ಕನ್ನಡಪ್ರಭ ವಾರ್ತೆ ಬೆಂಗಳೂರು
‘ಇದು ಮುಕ್ತ ವ್ಯಾಪಾರವಲ್ಲ ಆರ್ಥಿಕ ಬಲವಂತ. ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ, ಪರಸ್ಪರ ಗೌರವದ ಬುನಾದಿ ಮೇಲೆ ಸ್ಥಾಪನೆಯಾಗಬೇಕು. ಒತ್ತಡ, ಬೆದರಿಕೆ, ಹೇರಿಕೆಗಳಿಂದ ಅಲ್ಲ. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಗಮನಿಸಿದರೆ ಇದು ಒಡೆಯನ ಆಜ್ಞೆಗೆ ಸೇವಕ ತಲೆಯಾಡಿಸಿದಂತಿದೆ’ ಎಂದೂ ಅವರು ಕಿಡಿಕಾರಿದ್ದಾರೆ.
ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ಮೋದಿ ಈಗ ಅದೇ ಟ್ರಂಪ್ ಆಜ್ಞಾಪಾಲಕರಾಗುವ ದೈನೇಸಿ ಸ‍್ಥಿತಿಗೆ ಬಂದಿದ್ದು ವಿಷಾದನೀಯ. ಮೋದಿಯವರ 56 ಇಂಚಿನ ಎದೆ ಮತ್ತು ವಿಶ್ವಗುರುವಿನ ಕಿರೀಟವನ್ನು ಟ್ರಂಪ್ ಪ್ರತಿದಿನ ಕುಟ್ಟಿ ಪುಡಿ ಮಾಡುತ್ತಿದ್ದಾರೆ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಮೂಲಕ ಟೀಕಿಸಿದ್ದಾರೆ.ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೋದಿಯವರ ಉದ್ಯಮ ಸ್ನೇಹಿತ ಅದಾನಿ ಅವರ ರಕ್ಷಣೆ ಮತ್ತು ಜೆಫ್ರಿ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ, ಸಂಪುಟದ ಸದಸ್ಯರ ಹೆಸರುಗಳಿಂದ ಸೃಷ್ಟಿಯಾಗಿರುವ ಒತ್ತಡದ ಭಾಗವಾಗಿ ಕೇಂದ್ರವು ದೇಶ ವಿರೋಧಿ ಒಪ್ಪಂದ ಒಪ್ಪಿಕೊಂಡಿದೆ. ಇದನ್ನು ನಿರಾಕರಿಸಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಟ್ರಂಪ್ ಏರಿಸಿದ್ದರು. ಈಗ ಅದನ್ನು ಶೇ.25ರಿಂದ 18ಕ್ಕೆ ಇಳಿಸಿ ಭಾರತಕ್ಕೆ ಮಹದುಪಕಾರ ಮಾಡಿದಂತೆ ನಾಟಕವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿದೆ. ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ಮೋದಿ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹ.
ರೈತರಿಗೆ ಆತ್ಮಹತ್ಯೆಯೇ ದಾರಿ?:
ಈಗ ಈ ಆಮದು ಸುಂಕ ರದ್ದುಗೊಳಿಸಿದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ. ಇದರಿಂದ ಭಾರತದ ರೈತರು ದಿವಾಳಿ ಸ್ಥಿತಿ ತಲುಪಲಿದ್ದು, ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲದಾಗಲಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಈಗ ವಿದೇಶಾಂಗ ನೀತಿ ಎಂದರೆ ಭಾಷಣ, ಘೋಷಣೆ, ಕೈಕುಲುಕಾಟ ಮತ್ತು ಸ್ವಪ್ರಚಾರವಷ್ಟೇ ಎಂದು ಪ್ರಧಾನಿ ಮೋದಿ ಅವರು ತಿಳಿದುಕೊಂಡಂತಿದೆ. ಚೀನಾ ಮತ್ತು ಅಮೆರಿಕದಂಥ ದೈತ್ಯ ಶಕ್ತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತ ತನ್ನ ಅಸ್ಮಿತೆಯನ್ನು ಸಂಪೂರ್ಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.