- ಪ್ರಧಾನಿ ನರೇಂದ್ರ ಮೋದಿಗೆ ಪಂಥಾಹ್ವಾನ ನೀಡಿದ ಸಿಎಂ । ಹೊನ್ನಾಳಿಯಲ್ಲಿ ಪ್ರಜಾಧ್ವನಿ ಸಮಾವೇಶ-2 ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಹೊನ್ನಾಳಿ
ಪ್ರಧಾನಿ ನರೇಂದ್ರ ಮೋದಿ ತಮ್ಮ 10 ವರ್ಷಗಳ ಅಧಿಕಾರ ಅವಧಿಯಲ್ಲಿ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.ಹೊನ್ನಾಳಿಯಲ್ಲಿ ಭಾನುವಾರ ಪ್ರಜಾಧ್ವನಿ ಸಮಾವೇಶ-2 ಉದ್ಘಾಟಿಸಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ತಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯ ಹತ್ತು ಜನೋಪಯೋಗ ಕೆಲಸಗಳನ್ನು ತೋರಿಸಲಿ ನೋಡೋಣ ಎಂದರು.
ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ನಾನು ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯ, ಯೋಜನೆಗಳು, ಭಾಗ್ಯಗಳ ಪಟ್ಟಿ ಸಮೇತ ನಾನು ಸಾಧನೆ ಮುಂದಿಡುತ್ತೇನೆ. ನೀವು ಪ್ರಧಾನಿಯಾಗಿ 10 ವರ್ಷದಲ್ಲಿ ಮಾಡಿದ ಸಾಧನೆಗಳ ಪಟ್ಟಿಯನ್ನು ನಿಮಗೆ ತಾಕತ್ತಿದ್ದರೆ ಸಮಸ್ತ ಭಾರತೀಯರ ಮುಂದೆ ಹೇಳಿ ನೋಡೋಣ ಎಂದರು.
ಟಿಎ, ಡಿಎ ಪಡೆಯಲು ಕಳಿಸಿದ್ದರಾ?:
ಮೋದಿ ಸರ್ಕಾರವು ರಾಜ್ಯಕ್ಕೆ ಆರ್ಥಿಕವಾಗಿ ತೀವ್ರ ಅನ್ಯಾಯ ಮಾಡಿತು. ತೀವ್ರ ಬರಗಾಲ ಬಂದಾಗ, ಅತಿವೃಷ್ಟಿ, ನೆರೆ, ಪ್ರವಾಹ ಬಂದಾಗಲೂ ರಾಜ್ಯಕ್ಕೆ ಅನ್ಯಾಯ ಮಾಡಲಾಯಿತು. ಆಗಲೂ ಸಿದ್ದೇಶ್ವರ ಬಾಯಿ ಬಿಡಲಿಲ್ಲ. ಮತ್ತೆ ಇಂತಹವರನ್ನು ಲೋಕಸಭೆಗೆ ಸದಸ್ಯರಾಗಿ ಕಳಿಸಿದ್ದಿರಿ. 4 ಅವಧಿಗೆ ಸಂಸದರಾದ ಸಿದ್ದೇಶ್ವರ ಅಸಮರ್ಥರೆಂಬ ಕಾರಣಕ್ಕೆ ಕೇಂದ್ರ ಮಂತ್ರಿ ಪದವಿ ಕಳೆದುಕೊಂಡರು. ಸಂಸದರಾಗಿ ಸದನದಲ್ಲಿ ಒಮ್ಮೆಯೂ ಸಿದ್ದೇಶ್ವರ ಮಾತನಾಡಲಿಲ್ಲ. ಪತಿಯೇ ಮಾತನಾಡಿಲ್ಲವೆಂದರೆ ಇನ್ನು ಪತ್ನಿ ಗಾಯತ್ರಿ ಸಿದ್ದೇಶ್ವರ ಲೋಕಸಭೆಯಲ್ಲಿ ಏನು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಹೊನ್ನಾಳಿ ಕ್ಷೇತ್ರದ ಡಿ.ಜಿ.ಶಾಂತನಗೌಡ ಹಿರಿಯ ಶಾಸಕರು, ನಮ್ಮ ಪಕ್ಷದ ಹಿರಿಯ ಮುಖಂಡರು, ಶಿಸ್ತಿನ ಸಿಪಾಯಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಶಾಂತನಗೌಡರಿಗೆ ಒಳ್ಳೆಯ ಹುದ್ದೆ ಸಿಗಲಿದೆ. ರಾಜ್ಯದಲ್ಲಿ ಶೇ.7ರಷ್ಟು ಇರುವ ಕುರುಬ ಸಮಾಜಕ್ಕೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಕುರುಬರಿಗೆ ಟಿಕೆಟ್ ಕೊಟ್ಟಿಲ್ಲವೆಂದು ನಿಮಗ್ಯಾರಿಗೂ ಸಿಟ್ಟು ಬರುವುದಿಲ್ಲವೇ ಎಂಬು ಹೊನ್ನಾಳಿ ಕ್ಷೇತ್ರದ ಪ್ರಬಲ ಸಮುದಾಯಗಳಲ್ಲೊಂದು ಕುರುಬ ಜಾತಿಯವರಿಗೆ ಭಾವನಾತ್ಮಕವಾಗಿ ಅವರು ಸೆಳೆಯಲೆತ್ನಿಸಿದರು.
ರಾಜ್ಯದಲ್ಲಿ ಶೇ.7ರಷ್ಟು ಇರುವ ಕುರುಬ ಸಮಾಜಕ್ಕೆ ಬಿಜೆಪಿ ಟಿಕೆಟ್ ನೀಡಲಿಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಜಿ.ಬಿ. ವಿನಯಕುಮಾರಗೆ ದುಡ್ಡು ಕೊಟ್ಟು, ಬಿಜೆಪಿಯವರೇ ನಿಲ್ಲಿಸಿದ್ದಾರೆ. ಕುರುಬ ಸಮುದಾಯದ ಮುಖ್ಯಮಂತ್ರಿ ನಾನು ಬೇಕಾ ಅಥವಾ ಮತ್ತೊಬ್ಬರ ಸೇವಕನಾಗಿರುವ ವಿನಯಕುಮಾರ ಬೇಕಾ? ವಿನಯನಿಗೆ ನೀವು ಮತ ಹಾಕಿದರೆ, ಅದು ಬಿಜೆಪಿಗೆ ಮತ ನೀಡಿದಂತಾಗುತ್ತದೆ. ದಯವಿಟ್ಟು ಆ ಕೆಲಸ ಮಾತ್ರ ಮಾಡಬೇಡಿ. ಬಿಜೆಪಿಯವರು ಸೋಲುವುದು ಗ್ಯಾರಂಟಿ. ಮೋದಿ ಯಾವುದೇ ಕಾರಣಕ್ಕೂ ಮತ್ತೆ ಪ್ರಧಾನಿಯಾಗಲ್ಲ. ಗಾಯತ್ರಿ ಸಿದ್ದೇಶ್ವರ ಸಹ ಇಲ್ಲಿ ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
- - - ಕೋಟ್
ರಾಜ್ಯದ 1.21 ಲಕ್ಷ ಮಹಿಳೆಯರಿಗೆ ತಿಂಗಳಿಗೆ ₹2 ಸಾವಿರ ರು. ಬರುತ್ತಿದ್ದು, ನಿಮ್ಮ ಹೆಸರಿನಲ್ಲಿ ಧರ್ಮಸ್ಥಳದಲ್ಲಿ ಮಹಿಳೆಯರು ಪೂಜೆ ಮಾಡಿಸುತ್ತಿದ್ದಾರೆ ಎಂಬುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮಗೆ ಪತ್ರ ಬರೆದಿದ್ದರು. ಬರೀ ಮೋಸವನ್ನೇ ಮಾಡಿದ ಬಿಜೆಪಿಗೆ ಓಟು ಹಾಕಬೇಕಾ ಅಥವಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾಗೆ ಮತ ನೀಡಬೇಕಾ ಆಲೋಚಿಸಿ- ಸಿದ್ದರಾಮಯ್ಯ, ಮುಖ್ಯಮಂತ್ರಿ
- - - ಬಾಕ್ಸ್ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ₹5300 ಕೋಟಿ ಘೋಷಣೆಯಾಯಿತು. ಬಸವರಾಜ್ ಬೊಮ್ಮಾಯಿ ಸಹ ಬಜೆಟ್ ನಲ್ಲಿ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿದರು. ಆದರೆ, ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿ ಕೊಡಲಿಲ್ಲ. ಎನ್‌ಡಿಆರ್‌ಎಫ್ ಕಾನೂನಿನಂತೆ ನಮಗೆ ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದೆವು. ಆದರೆ, ಕೇಂದ್ರ ಕೊಟ್ಟಿದ್ದು ಕಡಿಮೆ. ನಮ್ಮ ರಾಜ್ಯದ 27 ಸಂಸದರು ಒಬ್ಬರೂ ಏನನ್ನೂ ಮಾತನಾಡಲಿಲ್ಲ. ಡಿ.ಕೆ.ಸುರೇಶ ಒಬ್ಬ ಬಿಟ್ಟರೆ ಉಳಿದ ರಾಜ್ಯದ ಸಂಸದರು ಕೋಲೆ ಬಸವನಂತೆ ತಲೆಹಾಕಿದರು. ನಿಮ್ಮ ಸಂಸದರು ಟಿಎ, ಡಿಎ ಕ್ಲೇಮ್ ಮಾಡೋಕಷ್ಟೇ ನೀವು ಆಯ್ಕೆ ಮಾಡಿ ಕಳಿಸಿದ್ದಾ? ಈ ಸಲ ಮಾತ್ರ ಬಿಜೆಪಿಗೆ ವೋಟು ಕೊಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.
- - - -ಫೋಟೋ ಇದೆ.