ಕನ್ನಡಪ್ರಭ ವಾರ್ತೆ ಬೆಂಗಳೂರು
ಹೀಗಂತ ರಾಜ್ಯಪಾಲ ಥಾವರಚಂದ್ ಗೆಹಲೋಥ್ ಹೇಳಿದ್ದಾರೆ.
ಲೋಕಭವನದ ಬ್ಯಾಂಕ್ವೆಂಟ್ ಹಾಲ್ ಶುಕ್ರವಾರ ನಡೆದ ಸಮಾರಂಭದಲ್ಲಿ ಕನ್ನಡಪ್ರಭ ಪ್ರಕಾಶನ ಪ್ರಕಟಿಸಿದ ಚೊಚ್ಚಲ ಕೃತಿ ‘ಗೆದ್ದವರ ಸಿದ್ಧಸೂತ್ರ-A Text Book of Success’ ಕೃತಿ ಲೋಕಾರ್ಪಣೆ ಮಾಡಿದರು. ಜೀರೋ ಟು ಹೀರೋಗಳಾಗಿ ಬೆಳೆದ ರಾಜ್ಯದ 26 ಸಾಧಕರ ನೈಜ ಕಥೆಯನ್ನೊಳಗೊಂಡ ಈ ಕೃತಿ ಸಾವಿರಾರು ವಿದ್ಯಾರ್ಥಿಗಳನ್ನು ಮುಟ್ಟಿ ಪ್ರೇರಣೆ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.ಜೀವಂತ ಉದಾಹರಣೆ:
ತಮ್ಮ ಉತ್ಸಾಹ, ಕೆಲಸದ ಬಗ್ಗೆ ಇದ್ದ ಶ್ರದ್ಧೆ, ಸತತ ಪ್ರಯತ್ನದಿಂದಾಗಿ ಕಾಂತಾರದಂಥ ಚಿತ್ರ ಹೊರತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ರಿಷಬ್ ಶೆಟ್ಟಿ, ಆಟೋ ರಿಕ್ಷಾ ಚಾಲಕರಾಗಿದ್ದ ಸತ್ಯಶಂಕರ್ ಕಠಿಣ ಪರಿಶ್ರಮದಿಂದ ಅಂತಾರಾಷ್ಟ್ರೀಯ ಗುಣಮಟ್ಟದ ತಂಪು ಪಾನೀಯ ಬ್ರ್ಯಾಂಡ್ ರೂಪಿಸಿದ್ದು, ತಮ್ಮ ಇಡೀ ಜೀವನ ಮತ್ತು ಗಳಿಕೆಯನ್ನು ಸಮಾಜ ಸೇವೆ ಮತ್ತು ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ವಿಶ್ವನಾಥ್ ಶೆಣೈ ನಮಗೆಲ್ಲರಿಗೂ ಒಂದು ಮಾದರಿ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿರುವ ‘ಕರ್ಮಣ್ಯೇ ವಾಧಿಕಾರಸ್ತೇ’ ಎಂಬುದು ಈಗಿನ ಯುವಕರಿಗೆ ಅತ್ಯಂತ ಪ್ರಸ್ತುತ. ಯಾವುದೇ ವ್ಯಕ್ತಿ ಗುರಿಗೆ ಸಮರ್ಪಿತನಾಗಿದ್ದರೆ, ಅವನ ಸಾಧನೆ ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಮ್ಮ ಯುವಜನತೆ ಪ್ರತಿಭಾವಂತರಾಗಿದ್ದು, ಅವರಿಗೆ ಅವಕಾಶ ಮತ್ತು ಸವಾಲು ಸಾಕಷ್ಟು ಎದುರಾಗುತ್ತಿವೆ. ಅದನ್ನೆಲ್ಲ ಮೀರಿ ಅವರು ಬೆಳೆಯಬೇಕು. ಯುವಪೀಳಿಗೆಯ ವೈಯಕ್ತಿಯ ಯಶಸ್ಸು ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಸದಾ ಸಾಮಾಜಿಕ ಜವಾಬ್ದಾರಿಯಲ್ಲಿ ತಮ್ಮ ಬದ್ಧತೆ ಪ್ರದರ್ಶಿಸುತ್ತಿದೆ. ಜನರಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮತ್ತು ನಾಯಕತ್ವ ಗುಣ ಬೆಳೆಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಈಗಾಗಲೇ ಸೇವ್ ವೈಲ್ಡ್ ಲೈಫ್, 7 ವಂಡರ್ಸ್ ಆಫ್ ಕರ್ನಾಟಕ ಸೇರಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದೆ. ಅದರ ಜತೆಗೆ ಇದೀಗ ‘ಗೆದ್ದವರ ಸಿದ್ಧಸೂತ್ರ’ ಎಂಬ ಸ್ಫೂರ್ತಿದಾಯಕ ಕೃತಿ ಹೊರತರುವ ಮೂಲಕ ಭಾರತದ ಭವಿಷ್ಯಕ್ಕೆ ಯುವಪೀಳಿಗೆಯನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತಿದೆ. ಈ ಕೃತಿಯಲ್ಲಿನ ಪ್ರತಿಯೊಬ್ಬರ ಕಥೆಯೂ ಯುವಪೀಳಿಗೆಯನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ನೆರವಾಗಲಿದೆ ಎಂದ ಶ್ಲಾಘಿಸಿದರು.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಗೆದ್ದವರ ಸಿದ್ಧಸೂತ್ರ ಕೇವಲ ಒಂದು ಕೃತಿಯಾಗಿರದೆ, ಪತ್ರಿಕೆಯಲ್ಲಿ ದಾಖಲಿಸುವ ವರದಿಯಾಗಿರದೆ 26 ಸಾಧಕರು ಶೂನ್ಯದಿಂದ ಸಾಧನೆಯ ಶಿಖಿರದತ್ತ ಸಾಗಿದ ಪಯಣದ ಉಲ್ಲೇಖವಾಗಿದೆ. ಪ್ರೇರಣಾದಾಯಕ ಉದ್ಯಮಿಗಳು, ಸಮಾಜದ ವಿವಿಧ ಸ್ತರದಲ್ಲಿರುವವರ ಪ್ರೇರಣಾದಾಯಕ ಸಾಧನೆಗಳನ್ನು ಅಕ್ಷರದ ಮೂಲಕ ‘ಗೆದ್ದವರ ಸಿದ್ಧಸೂತ್ರ’ ಕೃತಿಯಲ್ಲಿ ಹೇಳಲಾಗಿದೆ.
ಕೇವಲ ಸಮಾಜದ ಆಗುಹೋಗುಗಳನ್ನು ವರದಿ ಮಾಡುವುದಷ್ಟೇ ಕೆಲಸವಲ್ಲ ಎಂದು ತಿಳಿದು, ನಮ್ಮ ನಡುವಿನ ಸಾಧಕರನ್ನು ಗುರುತಿಸಿ ಅವರ ಬಗ್ಗೆ ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದೆ. ಪ್ರಧಾನಿ ಮೋದಿ ಅವರ ಕನಸಾದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಕಾರಗೊಳಿಸುವಲ್ಲಿ ತೊಡಗಿರುವ ಉದ್ಯಮಿಗಳ ಸಾಹಸಗಾಥೆ ಕೃತಿಯಲ್ಲಿ ದಾಖಲಾಗಿದೆ.
-ಬಾಕ್ಸ್-
ಗವರ್ನರ್ ಕಾರ್ಯ ಇತರರಿಗೆ ಮಾದರಿ: ರವಿ ಹೆಗಡೆಪ್ರಧಾನಿ ಮೋದಿ ಅವರು ಮಿತವ್ಯಯಕ್ಕೆ ಕರೆ ನೀಡಿದ ಬೆನ್ನಲ್ಲೇ ರಾಜ್ಯಪಾಲ ಥಾವರಚಂದ್ ಗೆಹಲೋಥ್ ಅವರು ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ರವಿ ಹೆಗಡೆಯವರು, ರಾಜ್ಯಪಾಲರ ಈ ಕಾರ್ಯ ಇತರರಿಗೂ ಮಾದರಿ. ದೇಶ ಸವಾಲು ಎದುರಿಸುತ್ತಿರುವಾಗ ತಾವು ಹೆಚ್ಚಿನ ವಾಹನ ಬಳಸುವುದನ್ನು ಕಡಿತಗೊಳಿಸುವ ಮೂಲಕ ರಾಜ್ಯಪಾಲರು ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಇದೇ ವೇಳೆ ‘ಗೆದ್ದವರ ಸಿದ್ಧಸೂತ್ರ’ ಕೃತಿ ಲೋಕಾರ್ಪಣೆಗೆ ಎಲ್ಲ ರೀತಿಯ ನೆರವು ನೀಡಿ, ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಬೆನ್ನುತಟ್ಟಿದ ರಾಜ್ಯಪಾಲರು ಹಾಗೂ ಲೋಕಭವನದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.ಅಚ್ಚುಕಟ್ಟು ಕಾರ್ಯಕ್ರಮ:ಗೆದ್ದವರ ಸಿದ್ಧಸೂತ್ರ ಕೃತಿ ಕುರಿತಂತೆ ರಾಜ್ಯಪಾಲ ಥಾವರಚಂದ್ ಗೆಹಲೋಥ್ ಅವರಿಗೆ ವಿವರಿಸುತ್ತಿದ್ದಂತೆ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯವನ್ನು ಶ್ಲಾಘಿಸಿದರು. ಜತೆಗೆ ಲೋಕಭವನದಲ್ಲಿಯೇ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸುವಂತೆ ಸೂಚಿಸಿದರು. ಅದರಂತೆ ಶುಕ್ರವಾರ ನಡೆದ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು. ನಿಗದಿಯಂತೆ ಬೆಳಗ್ಗೆ 11 ಗಂಟೆಗೆ ಬ್ಯಾಕ್ವೆಂಟ್ ಹಾಲ್‌ಗೆ ಆಗಮಿಸಿದ ರಾಜ್ಯಪಾಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಾಧಕರಿಗೆ ಮತ್ತು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಬೆನ್ನು ತಟ್ಟಿದರಲ್ಲದೆ, ಈ ರೀತಿಯ ಕಾರ್ಯ ಮತ್ತಷ್ಟು ನೆರವೇರಲಿ ಎಂದು ಆಶಿಸಿದರು.