ದೇಶದ ಭದ್ರತೆ, ಭವಿಷ್ಯಕ್ಕಾಗಿ ಮತ್ತೊಮ್ಮೆ ಮೋದಿ ಗೆಲ್ಲಿಸಿ

KannadaprabhaNewsNetwork | Published : Mar 20, 2024 1:17 AM

ಸಾರಾಂಶ

ಬಾಗಲಕೋಟೆ: ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭದ್ರತೆ ಮತ್ತು ಭವಿಷ್ಯ ನಿರ್ಧರಿಸಲಿದ್ದು, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸುವುದು ಅವಶ್ಯಕವಾಗಿದೆ ಎಂದು ಬಾಗಲಕೋಟೆ ಲೋಕಸಭಾ ಚುನಾವಣೆ ಬಿಜೆಪಿ ಪ್ರಭಾರಿ ಲಿಂಗರಾಜ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭದ್ರತೆ ಮತ್ತು ಭವಿಷ್ಯ ನಿರ್ಧರಿಸಲಿದ್ದು, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸುವುದು ಅವಶ್ಯಕವಾಗಿದೆ ಎಂದು ಬಾಗಲಕೋಟೆ ಲೋಕಸಭಾ ಚುನಾವಣೆ ಬಿಜೆಪಿ ಪ್ರಭಾರಿ ಲಿಂಗರಾಜ ಪಾಟೀಲ ಹೇಳಿದರು.

ನಗರದ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ಮಂಗಳವಾರ ನಡೆದ ಭಾರತೀಯ ಜನತಾ ಪಕ್ಷ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಲೋಕಸಭೆ ಚುನಾವಣೆ ನಿರ್ವಹಣೆ ಸಮಿತಿಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಪರ್ವ ಆರಂಭವಾಗಿದೆ. ಪ್ರಪಂಚದಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೆ. ಭಾರತ ವಿರೋಧಿ ಶಕ್ತಿಗಳನ್ನು ನಿಗ್ರಹಿಸಿ ಮೆಟ್ಟಿನಿಲ್ಲುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗಿದೆ. ಸದೃಢ ಸಮಗ್ರ ಭಾರತದ ನಿರ್ಮಾಣ ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಈ ಬಾರಿಯ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಲೋಕಸಭೆ ಕ್ಷೇತ್ರದಲ್ಲಿ ವ್ಯಾಪ್ತಿಯ ಪ್ರತಿ ಮತಕ್ಷೇತ್ರದಲ್ಲೂ ಈಗಾಗಲೇ ಕೋರ್‌ ಕಮಿಟಿ ಹಾಗೂ ಪದಾಧಿಕಾರಿಗಳ ಸಭೆ ನಡೆದಿವೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಕಾರ್ಯಕರ್ತರು ನಿರ್ವಹಿಸುವ ಮೂಲಕ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡಿಸಲು ಪ್ರಯತ್ನಿಸಬೇಕೆಂದರು.

ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ದೇಶದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಒಂದು ದೇಶ ಒಂದು ಚುನಾವಣೆ ಜಾರಿಯಾಗಬೇಕಿದೆ. ಇನ್ನೂ ಅನೇಕ ಅಭಿವೃದ್ಧಿಪರ ಯೋಜನೆಗಳ ಮೂಲಕ ಪ್ರಪಂಚದಲ್ಲೇ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಂಕಲ್ಪ ಮೋದಿಯವರದ್ದಾಗಿದೆ. ಹಿಗಾಗಿ ಮೋದಿಜಿಯವ ಕೈ ಬಲಪಡಿಸಲು ಈ ಚುನಾವಣೆ ನಮಗೆ ಸಿಕ್ಕ ಸದಾವಕಾಶವಾಗಿದೆ ಎಂದು ಹೇಳಿದರು.

ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ದೇಶದ ಎಲ್ಲ ಕ್ಷೇತ್ರಗಳಲ್ಲಿ ಇಂದು ಅಭಿವೃದ್ಧಿಯನ್ನು ಕಾಣುತ್ತಿದ್ದೆವೆ, ಅಭಿವೃದ್ದಿ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು.

ಸಭೆಯಲ್ಲಿ ಮುಖಂಡರಾದ ಜಿ.ಎನ್. ಪಾಟೀಲ, ಡಾ.ಎಂ.ಎಸ್. ದಡ್ಡೆನ್ನವರ, ಸಿ.ವಿ. ಕೋಟಿ, ಮಹಾಂತೇಶ ಶೆಟ್ಟರ, ಸಂಗಣ್ಣ ಕಲಾದಗಿ, ಬಸವರಾಜ ಯಂಕಂಚಿ, ರಾಜು ರೇವಣಕರ್, ಲಕ್ಷ್ಮೀ ನಾರಾಯಣ ಕಾಸಟ್, ಸತ್ಯನಾರಾಯಣ ಹೆಮಾದ್ರಿ, ಭಾಗೀರಥಿ ಪಾಟೀಲ, ಸುಜಾತಾ ತತ್ರಾಣಿ, ಜ್ಯೋತಿ ಭಜಂತ್ರಿ, ಸುಜಾತಾ ಶಿಂಧೆ, ಶಶಿಕಲಾ ಮಜ್ಜಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ. ಉಪಾಧ್ಯೆ, ರಾಜು ನಾಯ್ಕರ, ರಾಜು ಮುದೇನೂರ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸಂಗಮೇಶ ಹಿತ್ತಲಮನಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಗೂ ಮುಂಚೆ ಬಾಗಲಕೋಟೆ ವಿಧಾನಸಭಾ ಕಾರ್ಯಕಾರಿಣಿ ಸಭೆ ಜರುಗಿತು.

-----ಕೋಟ್‌------ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ದೇಶದ ಚಿತ್ರಣವೇ ಬದಲಾಗಿದೆ. ವಿಶ್ವದಲ್ಲಿ ಭಾರತದ ಶಕ್ತಿ ವೃದ್ಧಿಸಿದೆ. ಭಾರತವನ್ನು ಕಡೆಗಣಿಸುತ್ತಿದ್ದ ಬಲಾಢ್ಯ ರಾಷ್ಟ್ರಗಳು ಭಾರತ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿವೆ. ಪ್ರಪಂಚದ ದೇಶಗಳ ಆರ್ಥಿಕತೆ ಹಿಮ್ಮುಖವಾಗಿದ್ದರೆ ಸಮರ್ಥ ನಾಯಕತ್ವದ ಪರಿಣಾಮ ಭಾರತದ ಆರ್ಥಿಕತೆ ನಾಗಾಲೋಟದಲ್ಲಿ ಮುನ್ನಡೆಯಲ್ಲಿದೆ. ಭಾರತ ಮುಂದುವರಿದ ರಾಷ್ಟ್ರವಾಗುವತ್ತ ದಾಪುಗಾಲು ಹಾಕುತ್ತಿದ್ದು, ಇದಕ್ಕೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ಅತ್ಯವಶ್ಯಕವಾಗಿದೆ.-ಹಣಮಂತ ನಿರಾಣಿ ವಿಧಾನ ಪರಿಷತ್ ಸದಸ್ಯ

Share this article