ಕದನ ವಿರಾಮ ಚರ್ಚೆಗೆ ಮೋದಿ ಸಭೆ ಕರೆಯಲಿ: ಖರ್ಗೆ

KannadaprabhaNewsNetwork |  
Published : May 13, 2025, 11:57 PM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ವಿಚಾರವಾಗಿ ಏನೆಲ್ಲಾ ಬೆಳವಣಿಗೆ ನಡೆಯಿತು ಎಂಬುದನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ವಿಚಾರವಾಗಿ ಏನೆಲ್ಲಾ ಬೆಳವಣಿಗೆ ನಡೆಯಿತು ಎಂಬುದನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ತಾವೇ ಈ ಕದನ ವಿರಾಮ ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ. ಇವರು ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರ ಆಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರವಾಗಿ ಚರ್ಚಿಸಲು ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು. ಅಲ್ಲಿ ನಾವು ಎಲ್ಲವನ್ನೂ ಮಾತನಾಡುತ್ತೇವೆ. ಇಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಪ್ರಧಾನಿಯವರು ಆದಷ್ಟು ಬೇಗ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

‘ಕದನ ವಿರಾಮದ ಬಗ್ಗೆ ಮೋದಿ ಸತ್ಯ ಹೇಳಲಿ’ಕಲಬುರಗಿ: ಭಾರತ-ಪಾಕಿಸ್ತಾನದ ಮಧ್ಯೆ ಏರ್ಪಟ್ಟ ಕದನ ವಿರಾಮ ಕುರಿತು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕು ಎಂದು ಆರ್‌ಡಿಪಿಆರ್‌ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಮೆರಿಕವೇ ಕದನ ವಿರಾಮ ಘೋಷಣೆ ಮಾಡಿಸಿದೆಯೋ? ಅಥವಾ ಖುದ್ದು ಮೋದಿಯವರೇ ಕದನ ವಿರಾಮದ ನಿರ್ಧಾರ ಕೈಗೊಂಡಿದ್ದಾರೋ? ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದರು. ಈ ಕಾರ್ಯಾಚರಣೆಯಲ್ಲಿ ಮೋದಿಯವರಿಗೆ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲ ನೀಡಿದೆ. ಇಷ್ಟಾದರೂ ಮೋದಿಯವರು ಇತರ ಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ. ಸಂಸತ್ ಅಧಿವೇಶನ ಕೂಡ ಕರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ್ ಬೆದರಿಕೆಗೆ ಹೆದರಿ ನೀವು ಈ ನಿರ್ಣಯ ಕೈಗೊಂಡಿದ್ದೀರಾ?. ಅತ್ತ ಪಾಕಿಸ್ತಾನ ಪ್ರಧಾನಿ ತಮ್ಮ ಸಂಸತ್ತಿನಲ್ಲಿ ಯುದ್ಧ ಗೆದ್ದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವುದರ ಹಿಂದಿನ ರಹಸ್ಯ ಏನು? ಎಂದು ಸಚಿವರು ಲೇವಡಿ ಮಾಡಿದರು.

ಸೋಮವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮೋದಿಯವರು ಯುದ್ದ ವಿರಾಮ ಘೋಷಣೆಯ ಹಿಂದಿನ ಸತ್ಯ ಕುರಿತು ಹೇಳಬೇಕಿತ್ತು. 56 ಇಂಚು ವಿಸ್ತಾರದ ಎದೆಯುಳ್ಳ ಪ್ರಧಾನಿ ಕೇವಲ ಕೆಂಪುಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದ್ದಾರೆ ಎಂದು ಟಾಂಗ್ ನೀಡಿದರು.

ಪಾಕಿಸ್ತಾನವನ್ನು ಈವರೆಗೆ ನಾಲ್ಕು ಬಾರಿ ಸೋಲಿಸಿದ್ದಾಗಿದೆ. ಆದರೆ, ಈ ಬಾರಿ ವಿದೇಶಾಂಗ ನೀತಿಯಲ್ಲಿಯೇ ಭಾರತ ಸೋತಿದೆ. ಪಹಲ್ಗಾಂ ದಾಳಿ ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ? ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಪಾಕ್‌ ವಿರುದ್ಧ ಯುದ್ಧ ಆರಂಭಿಸಿದ ಗುರಿ ಈಡೇರಿತಾ?: ಸಚಿವ ಕೃಷ್ಣ

ವಿಜಯಪುರ: ಯುದ್ಧ ಘೋಷಣೆ ಮಾಡಿದಾಗ ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕು. ಇನ್ನೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಹಾಗೆ ಪಾಠ ಕಲಿಸಬೇಕು ಎಂದು ಬೆಂಬಲಿಸಿದ್ದೆವು. ಈಗ ಯುದ್ಧದ ಗುರಿ ಈಡೇರಿತಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದ್ದಾರೆ. ಪಾಕ್‌ ಕದನ ವಿರಾಮ ಉಲ್ಲಂಘನೆ ಬಗ್ಗೆ ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಮಾಡುವಾಗ ಯಾವ ಉದ್ದೇಶ, ಗುರಿ ಇಟ್ಟುಕೊಂಡು ಕದನ‌ ಆರಂಭ ಮಾಡಿದ್ದೆವೋ ಆ ಗುರಿ ಈಡೇರಿತಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಅಂದುಕೊಂಡಿದ್ದೆವು ಆ ಪಾಠ ಈಡೇರಿತಾ? ಮೂರ್ನಾಲ್ಕು ದಿನ ಪ್ರಯತ್ನ ಮಾಡಿ ಅಲ್ಲಿಗೆ ಬಿಟ್ಟರೆ ಪಾಕಿಸ್ತಾನಕ್ಕೆ ಇನ್ನಷ್ಟು ಇಂಬು ಕೊಟ್ಟಂಗಾಗುತ್ತದೆ ಎಂಬ ಅನುಮಾನ ಹುಟ್ಟಲು ಶುರುವಾಗುತ್ತೆ ಎಂದರು.ನಾವು ಕದನ ಮಾಡುವುದು ಸರಿ. ಅಮೆರಿಕದವರು ಹೇಳಿದರು ಎಂಬ ಕಾರಣಕ್ಕೆ ಯುದ್ಧ ನಿಲ್ಲಿಸುವುದಾ ಎಂದು ಪ್ರಶ್ನಿಸಿದರು. ಅಮೆರಿಕ ನಮ್ಮ‌ ಆಂತರಿಕ ವಿಚಾರ ತೀರ್ಮಾನ ಮಾಡುವುದಾದರೆ, ನಮ್ಮ ಸಾರ್ವಭೌಮತ್ವದ ವಿಷಯ ಏನು? ಕಾಶ್ಮೀರದ ವಿಚಾರದಲ್ಲಿ ಅಮೆರಿಕದವರು ಮಧ್ಯಸ್ಥಿಕೆ ವಹಿಸುತ್ತೇವೆ ಅಂತಾರೆ. ಇದಕ್ಕಿಂತ ಭಾರತಕ್ಕೆ ದೊಡ್ಡ ಹಿನ್ನಡೆಯಿಲ್ಲ. ಇದು ಆಂತರಿಕ ವಿಚಾರ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಬೇರೆ ದೇಶದವರು ಬಂದು ನಮ್ಮ‌ಆಂತರಿಕ ವಿಚಾರದಲ್ಲಿ ನ್ಯಾಯ ಪಂಚಾಯತಿ ಮಾಡುವುದು, ಅಲ್ಲಿಗೆ ಕಾಶ್ಮೀರ ಸಮಸ್ಯೆ ಮುಗಿಯಿತಾ?. ಅಥವಾ ಮರಳಿ‌ ಆರಂಭವಾಯಿತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲದಂತಾಗಿದೆ ಎಂದರು.

ಯುದ್ಧದ ಕ್ರೆಡಿಟ್ ಸೇನೆ, ಕೇಂದ್ರ ಎರಡಕ್ಕೂ ಸಲ್ಲಬೇಕು: ಯದುವೀರ್‌

ಮೈಸೂರು: ಖಂಡಿತವಾಗಿಯೂ ಯುದ್ಧದ ಕ್ರೆಡಿಟ್ ಸೈನಿಕರಿಗೆ ಸಲ್ಲಬೇಕು. ಜೊತೆಗೆ ಯುದ್ಧದ ತಂತ್ರ ರೂಪಿಸಿದ ಕೇಂದ್ರ ಸರ್ಕಾರಕ್ಕೂ ಸಲ್ಲಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು. ಯುದ್ಧದ ಕ್ರೆಡಿಟ್ ಸೇನೆಗೆ ಮಾತ್ರ ಸಲ್ಲಬೇಕು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್‌ನವರಿಗೆ ಸಂದೇಶ ಕೊಡುವ ಸ್ಥಾನದಲ್ಲೂ ನಾನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೈಜೋಡಿಸಿ ನಿಲ್ಲಬೇಕು. ಕದನ ವಿರಾಮದ ಬಗ್ಗೆ ಭಾರತೀಯ ಸಶಸ್ತ್ರ ಪಡೆಯ ನಾಯಕರ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಅದರಲ್ಲಿ ಸರ್ಕಾರದ ಪಾತ್ರವೇನಿದೆ ಎಂದು ನಾವು ಕಾಂಗ್ರೆಸ್‌ ನಾಯಕರನ್ನು ಕೇಳಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.ಇನ್ನು, ಪಾಕಿಸ್ತಾನ ವಿರುದ್ಧದ ಯುದ್ಧದ ವಿಚಾರವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಅಂದಿನ ಕಾಲಕ್ಕೆ ತಕ್ಕಂತೆ ಇಂದಿರಾಗಾಂಧಿ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ಮೋದಿಯವರು ಅವರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ