ಮೋದಿ ಸರ್ಕಾರ್ 3.0: ಕರಾವಳಿ ಬಿಜೆಪಿ ಸಂಭ್ರಮ

KannadaprabhaNewsNetwork | Published : Jun 10, 2024 12:45 AM

ಸಾರಾಂಶ

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಹಬ್ಬದ ರೀತಿಯಲ್ಲಿ ಜಿಲ್ಲಾದ್ಯಂತ ಆಚರಿಸಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸತತ ೩ ನೇ ಬಾರಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಭಾನುವಾರ ದ.ಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಭಾನುವಾರ ರಾತ್ರಿ 7.15ಕ್ಕೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಹಬ್ಬದ ರೀತಿಯಲ್ಲಿ ಜಿಲ್ಲಾದ್ಯಂತ ಆಚರಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ಬೂತ್‌ನಲ್ಲಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಕ್ಷದ ಕಚೇರಿಯಲ್ಲಿ ಒಟ್ಟು ಸೇರಿ ಎಲ್‌ಇಡಿ ಮೂಲಕ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಜೆ ಆರು ಗಂಟೆಯಿಂದಲೇ ಸಂಭ್ರಮಾಚರಣೆ ಆರಂಭಿಸಲಾಯಿತು. ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜಯಘೋಷ ಕೂಗಿದರು. ಇಲ್ಲಿಯೂ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರ ವ್ಯವಸ್ಥೆಗೊಳಿಸಲಾಗಿತ್ತು.

ಶಾಸಕ ವೇದವ್ಯಾಸ್‌ ಕಾಮತ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಜಿಲ್ಲಾ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು.

ಮೋದಿ ಅವರು 3 ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಪುತ್ತೂರಿನ ಗಾಂಧಿ ಕಟ್ಟೆ ಬಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೋದಿ 3.0: ಇಂದು ಪ್ರಕೃತಿ ಬಸ್‌ ಪ್ರಯಾಣ ಉಚಿತ!

ಕನ್ನಡಪ್ರಭ ವಾರ್ತೆ ಮೂಲ್ಕಿನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಇದೇ ಸಂಭ್ರಮದಲ್ಲಿ ಮಂಗಳೂರಿನ ಪ್ರಕೃತಿ ಬಸ್ಸಿನ ಸಿಬ್ಬಂದಿಗಳಾದ ಪ್ರಸಾದ್ ಕುಲಾಲ್ ಮತ್ತು ತಿಲಕ್ ಮತ್ತು ಇನ್ನಿತರ ಅಭಿಮಾನಿಗಳು ಸೋಮವಾರ ಇಡೀ ದಿನ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿದ್ದಾರೆ. ಕಟೀಲು ,ಕಿನ್ನಿಗೊಳಿ, ಕಾವೂರು ,ಪದವಿನಂಗಡಿ , ಮಂಗಳೂರು ನಡುವೆ ಸಂಚರಿಸುವ ಈ ಬಸ್‌ನಲ್ಲಿ ಒಂದು ದಿನ ಪ್ರಯಾಣ ಉಚಿತವಾಗಿರಲಿದೆ.

Share this article