- ತುಂಗಭದ್ರಾ ನದಿ ತಟದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ - - -
ಮುಂಭಾಗದಲ್ಲಿ ಪರಶಿವನೇ ಯೋಗನಿದ್ರೆಯಲ್ಲಿ ತಲ್ಲೀನನಾಗಿ ಯೋಗ ದಿನಾಚರಣೆಯ ನೇತೃತ್ವ ವಹಿಸಿದಂತೆ ಕಾಣುವ ನೋಟ, ಹಿಂದೆ ಝುಳು ಝುಳು ಶಬ್ದದೊಂದಿಗೆ ಕಲರವ ಮಾಡುತ್ತ ಹರಿವ ತುಂಗಭದ್ರಾ ನದಿ, ನದಿಯ ಹಿಂಭಾಗದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುವ ಗಿಡಮರಗಳು, ಮೈ ಮನಗಳು ಪುಳಕ ಆಗುವಂತೆ ಹಿತವಾಗಿ ಬೀಸುವ ತಂಗಾಳಿ, ಇವುಗಳ ನಡುವೆ ಸಾವಿರಾರು ವಿದ್ಯಾರ್ಥಿಗಳ ಯೋಗಾಭ್ಯಾಸ. ಇದನ್ನು ಕಾಣಲು ಬಾನು ಭೂಮಿ ಒಂದಾಗಿಸಿ ನೋಡುತ್ತಿರುವ ಇಬ್ಬನಿ...
ಇಂಥ ರಮಣೀಯ ದೃಶ್ಯಕಾವ್ಯ ಕಂಡುಬಂದಿದ್ದು ವಿಷ್ಣು ಹಾಗೂ ಶಿವರಿಬ್ಬರೂ ಸಂಗಮಗೊಂಡು ನೆಲೆಸಿರುವ ಹರಿಹರ ಕ್ಷೇತ್ರದಲ್ಲಿ.ಹರಿಹರ ತಾಲೂಕು ಆಡಳಿತ, ಧನ್ವಂತರಿ ಪತಂಜಲಿ ಆರೋಗ್ಯ ಕೇಂದ್ರ ಹಾಗೂ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಶನಿವಾರ ಮುಂಜಾವಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಈ ಬಾರಿ ತುಂಗಭದ್ರಾ ದಡದಲ್ಲಿ ನಡೆಸಲಾಯಿತು. ಆ ಮೂಲಕ ಯೋಗದ ಮಹತ್ವ ದ್ವಿಗುಣಗೊಳಿಸಿದರೆ, ಸಾಲಾಗಿ ಕುಳಿತ ವಿದ್ಯಾರ್ಥಿಗಳು ಯೋಗ ಮುದ್ರೆಯಲ್ಲಿ ಕುಳಿತು ಉಚ್ಛಾಸ ಹಾಗೂ ನಿಚ್ಚಾಸ ಮಾಡುತ್ತಾ ಪ್ರಾಣಾಯಾಮದಲ್ಲಿ ತಲ್ಲೀನರಾಗಿ ಮೈಮನ ಮರೆತರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹರಿಹರ ಶಾಖೆಯ ಶಿವದೇವಿ ಅಕ್ಕ ಹಾಗೂ ಅನಸೂಯ ಅಕ್ಕ ಅವರು ವಿದ್ಯಾರ್ಥಿಳಿಗೆ ಪ್ರಾಣಾಯಾಮ, ಧ್ಯಾನ, ಆತ್ಮ ಸಾಕ್ಷಾತ್ಕಾರ ಹೇಳಿ ಕೊಟ್ಟರು.ನಗರದ ಧನ್ವಂತರಿ ಪತಂಜಲಿ ಆರೋಗ್ಯ ಕೇಂದ್ರದ ಯೋಗ ಶಿಕ್ಷಕರಾದ ನಿರಂಜನ ಹಾಗೂ ಎನ್. ಮೀನಾಕ್ಷಿ ಯೋಗಾಸನ ಭಂಗಿಗಳಾದ ಸುಖಾಸನ, ವಜ್ರಾಸನ, ಪದ್ಮಾಸನ, ಬಾಲಾಸನ, ಗೋಮುಖಾಸನ, ತಾಡಾಸನ, ವೃಕ್ಷಾಸನ, ವೀರಭದ್ರಾಸನ, ಶವಾಸನ, ಭುಜಂಗಾಸನ ಮಾಡುವ ಪರಿ ಹೇಳಿ ಹೇಳಿಕೊಟ್ಟರು.
ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶಕ್ಕೆ ಋಷಿಮುನಿಗಳು ಯೋಗ ಕಲಿಸಿದರೆ, ಪ್ರಧಾನಿ ಇಡೀ ಪ್ರಪಂಚಕ್ಕೆ ಯೋಗದ ಮಹತ್ವ ಸಾರಿ, ಇಡೀ ಪ್ರಪಂಚಕ್ಕೆ ಯೋಗದ ಮಹತ್ವ ತಿಳಿಸಿ, ಆಚರಿಸುವಂತೆ ಮಾಡಿದರು ಎಂದರು.ಬಿಇಒ ದುರುಗಪ್ಪ, ಧನ್ವಂತರಿ ಪತಂಜಲಿ ಕೇಂದ್ರದ ಬಿ. ವಿಶ್ವನಾಥ, ಶಾಂತರಾಜ್, ಜಿ.ಎಂ. ವಿನಾಯಕ, ನಾಗವೇಣಿ, ತಸ್ಲೀಂ, ರೂಪ, ಕವಿತಾ, ಲೇಖನ, ಸಾನ್ವಿ, ಯೋಗಪಟು ಕೆ. ಜಯರಾಂ ಹಾಗೂ ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- - --21ಎಚ್‍ಆರ್‍ಆರ್03: ಹರಿಹರದ ತುಂಗಭದ್ರಾ ನದಿ ತಟದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. -21ಎಚ್‍ಆರ್‍ಆರ್03ಎ: ಹರಿಹರದ ತುಂಗಭದ್ರಾ ನದಿ ತಟದಲ್ಲಿ ನಡೆದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು.