ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ವಿಷಯವಾಗಿ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಲಾ ₹3 ಹೆಚ್ಚಳ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿರುವುದು ಖಂಡನೀಯ. ಅಡುಗೆ ಅನಿಲ ಸಮಸ್ಯೆ ಸೃಷ್ಟಿಸಿ ಬಳಿಕ ಬೆಲೆ ಏರಿಕೆ ಮಾಡಿದರು. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ನಿರಂತರವಾಗಿ ಬೀಳುತ್ತಿರುವ ರುಪಾಯಿ ಮೌಲ್ಯ, ಆರ್ಥಿಕ ನಿರ್ವಹಣೆ ವೈಫಲ್ಯ ಮತ್ತು ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆ ಹೊತ್ತು ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆ ತಲೆ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸುತ್ತಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿ ಎಂದು ಕಿಡಿಕಾರಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಿದ್ದಾಗ ಅದರ ಲಾಭವನ್ನು ಬೊಕ್ಕಸಕ್ಕೆ ತುಂಬಿಕೊಂಡ ಮೋದಿ ಅವರು, ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದು ದೇಶದ ಜನತೆಯ ಮೇಲಿನ ಘೋರ ಶೋಷಣೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಪ್ರಧಾನಿ ಮೋದಿ ತನ್ನ ಉದ್ಯಮಿ ಮಿತ್ರರ ರಕ್ಷಣೆಗೆ ತೋರುವ ಆತುರ, ಕಾಳಜಿ ಹಾಗೂ ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನತೆಯ ಮೇಲೆ ತೋರಿಸಲಿ. ಪೆಟ್ರೋಲ್, ಡೀಸೆಲ್ ದರ ತಲಾ 3 ರು. ಏರಿಕೆ ಮಾಡಿರುವ ನಡೆಯನ್ನು ಕಠಿಣವಾಗಿ ವಿರೋಧಿಸುತ್ತೇನೆ. ತಕ್ಷಣವೇ ಬೆಲೆ ಏರಿಕೆ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರವು ನೀಟ್ ಪರೀಕ್ಷೆ ನಡೆಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ನೀಟ್ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಜತೆ ಚೆಲ್ಲಾಟ ಆಡಿದಂತಾಗಿದೆ. ಅವರೆಲ್ಲರೂ ಮತ್ತೆ ಪರೀಕ್ಷೆ ಬರೆಯುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಎಸ್‌ಐಆರ್‌ಗೆ ಸಿದ್ಧತೆ: ಸಿಎಂ
ಎಸ್‌ಐಆರ್ ಕುರಿತು ಎಲ್ಲಾ ಪಕ್ಷದ ನಾಯಕರೂ ಜಾಗೃತರಾಗಬೇಕು. ಎಸ್‌ಐಆರ್ ಬಗ್ಗೆ ನಾವೂ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಪಕ್ಷದವರಾದರೂ ತಮ್ಮ ಪರವಾದ ಮತಗಳನ್ನು ರಕ್ಷಿಸಿಕೊಳ್ಳಬೇಕು. ಎಸ್‌ಐಆರ್ ಉದ್ದೇಶ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವುದಾಗಿದೆ. ಆ ಮತಗಳನ್ನು ನಾವು ಕಾಪಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.