇ ಭಾರತ್ ಸ್ಲೀಪರ್ ರೈಲು

ಕಾರ್ಯಕ್ರಮಕ್ಕೂ ಮೊದಲು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಧ್ಯಮದವರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಡುವೆ ಉತ್ತಮ ಸಂಪರ್ಕಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಇತ್ತೀಚೆಗೆ ಪ್ರಧಾನಿಯವರು ಅಮೃತ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಕಡಿಮೆ ಆದಾಯವಿರುವ ಜನರ ಪ್ರಯಾಣಕ್ಕೆ ವಂದೇ ಭಾರತ್ ರೈಲಿನಂತೆ ಸೌಲಭ್ಯಗಳು ಇರುವ ಕೈಗೆಟುಕುವ ಟಿಕೆಟ್ ದರದ ಅಮೃತ್ ಭಾರತ್ ರೈಲುಗಳು ಯಶಸ್ವಿಯಾಗಿವೆ. ನಮೋ ಭಾರತ ರೈಲು ಕೂಡ ಯಶಸ್ವಿಯಾಗಿವೆ. ಹೀಗಾಗಿ, ಅಮೃತ ಭಾರತ್, ನಮೋ ಭಾರತ್, ವಂದೇ ಭಾರತ್ ಮತ್ತು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದನೆ ಆರಂಭಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡುವ ಗುರಿ ಇದೆ. ಪ್ರಧಾನಿ ಮೋದಿ ಅವರು ಹೊಸ ಮಾದರಿಯ ರೈಲುಗಳನ್ನು ಪರಿಚಯಿಸುವ ಮೂಲಕ ಬದಲಾವಣೆ ತರುತ್ತಿದ್ದಾರೆ ಎಂದು ತಿಳಿಸಿದರು.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ