ಮೆಗಾ ಡೇರಿ ಉದ್ಘಾಟನೆಗೆ ಮೋದಿ ಆಹ್ವಾನಿಸುವ ಚಿಂತನೆ

KannadaprabhaNewsNetwork |  
Published : Sep 02, 2025, 12:00 AM IST
1ಎಚ್ಎಸ್ಎನ್19 :  | Kannada Prabha

ಸಾರಾಂಶ

ಹಾಸನ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ಒಟ್ಟು 2392.42 ಕೋಟಿಗಳಷ್ಟು ವಹಿವಾಟು ನಡೆಸಿ, ಕಳೆದ ಸಾಲಿನಿಗಿಂತ ಶೇಕಡಾ 8.58ರಷ್ಟು ಹೆಚ್ಚಳ ಸಾಧಿಸಿದೆ. ತೆರಿಗೆ ಪೂರ್ವ ಲಾಭ ೨೨.೨೯ ಕೋಟಿ ಆಗಿದ್ದು, ಬೈಲಾ ಪ್ರಕಾರ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿದ ನಿವ್ವಳ ಲಾಭ ೫.೦೪ ಕೋಟಿಯನ್ನು ಸದಸ್ಯ ಸಂಘಗಳಿಗೆ ಬೋನಸ್, ಡಿವಿಡೆಂಡ್ ಮತ್ತು ಇತರ ರೂಪದಲ್ಲಿ ಹಂಚಲಾಗಿದೆ. ಈ ಸಾಲಿನಲ್ಲಿ ದಿನಸಿ ಸರಾಸರಿ ೧೪.೧೫ ಲಕ್ಷ ಲೀಟರ್ ಹಾಲು (೧೭೧೭ ಸಂಘಗಳಿಂದ) ಸಂಗ್ರಹಣೆ ನಡೆದಿದ್ದು, ಗರಿಷ್ಠ ೧೫.೧೨ ಲಕ್ಷ ಲೀಟರ್ ಹಾಲು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿ 724 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ 2026ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಉದ್ಘಾಟನೆಯಾಗಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು. ನಗರದ ಡೇರಿಯಲ್ಲಿ ಸೋಮವಾರ ನಡೆದ ಹಾಸನ ಹಾಲು ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಸನ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ಒಟ್ಟು 2392.42 ಕೋಟಿಗಳಷ್ಟು ವಹಿವಾಟು ನಡೆಸಿ, ಕಳೆದ ಸಾಲಿನಿಗಿಂತ ಶೇಕಡಾ 8.58ರಷ್ಟು ಹೆಚ್ಚಳ ಸಾಧಿಸಿದೆ. ತೆರಿಗೆ ಪೂರ್ವ ಲಾಭ ೨೨.೨೯ ಕೋಟಿ ಆಗಿದ್ದು, ಬೈಲಾ ಪ್ರಕಾರ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿದ ನಿವ್ವಳ ಲಾಭ ೫.೦೪ ಕೋಟಿಯನ್ನು ಸದಸ್ಯ ಸಂಘಗಳಿಗೆ ಬೋನಸ್, ಡಿವಿಡೆಂಡ್ ಮತ್ತು ಇತರ ರೂಪದಲ್ಲಿ ಹಂಚಲಾಗಿದೆ. ಈ ಸಾಲಿನಲ್ಲಿ ದಿನಸಿ ಸರಾಸರಿ ೧೪.೧೫ ಲಕ್ಷ ಲೀಟರ್ ಹಾಲು (೧೭೧೭ ಸಂಘಗಳಿಂದ) ಸಂಗ್ರಹಣೆ ನಡೆದಿದ್ದು, ಗರಿಷ್ಠ ೧೫.೧೨ ಲಕ್ಷ ಲೀಟರ್ ಹಾಲು ಸ್ವೀಕರಿಸಲಾಗಿದೆ. ಪ್ರಸ್ತುತ ಖರೀದಿ ದರವನ್ನು ಸಂಘಗಳಿಗೆ ೩೬.೧೭ ಮತ್ತು ಉತ್ಪಾದಕರಿಗೆ ೩೪.೫೦ ನಂತೆ ನಿಗದಿ ಮಾಡಲಾಗಿದೆ ಎಂದರು.

೨೦೨೪-೨೫ರಲ್ಲಿ ಕಟ್ಟಡ ನಿರ್ಮಾಣ, ಯಂತ್ರೋಪಕರಣ ಖರೀದಿ, ಮೇವು ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಒಟ್ಟಾರೆ ೧೨ ಕೋಟಿ ಸಹಾಯಧನ ಒದಗಿಸಲಾಗಿದೆ. ಮುಂದಿನ ಸಾಲಿನಲ್ಲಿ ೨೫.೪೦ ಕೋಟಿ ಸಹಾಯಧನ ವಿತರಿಸಲು ಯೋಜನೆ ಇದೆ. ೨೦೨೫-೨೬ಕ್ಕೆ ೨೭೧೯.೮೦ ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದ್ದು, ನಿವ್ವಳ ಲಾಭ ೪.೫೦ ಕೋಟಿ ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ಹೊಸ ೭೫ ಸಂಘಗಳಿಗೆ ಎ.ಎಂ.ಸಿ.ಯು. ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯ ಸಂಘಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ೬೦ ಸಾವಿರ ರಾಸುಗಳನ್ನು ರಾಸು ವಿಮಾ ಯೋಜನೆಗೆ ಒಳಪಡಿಸುವ ಗುರಿ ನಿಗದಿಪಡಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು. ರಾಜ್ಯದ ೧೬ ಹಾಲು ಒಕ್ಕೂಟಗಳಲ್ಲಿ ಹಾಸನ ಒಕ್ಕೂಟವು ಅತಿ ಕಡಿಮೆ ಆಡಳಿತಾತ್ಮಕ ವೆಚ್ಚವನ್ನು (ಶೇ.೧.೬೯) ಮಾಡುತ್ತಿದೆ. ಬೆಂಗಳೂರು ಒಕ್ಕೂಟದಲ್ಲಿ ಈ ವೆಚ್ಚ ಶೇ.೪.೪೯ ಇದೆ. ಪ್ರಸ್ತುತ ಎಲ್ಲಾ ಹಾಲು ಒಕ್ಕೂಟಗಳು ನಷ್ಟದಲ್ಲಿದ್ದು, ಹಾಸನದಲ್ಲಿ ೭ ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.ಹಾಸನದಲ್ಲಿ ಪ್ರತಿದಿನ ೧೪.೩೦ ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದ್ದು, ಅದರಲ್ಲಿ ೧.೭೦ ಲಕ್ಷ ಲೀಟರ್ ಹಾಲು ಭಾರತೀಯ ಸೇನೆಗೆ ಮಾರಾಟವಾಗುತ್ತಿದೆ. ಶೀಘ್ರದಲ್ಲೇ ಹಾಸನ ಒಕ್ಕೂಟ, ಬೆಂಗಳೂರು ಒಕ್ಕೂಟವನ್ನು ಹಿಂದಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ೨೪೦ ಹುದ್ದೆಗಳು ಖಾಲಿ ಇದ್ದರೂ, ಇರುವ ಅಧಿಕಾರಿಗಳಿಂದ ಉತ್ತಮ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಕೊಡಗು ಡೇರಿಯನ್ನು ೨೦ ಕೋಟಿ ವೆಚ್ಚದಲ್ಲಿ ನವೀಕರಣ ಮಾಡುವ ಯೋಜನೆ ಇದೆ ಎಂದರು. ೧೯೯೪ರಲ್ಲಿ ನಾನು ಮೊದಲ ಬಾರಿಗೆ ಅಧ್ಯಕ್ಷನಾದಾಗ ಒಕ್ಕೂಟದ ವಾರ್ಷಿಕ ವಹಿವಾಟು ಕೇವಲ ೪ ಕೋಟಿ ಇತ್ತು. ಇಂದು ಅದು ೩ ಸಾವಿರ ಕೋಟಿಗೆ ತಲುಪಿದೆ ಎಂದು ರೇವಣ್ಣ ನೆನಪಿಸಿದರು. ಸಭೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ನಿರ್ದೇಶಕರಾದ ನಾರಾಯಣಗೌಡ, ಸತೀಶ್ ಹೊನ್ನವಳಗಳಿ, ರಾಮಚಂದ್ರ ಗೌಡ, ಚನ್ನೇಗೌಡ, ಬಸವರಾಜ, ಸುನಾಲ್, ನಿಂಗೇಗೌಡ, ಸ್ವಾಮಿಗೌಡ, ಹೆಚ್‌ಟಿ. ಆಶಾ, ವಸಂತ, ಎಂಎಸ್. ಸತೀಶ್, ಹೇಮಂತ್ ಕುಮಾರ್, ವಿನೋದ್, ಮಂಜಣ್ಣ, ಹೊಸೂರು ಗಂಗಣ್ಣ, ಮೈಸೂರು ರಘು, ಶಿವಣ್ಣ, ವಿನಯ್ ಕುಮಾರ್ ಇತರರು ಉಪಸ್ಥಿತರಿದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ