ಅಭಿವೃದ್ಧಿಯತ್ತ ಸಾಗಲು ಮೋದಿ ಮತ್ತೊಮ್ಮೆ ಬೇಕು: ಬಿ.ವೈ.ರಾಘವೇಂದ್ರ ಇಂಗಿತ

KannadaprabhaNewsNetwork | Published : Apr 22, 2024 2:03 AM

ಸಾರಾಂಶ

ಸಾಗರ ತಾಲೂಕು ತಾಳಗುಪ್ಪದಲ್ಲಿ ಬಿಜೆಪಿ ಪ್ರಚಾರ ಸಭೆ ಆಯೋಜಿಸಲಾಗಿತ್ತು, ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ತಾಳಗುಪ್ಪ

ರಾಷ್ಟ್ರವನ್ನು 10 ವರ್ಷಗಳ ಅವಧಿಯಲ್ಲಿ ಪ್ರಪಂಚದ ಮುಂದುವರೆದ ರಾಷ್ಟ್ರದ ಮಟ್ಟಕ್ಕೆ ಕೊಂಡೊಯ್ದ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ಧಿ ಪಥ ಮುಂದೆ ಸಾಗಲು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ತಾಳಗುಪ್ಪದಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತ ತುಷ್ಠೀಕರಣ ಕಾರ್ಯದಲ್ಲಿ ತೊಡಗಿದೆ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳ ರಕ್ಷಣೆಗೆ ತೊಡಗಿದೆ. ಚನ್ನಗಿರಿಯಲ್ಲಿರಾಮ ನವಮಿಯ ಸಂಭ್ರಮಾಚರಣೆಯಲ್ಲಿದ್ದವರ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಿದ್ಧವಿಲ್ಲ. ಆಸ್ಪತ್ರೆಯಲ್ಲಿರುವ ಗಾಯಾಳುಗಳಿಂದ ಇನ್ನೂ ಹೇಳಿಕೆ ಪಡೆದಿಲ್ಲ ಎಂದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ, ಮಂತ್ರಿಯಂತಹ ಮಹತ್ವದ ಸ್ಥಾನದಲ್ಲಿದ್ದರೂ ಈಡಿಗ ಸಮುದಾಯಕ್ಕೆ ಯಾವ ನೆರವನ್ನೂ ನೀಡಿಲ್ಲ ಎಂದು ಬಂಗಾರಪ್ಪನವರ ಹೆಸರು ಹೇಳದೆ ಟೀಕಿಸಿದ ಅವರು, ಸೋಲೂರು ಮಠ ಕಟ್ಟಲು 6 ಕೋಟಿ ರು.ಅನುದಾನ, ಗರ್ತಿಕೆರೆ ಮಠಕಟ್ಟಲು ನೆರವು, ಶಿವಮೊಗ್ಗದಲ್ಲಿ ಈಡಿಗ ಸಮುದಾಯ ಭವನಕ್ಕೆ ಸ್ಥಳ, ಕಟ್ಟಡಗಳಿಗೆ ಯಡಿಯೂರಪ್ಪ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಜಿಲ್ಲೆಯನ್ನು ಕುರಿತಂತೆ ರೈಲ್ವೆ ಯೋಜನೆಗಳು, ಹೆದ್ದಾರಿ, ನೀರಾವರಿ, ವಿಮಾನ ನಿಲ್ದಾಣ ಮೊದಲಾದ ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ ಅವರು ತಾವು ಸಂಸದ ರಾದ ಮೇಲೆ ಶಿವಮೊಗ್ಗಕ್ಕೆ ಕೊನೆಗೊಂಡಿದ್ದ ರೈಲು ಸೇವೆಯನ್ನು ಬ್ರಾಡ್‍ಗೇಜ್ ನಿರ್ಮಿಸಿ, ತಾಳಗುಪ್ಪದವರೆಗೆ ತಂದಿದ್ದು, ರೈಲು ನಿಲ್ದಾಣದ ಆಧುನೀಕರಣ, ತಾಳಗುಪ್ಪದಿಂದ ನಿತ್ಯ 5 ರೈಲುಗಳ ಸಂಚಾರ, ತಾಳಗುಪ್ಪ ಹುಬ್ಬಳ್ಳಿ ಸಂಪರ್ಕರೈಲ್ವೆಯ ಸರ್ವೆ, 100 ಮೊಬೈಲ್‍ಟವರ್ ನಿರ್ಮಾಣಮೊದಲಾದ ಹಲವು ವಿಚಾರ ಗಳನ್ನು ಎಳೆ ಎಳೆಯಾಗಿ ವಿವರಿಸಿ ಮತ್ತೊಮ್ಮೆ ತಮಗೆ ಗೆಲವು ನೀಡಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಅವಕಾಶ ಮಾಡಿಕೊಡಬೇಕು ಎಂದರು,

ಬಿಜಿಪಿಯ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತಾಡಿ, ರಾಜಕುಮಾರ ಕುಟುಂಬಕ್ಕೆ ಅದರದೇ ಆದ ಸ್ಥಾನಮಾನವಿದೆ. ಅದನ್ನು ಗೌರವಿಸಬಹುದೇ ಹೊರತು ಗೀತಾ ಅವರನ್ನು ಅಭ್ಯರ್ಥಿಯನ್ನಾಗಿ ಅಲ್ಲ. ಬೆಂಗಳೂರಿನಲ್ಲಿ ಐಶಾರಾಮಿ ಬದುಕು ನಡೆಸುತ್ತಿರುವ ಗೀತಾರವರಿಗೆ ಬಿಸಿಲು ಮಳೆ ಎನ್ನದೆ ಗೆಯ್ಯುವ ರೈತನ ಬದುಕಿನ ಗದ್ದೆ ನಾಟಿ, ಹರಗುವುದು, ಕಳೆ ತೆಗೆಯುವುದು, ಕೊಟ್ಟಿಗೆ ಕೆಲಸದ ಪರಿಚಯ ಇದೆಯೇ ಎಂದು ಪ್ರಶ್ನಿಸಿದರು.

ಈಗ ಜಾತಿ ಹೆಸರು ಕೇಳಿಕೊಂಡು ನಾವು ನಿಮ್ಮವರು ಎಂದು ಮತ ಕೇಳುತ್ತಿರುವ ಅವರು ದೀವರ ಮಕ್ಕಳ ಯಾವುದೇ ಕಷ್ಟ ಸುಖದಲ್ಲಿ ಭಾಗಿಯಾದ ಒಂದಾದರೂ ನಿದರ್ಶನ ಇದೆಯೇ ಎಂದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್‌.ಅರುಣ್‌, ರಾಜಶೇಖರ ಗಾಳಿಪುರ, ಲಲಿತಾನಾರಾಯಣ, ಡಾ.ರಾಜನಂದಿನಿ, ಮಲ್ಲಿಕಾರ್ಜುನ ಹಕ್ರೆ, ಮೋಹನ ಶೇಟ್, ದಿನೇಶ ಗೌಡರು, ಬ್ಯಾಕೋಡು ಲಕ್ಷ್ಮೀನಾರಾಯಣ ಮತ್ತಿತರರು ಇದ್ದರು.

Share this article