ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವು ಏ.28ರಂದು ನಗರದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಇಲ್ಲಿನ ಐತಿಹಾಸಿಕ ಹೈಸ್ಕೂಲ್ ಮೈದಾನವೂ ಸಜ್ಜಾಗುತ್ತಿದೆ.ನಗರದ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ, ಹಾವೇರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪ್ರಚಾರ ಹಾಗೂ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶಕ್ಕೆ ಇದೀಗ ಎಲ್ಲಾ ಸಿದ್ಧತೆ ಪೂರ್ಣಗೊಂಡಿದ್ದು, ವೇದಿಕೆ, ಪೆಂಡಾಲ್ ಪ್ರದೇಶವನ್ನು ಭದ್ರತಾ ಪಡೆಗಳ ವಶಕ್ಕೆ ಒಪ್ಪಿಸಲಾಗಿದೆ. ಇಡೀ ಸಮಾರಂಭ ಸ್ಥಳಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ದಾವಣಗೆರೆ ಕ್ಷೇತ್ರದ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಸಮಾವೇಶಕ್ಕೆ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುಮಾರು 1.5 ಲಕ್ಷಕ್ಕೂ ಅಧಿಕ ಜನರು ನಿರೀಕ್ಷೆ ಇದೆ. ಸುಮಾರು 1 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. 36-50 ಅಡಿ ವಿಶಾಲ ವೇದಿಕೆ, 350-650 ಅಡಿಗಳಷ್ಟು ವಿಶಾಲ ಪೆಂಡಾಲ್‌ನಲ್ಲಿ ಸಮಾವೇಶ ನಡೆಯಲಿದೆ. ವೇದಿಕೆಯಲ್ಲಿ ಪ್ರಧಾನಿ ಮೋದಿ ಸೇರಿ 51 ಗಣ್ಯರಿಗೆ ಅವಕಾಶ ನೀಡಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಶನಿವಾರ ದಾವಣಗೆರೆಗೆ ಆಗಮಿಸುವ ಹಿನ್ನೆಲೆ ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗಳಿಂದ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಬೆಳಗ್ಗೆಯಿಂದಲೇ ಸಮಾರಂಭ ಸ್ಥಳದಿಂದ ಒಂದು ಕಿಮೀ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶದಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಎಲ್ಲಾ ಕಡೆ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.
ಇಲ್ಲಿನ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗಿದೆ. ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಬರುವ ನಾಯಕರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರ ವಾಹನಗಳ ನಿಲುಗಡೆಗೆ ನಿರ್ಧಿಷ್ಟ ಸ್ಥಳ ಸೂಚಿಸಲಾಗಿದೆ. ಏ.28 ಮತ್ತು 29ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ 5 ಕಡೆ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ನರೇಂದ್ರ ಮೋದಿಯವರು ಏ.28ರ ಬೆಳಗ್ಗೆ 10ಕ್ಕೆ ಬೆಳಗಾವಿ, ಮಧ್ಯಾಹ್ನ 12ಕ್ಕೆ ಉತ್ತರ ಕನ್ನಡ, ಅದೇ 2 ಗಂಟೆಗೆ ದಾವಣಗೆರೆಗೆ ಆಗಮಿಸಿ, ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಂಜೆ 4ಕ್ಕೆ ಹೊಸಪೇಟೆಯಲ್ಲಿ ನರೇಂದ್ರ ಮೋದಿ ಪ್ರಚಾರ ಕೈಗೊಳ್ಳುವರು. ಏ.29ಕ್ಕೆ ಬಾಗಲಕೋಟೆಯಲ್ಲಿ ಪ್ರಚಾರ ನಡೆಸುವರು. ರಾಜ್ಯದ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ಗುರಿಯಾಗಿದೆ. 5ನೇ ಬಾರಿಗೆ ನರೇಂದ್ರ ಮೋದಿ ದಾವಣಗೆರೆಗೆ ಆಗಮಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.