ಕನ್ನಡಪ್ರಭವಾರ್ತೆ ಚಳ್ಳಕೆರೆ
ಮೋದಿ ಮೂರನೇ ಬಾರಿಗೆ ಪ್ರಧಾಯಾಗಬೇಕೆಂದು ದೇಶದ ೧೪೦ ಕೋಟಿ ಜನ ಬಯಸುತ್ತಿದ್ದಾರೆ. ಕಳೆದ ೧೦ ವರ್ಷಗಳ ಅವರ ಸಾಧನೆ ಮತ್ತೊಮ್ಮೆ ಅವರನ್ನು ಅಧಿಕಾರಕ್ಕೆ ತರುತ್ತದೆ. ಅವರ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದಕಾರಜೋಳ ತಿಳಿಸಿದರು.ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಮೈತ್ರಿ ನಂತರ ಮೊದಲಬಾರಿಗೆ ಜೆಡಿಎಸ್ - ಬಿಜೆಪಿ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿ, ಈ ಕ್ಷೇತ್ರದಲ್ಲಿ ೧೯ ಲಕ್ಷ ಮತದಾರರು ಇದ್ದಾರೆ. ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಎಲ್ಲಾ ಹಂತದ ಕಾರ್ಯಕರ್ತರು, ಮುಖಂಡರು ಮನೆ, ಮನೆಗೂ ತೆರಳಿ ಮತದಾರರಿಗೆ ಕಮಲ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ಮನವಿ ಮಾಡಿದರು.
ಮಧ್ಯಕರ್ನಾಟಕ ಚಿತ್ರದುರ್ಗ ಜಿಲ್ಲೆ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ, ನೀರಾವರಿ ಯೋಜನೆ ಜಾರಿಗೆ ತರಬೇಕಿದೆ. ಚಿತ್ರದುರ್ಗದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.ಜೆಡಿಎಸ್ ಯುವ ಧುರೀಣ, ಪರಾಜಿತ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ವಿಭಿನ್ನ ಹೊರಾಟ ನಡೆಸಿದ್ದೆವು. ಆದರೆ, ಇಂದು ಒಂದ್ದಾಗಿದ್ದು, ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತಮ ಆಡಳಿತದ ಅವಶ್ಯಕತೆ ಇದೆ. ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಗೋವಿಂದ ಕಾರಜೋಳ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ಹಲವಾರು ಜನಪ್ರಿಯ ಕಾರ್ಯಕ್ರಮಗಳು ದೇಶದ ಕೋಟ್ಯಾಂತರ ಜನರಿಗೆ ಹೊಸ ಆತ್ಮವಿಶ್ವಾಸ ತುಂಬಿವೆ. ದೇಶದ ಸುಮಾರು ೮೦ ಕೋಟಿ ಜನರಿಗೆ ಪ್ರತಿತಿಂಗಳು ಉಚಿತ ಅಕ್ಕಿ ನೀಡಲಾಗುತ್ತಿದೆ, ೧೦ ಕೋಟಿ ಮಹಿಳೆಯರಿಗೆ ಉಜ್ವಲಯೋಜನೆಯಡಿ ಗ್ಯಾಸ್‌ಸೌಲಭ್ಯ ಕಲ್ಪಿಸಿದೆ, ಕಾಂಗ್ರೆಸ್ ಪಕ್ಷದ ೬೦ ವರ್ಷಗಳ ಆಡಳಿತದಲ್ಲಿ ಸಾಧನೆ ಮಾಡಲಾಗದ್ದನ್ನು ಕೇವಲ ೧೦ ವರ್ಷದಲ್ಲಿ ಮೋದಿ ಮಾಡಿತೋರಿಸಿದ್ಧಾರೆಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಎರಡೂ ಪಕ್ಷಗಳ ಕಾರ್ಯಕರ್ತರ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಬಸವರಾಜಮಂಡಿಮಠ ಕಂಡಕೂಡಲೇ ಅಭ್ಯರ್ಥಿ ಗೋವಿಂದಕಾರಜೋಳ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ದೊಡ್ಡನಗೌಡ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಎಚ್. ಆನಂದಪ್ಪ, ಸಣ್ಣಬೋರಣ್ಣ, ನಗರಸಭಾ ಸದಸ್ಯರಾದ ವಿ.ವೈ. ಪ್ರಮೋದ್, ಸಿ.ಶ್ರೀನಿವಾಸ್, ತಿಪ್ಪಮ್ಮ, ಕವಿತಾನಾಯಕಿ, ನಾಗಮಣಿ, ಬಿಜೆಪಿ ಸದಸ್ಯರಾದ ಎಸ್. ಜಯಣ್ಣ, ವೆಂಕಟೇಶ್, ಪಾಲಮ್ಮ, ಜಯಪಾಲಯ್ಯ, ಸೋಮಶೇಖರ್ ಮಂಡಿಮಠ, ಬಾಳೆಮಂಡಿ ರಾಮದಾಸ್, ಅನಿಲ್‌ಕುಮಾರ್, ಶಶಿಧರನಾಯಕ, ರವೀಂದ್ರಪ್ಪ, ಎಲೆಭದ್ರಣ್ಣ, ಮಾತೃಶ್ರೀ ಎನ್. ಮಂಜುನಾಥ ಇದ್ದರು.