ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಮುಖ ನೋಡಿ ಮತ ಹಾಕುವ ಮೂಲಕ ಕಲಬುರಗಿ ಜನತೆ ಅಭಿವೃದ್ಧಿಯಿಂದ 20 ವರ್ಷ ಹಿಂದೆ ಹೋಗಿದ್ದಾರೆ, ಹೀಗಾಗಿ ಈ ಬಾರಿ ಮತ್ತದೇ ತಪ್ಪು ಮಾಡೋದಿಲ್ಲವೆಂಬ ವಿಶ್ವಾಸ ತಮಗಿದೆ ಎಂದಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಈ ಬಾರಿ ಜನತೆ ಅಭಿವೃದ್ಧಿ ಅಜೆಂಡಾ, ಪಂಚ ಗ್ಯಾರಂಟಿಗಳೊಂದಿಗೆ ಬಂದಿರುವ ಕಾಂಗ್ರೆಸ್ ಕೈ ಹಿಡಿಯೋದು ಪಕ್ಕಾ, ರಾಧಾಕೃಷ್ಣ ದೊಡ್ಮನಿಯವರು 2 ಲಕ್ಷ ಲೀಡ್‌ನಿಂದ ಗೆಲ್ಲೋದು ನಿಶ್ಚಿತ ಎಂದು ಹೇಳಿದ್ದಾರೆ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ಕಲಂ 371 (ಜೆ) ಕೊಡುಗೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಕೆಕೆಆರ್‌ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ಅನುದಾನ ನೀಡಲು ಮುಂದಾಗಿರೋದು ಕಾಂಗ್ರೆಸ್ ಪಕ್ಷ, ಈ ಭಾಗದಲ್ಲಿ ಇಎಸ್‌ಐಸಿ, ಜಯದೇವದಂತಹ ಆರೋಗ್ಯ ಸಂಸ್ಥೆ ತಂದಿದ್ದು ಕಾಂಗ್ರೆಸ್, ಹೀಗೆ ಸಾಲು ಸಾಲು ಪ್ರಗತಿ ಯೋಜನೆಗಳೊಂದಿಗೆ ಕಾಂಗ್ರೆಸ್ ಇಲ್ಲಿರುವಾಗ ಮತದಾರರು ಇನ್ನಷ್ಟೂ ಕೈ ಬಲಪಡಿಸಿ ಪ್ರಗತಿ ವೇಗ ಹೆಚ್ಚುವಂತೆ ಮಾಡಬೇಕೆಂದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ದೂರದೃಷ್ಟಿಯ ನಾಯಕರು. ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯರಾಗಿದ್ದಾರೆ. ಇವರನ್ನು ಗೆಲ್ಲಿಸುವ ಮೂಲಕ ಕಲಬುರಗಿ ಇನ್ನಷ್ಟು ಪ್ರಗತಿ ಹೊಂದಲು ಸಹಕಾರಿಯಾಗಲಿದೆ. ಕಲಬುರಗಿಯ 25 ಲಕ್ಷ ಮತದಾರರ ಪೈಕಿ 11 ಲಕ್ಷದಷ್ಟು ಮಹಿಳೆಯರಿದ್ದಾರೆ. ಇವರೆಲ್ಲರೂ ಪಂಚ ಗ್ಯಾರಂಟಿಗಳಿಗೆ ಮನಸೋತಿದ್ದಾರೆಂಬುದು ಪ್ರಚಾರಕ್ಕೆ ಹೋದಾಗೆಲ್ಲಾ ಅನುಭವಕ್ಕೆ ಬಂದಿದೆ. ಹೀಗಾಗಿ ಈ ಬಾರಿ ಶೇ.80ರಷ್ಟು ಮಹಿಳೆಯರು ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆಂದರು.ಬಿಜೆಪಿಯ ಪ್ರಧಾನಿ ಮೋದಿ ಅವರಿಗೆ ಚುನಾವಣೆ ಬಂದಾಗಷ್ಟೇ ಕಲಬುರಗಿ ದಾರಿ ನೆನಪಾಗುತ್ತದೆ. 2019ರಿಂದ ಇಲ್ಲಿಯವರೆಗೂ ಅದೇ ಮಾಡಿದ್ದಾರೆ. ಇಲ್ಲಿ ಏಮ್ಸ್ ಕೊಡಿ ಎಂಬ ಬೇಡಿಕೆಗೆ ಮೌನವಾಗಿದ್ದಾರೆ. ರಾಯಚೂರಿಗಾದರೂ ಕೊಡಿ ಎಂದರೂ ಕಿವುಡಾಗಿದ್ದಾರೆ. ಹಿಂದುಳಿದ ಭಾಗದಲ್ಲಿ ಪ್ರಗತಿ ಅವರಿಗೆ ಬೇಕಿಲ್ಲ. ಬರೀ ರಾಜಕೀಯವಾಗಿ ಪಕ್ಷಕ್ಕೆ ಲಾಭ ಪಡೆಯಲು ಇಲ್ಲಿಗೆ ಬಂದು ಹೋಗುತ್ತಿದ್ದಾರೆಂದು ದೂರಿದರು.
ಕೋಟನೂರು ಘಟನೆಯಲ್ಲಿ ಸರಕಾರ ಸಿಐಡಿ ತನಿಖೆಗೆ ಮುಂದಾಗಿದೆ. ಆದಾಗ್ಯೂ ಬಿಜೆಪಿ ಇದನ್ನೇ ಪದೇ ಪದೇ ಪ್ರಸ್ತಾಪಿಸಿ ಭಾವನಾತ್ಮಕವಾಗಿಸಿ ರಾಜಕೀಯ ಲಾಭಕ್ಕೆ ಮಂದಾಗುತ್ತಿರೋದು ಆ ಪಕ್ಷದ ಮುಖಂಡರನ್ನು ಆವರಿಸಿರುವ ಸೋಲಿನ ಹತಾಶೆಗೆ ಹಿಡಿದ ಕನ್ನಡಿ ಎಂದರು.ಸೆಂಟರ್ ಆಫ್ ಎಕ್ಸಲನ್ಸ್ ಹೋಯ್ತು, ರೇಲ್ವೆ ವಿಭಾಗೀಯ ಕಚೇರಿ, ರೇಲ್ವೆ ಕೋಚ್ ಫ್ಯಾಕ್ಟರಿ ಇವೆಲ್ಲವೂ ಸ್ಥಗಿತಗೊಂಡರೂ ಹಿಂದಿನ ಸಂಸದರೂ ಬಾಯಿ ಬಿಚ್ಚಿಲ್ಲ. ಕೊನೆ ಗಳಿಗೆಯಲ್ಲಿ ವಂದೇ ಭಾರತ ರೈಲು ಓಡಿಸಿದ್ದೇ ದೊಡ್ಡದಾಗಿ ಹೇಳಿಕೊಂಡು ಅಡ್ಡಾಡುತ್ತಿರೋದು ನೋಡಿದರೆ ಇವರಿಗೆ ಸೋಲಿನ ಭೀತಿ ಶುರುವಾಗಿದೆ ಎಂದು ಡಾ. ಅಜಯ್ ಸಿಂಗ್ ಟೀಕಿಸಿದರು.