ಚೆಂಡುಹೂವಿನ ಹೊಲದಲ್ಲಿ ಅರಳಿದ ಮೋದಿ ಹೆಸರು!

KannadaprabhaNewsNetwork |  
Published : Nov 04, 2026, 01:15 AM IST
೦೩ ವೈಎಲ್‌ಬಿ ೦೩ಯಲಬುರ್ಗಾ ತಾಲೂಕಿನ ಮಕ್ಕಳ್ಳಿ ಗ್ರಾಮದ ರೈತ ಬಸವರಾಜ ಜಾಲಿಹಾಳ ಜಮೀನಿನ ತೋಟದಲ್ಲಿ ಅರಳಿದ ಪ್ರಧಾನಿ ಮೋದಿ ಹೆಸರು. | Kannada Prabha

ಸಾರಾಂಶ

ಮಕ್ಕಳ್ಳಿ ಗ್ರಾಮದ ರೈತನ ಈ ವಿನೂತನ ಪ್ರಯತ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಗಮನ ಸೆಳೆದಿದೆ. ರೈತನ ಅಭಿಮಾನ ಹಾಗೂ ಸೃಜನಶೀಲತೆ ಮೆಚ್ಚಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಲಬುರ್ಗಾ: ಮಣ್ಣಿನಲ್ಲಿ ಬೆಳೆ ಬೆಳೆಯುವುದು ರೈತನ ಕಾಯಕ. ಆದರೆ ಅದೇ ಮಣ್ಣಿನಲ್ಲಿ ಹೂವುಗಳನ್ನು ಅರಳಿಸಿ ದೇಶದ ಪ್ರಧಾನಿಯ ಹೆಸರನ್ನೇ ಮೂಡಿಸುವುದು ಅಪರೂಪದ ಪ್ರಯತ್ನ. ಇಂತಹ ವಿಶಿಷ್ಟ ಅಭಿಮಾನಕ್ಕೆ ಸಾಕ್ಷಿಯಾಗಿರುವುದು ತಾಲೂಕಿನ ಮಕ್ಕಳ್ಳಿ ಗ್ರಾಮ.

ಗ್ರಾಮದ ಯುವ ರೈತ ಬಸವರಾಜ ಈಶಪ್ಪ ಜಾಲಿಹಾಳ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಚೆಂಡು ಹೂವಿನ ಗಿಡಗಳನ್ನು ವಿಶೇಷ ವಿನ್ಯಾಸದಲ್ಲಿ ಬೆಳೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಮೂಡಿಸಿದ್ದಾರೆ. ರೈತನ ಈ ವಿಭಿನ್ನ ಪ್ರಯತ್ನ ಹಾಗೂ ಕ್ರಿಯಾಶೀಲತೆ ಇದೀಗ ಸಾರ್ವಜನಿಕರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಹೊಲದಲ್ಲಿ ಅರಳಿದ ಅಭಿಮಾನದ ಅಕ್ಷರ: ಸಾಮಾನ್ಯವಾಗಿ ಕೃಷಿ ಭೂಮಿಯಲ್ಲಿ ಬೆಳೆ ಬೆಳೆದು ಆದಾಯ ಗಳಿಸುವುದು ರೈತರ ಉದ್ದೇಶ. ಆದರೆ ಬಸವರಾಜ ಅವರು ತಮ್ಮ ಕೃಷಿ ಭೂಮಿಯನ್ನೇ ಸೃಜನಶೀಲ ಅಭಿವ್ಯಕ್ತಿಯ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಜಮೀನಿನಲ್ಲಿ ದಾರ ಹಾಗೂ ಕಬ್ಬಿಣದ ಕಂಬಗಳನ್ನು ಅಳವಡಿಸಿ, ಅಳತೆ ಗುರುತುಗಳೊಂದಿಗೆ ವಿಶೇಷ ವಿನ್ಯಾಸ ರೂಪಿಸಿ ಅದರಂತೆ ಚೆಂಡು ಹೂವಿನ ಕೃಷಿ ಮಾಡಿದ್ದಾರೆ. ಹೀಗೆ ಹೂವುಗಳ ನಡುವೆ ಪ್ರಧಾನಿ ಮೋದಿ ಅವರ ಹೆಸರು ಮೂಡಿಬಂದಿದೆ.

ವಿಜಯೇಂದ್ರ ಅವರಿಂದ ಮೆಚ್ಚುಗೆ: ಮಕ್ಕಳ್ಳಿ ಗ್ರಾಮದ ರೈತನ ಈ ವಿನೂತನ ಪ್ರಯತ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಗಮನ ಸೆಳೆದಿದೆ. ರೈತನ ಅಭಿಮಾನ ಹಾಗೂ ಸೃಜನಶೀಲತೆ ಮೆಚ್ಚಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರೈತನ ಪಾಲಿಗೆ ತನ್ನ ಹೊಲವೇ ಸರ್ವಸ್ವ. ಅಂತಹ ಹೊಲವನ್ನೇ ದೇಶದ ಪ್ರಧಾನ ಸೇವಕರ ಮೇಲಿನ ಪ್ರೀತಿ ಮತ್ತು ಗೌರವ ವ್ಯಕ್ತಪಡಿಸುವ ಮಾಧ್ಯಮವನ್ನಾಗಿಸಿಕೊಂಡಿರುವುದು ಹೃದಯಸ್ಪರ್ಶಿ ಎಂದು ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡ್ರೋನ್‌ನಲ್ಲಿ ಸೆರೆಯಾದ ಹೂವಿನ ಹೆಸರು: ಈ ವಿಶೇಷ ಹೂವಿನ ವಿನ್ಯಾಸವನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ. ಮೇಲಿನಿಂದ ನೋಡಿದಾಗ ಚೆಂಡು ಹೂವಿನ ನಡುವೆ ಮೂಡಿರುವ ಮೋದಿ ಅವರ ಹೆಸರು ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರು ಹಾಗೂ ರೈತರು ತೋಟಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

ಶ್ಲಾಘನೀಯ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಾರ್ಯ ವೈಖರಿ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಬಸವರಾಜ ಅವರು ಹೂವಿನಲ್ಲಿ ಮೋದಿ ಹೆಸರು ಅರಳಿಸಿರುವುದು ಶ್ಲಾಘನೀಯ. ಅಪರೂಪದ ಕೃಷಿ ಪ್ರಯೋಗವನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆಹಿಡಿದಿದ್ದು, ಸುತ್ತಲಿನ ರೈತರು ತೋಟಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಪರಿಶ್ರಮ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಈ ಪ್ರಯತ್ನ ಮಾಡಿದ್ದೇನೆ. ಹೂವುಗಳ ಮೂಲಕ ಅವರ ಹೆಸರು ಮೂಡಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದೇನೆ. ನಮ್ಮ ಪ್ರಧಾನಿ ನಮ್ಮ ಹೆಮ್ಮೆ ಎಂದು ರೈತ ಬಸವರಾಜ ಜಾಲಿಹಾಳ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌