ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ್ಯಾಯ ಒದಗಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ನಡೆಸಿ ಪಾಕಿಸ್ತಾನದೊಳಗೆ ನುಗ್ಗಿ ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆಗಳ 9 ನೆಲೆಗಳನ್ನು ಧ್ವಂಸಗೊಳಿಸಿ, ನೂರಾರು ಮತಾಂಧ ಉಗ್ರರ ಮಾರಣಹೋಮ ನಡೆಸಿ ಉಗ್ರವಾದವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂಬ ದಿಟ್ಟ ಸಂದೇಶವನ್ನು ಜಗತ್ತಿಗೆ ಸಾರಿದೆ. ಈ ಮೂಲಕ ಮೂಲಕ ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ್ಯಾಯ ಒದಗಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದ್ದಾರೆ.ಭಾರತೀಯ ಹಿಂದೂ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರ ‘ಆಪರೇಷನ್ ಸಿಂಧೂರ’ ಎಂದು ಕಾರ್ಯಾಚರಣೆಗೆ ನಾಮಕರಣ ಮಾಡಿ ಅತ್ಯಂತ ಯಶಸ್ವಿಯಾಗಿ ಅತ್ಯಂತ ಕ್ಷಿಪ್ರ ಹಾಗೂ ಪರಾಕ್ರಮ ಮೆರೆದುದರ ಹಿಂದಿರುವ ಭಾರತೀಯ ಸೇನೆಯ ರಕ್ಷಣಾ ಸಲಹೆಗಾರರಾದ ಅಜಿತ್ ಧೋವಲ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪರಾಕ್ರಮ ಮೆರೆದ ವೀರ ಸೈನಿಕರಿಗೆ ದೇಶದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ದೇಶದ ಜನತೆ ಬಿಜೆಪಿ ಸರ್ಕಾರದ ಮೇಲೆ ಭರವಸೆ ಇಟ್ಟಿರುವ ಪ್ರತಿಯೋರ್ವ ಭಾರತೀಯನಿಗೆ ಇಂದು ಗೌರವ ಸಲ್ಲಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಸಚಿವ ಸಂಪುಟದ ಸಚಿವರು ಮಾಡಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.