ಭಾರತ ವಿಶ್ವಗುರುವಾಗಲು ಮತ್ತೊಮ್ಮೆ ಮೋದಿಜಿ ಗೆಲ್ಲಿಸಿ: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork | Published : Mar 3, 2024 1:35 AM

ಸಾರಾಂಶ

ಅಮಿನಗಡ ಪಟ್ಟಣದಲ್ಲಿ ಶನಿವಾರ ಯುವ ಬ್ರಿಗೇಡ್ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನರೇಂದ್ರ ಮೋದಿಯವರ ಅಭಿವೃದ್ಧಿ ನಡೆ ಕಾಂಗ್ರೆಸ್‌ನವರಿಗೆ ನಡುಕ ಹುಟ್ಟಿಸಿದೆ. ಅದಕ್ಕಾಗಿ ಒಬ್ಬಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭವಾರ್ತೆ ಅಮೀನಗಡ

ನರೇಂದ್ರ ಮೋದಿಯವರ ಅಭಿವೃದ್ಧಿ ನಡೆ ಕಾಂಗ್ರೆಸ್‌ನವರಿಗೆ ನಡುಕ ಹುಟ್ಟಿಸಿದೆ. ಅದಕ್ಕಾಗಿ ಒಬ್ಬಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಲೆಕ್ಕಾಚಾರ ಮಾಡುತ್ತಿದ್ದರೆ, ಮೋದೀಜಿಯವರು ದೇಶವನ್ನು ಜಗತ್ತಿನಲ್ಲೇ ಶ್ರೀಮಂತ ರಾಷ್ಟ್ರ ಮಾಡುವತ್ತ ಹೆಜ್ಜೆ ಇರಿಸಿದ್ದಾರೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಯುವಬ್ರಿಗೇಡ್ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 500 ವರ್ಷಗಳಲ್ಲೇ ನರೇಂದ್ರ ಮೋದೀಜಿಯವರಂಥ ಪ್ರಜಾ ರಾಜ ದೇಶಕ್ಕೆ ದೊರಕಿರಲಿಲ್ಲ. ಜನಸಾಮಾನ್ಯರ ಬದುಕಿನ ಅಭಿವೃದ್ಧಿಯೊಂದಿಗೆ ರಾಷ್ಟ್ರವನ್ನು ವಿಶ್ವದ ಗುರು ಮಾಡಲು ಅವಿರತ ಶ್ರಮಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ಭಾರತ ಒಂದು ಕಡೆ ತಾಂತ್ರಿಕ, ಔದ್ಯೋಗಿಕ, ಆರ್ಥಿಕತೆಯಿಂದ ಮೇಲೇಳುತ್ತಿದ್ದರೆ, ಮತ್ತೊಂದು ಕಡೆ ಧಾರ್ಮಿಕವಾಗಿ ಪುರುತ್ಥಾನ ವಾಗುತ್ತಿದೆ. ದೇಶದ ರಸ್ತೆಗಳು, ಸೇತುವೆಗಳು, ರೈಲ್ವೆ, ವಿಮಾನ ನಿಲ್ದಾಣ ಮುಂತಾದ ಮೂಲಸೌಲಭ್ಯಗಳ ಅಭಿವೃದ್ದಿಯೊಂದಿಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುವತ್ತ ಹೆಜ್ಜೆ ಇರಿಸಿದ್ದಾರೆ. ಮೋದಿಜಿಯವರು ರಾಷ್ಟ್ರವೇ ನನ್ನ ಕುಟುಂಬವೆಂದು ಭಾವಿಸಿ ರಾಷ್ಟ್ರಸಂತನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದೂ ತಮ್ಮ ವೈಯುಕ್ತಿಕ ಕುಟುಂಬದ ಬಗ್ಗೆ ಯೋಚಿಸಲಿಲ್ಲ. ಪ್ರಧಾನಿಯಾದ ಪ್ರಾರಂಭದಲ್ಲೇ ಮಹಿಳೆಯರಿಗೆ ಗೌರವ ದೊರಕುವಂಥ ಶೌಚಾಲಯಕ್ಕೆ ಮೊದಲು ಆದ್ಯತೆಕೊಟ್ಟರು, ನಂತರ ರಾಮಮಂದಿರ ನಿರ್ಮಿಸಿದರು ಎಂದು ಹೇಳಿದರು.

ಶತ್ರು ರಾಷ್ಟ್ರಕ್ಕೆ ಸಿಂಹಸ್ವಪ್ನವಾಗಿ, ದೇಶದ ಜನತೆಗೆ ಸ್ವಾಭಿಮಾನದ ಸಂಕೇತವಾಗಿ, ಧಾರ್ಮಿಕ ಕ್ಷೇತ್ರಗಳಿಗೆ ಪುನಶ್ಚೇತನ ನೀಡುವಲ್ಲಿ ದಿಟ್ಟಹೆಜ್ಜೆಯಿಟ್ಟರು. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಉಗ್ರಗಾಮಿಗಳಿಂದ ಬಾಂಬ್ ಸ್ಫೋಟ ನಡೆದರೆ ಅದಕ್ಕೆ ಕಾಂಗ್ರೆಸ್ ಮುಖಂಡರು ಅವನು ತರುಣ ಎನ್ನುತ್ತಾರೆ. ಅಭದ್ರತೆಯ ಸರ್ಕಾರದ ಅವಶ್ಯಕತೆಯಿದೆಯೇ ಎಂದು ಪ್ರಶ್ನಿಸಿದರ ಅವರು, ಸ್ವಾಭಿಮಾನದ ಭಾರತಕ್ಕೆ ಕಂಕಣ ತೊಟ್ಟಿರುವ ನರೇಂದ್ರ ಮೋದೀಜಿಯಂಥವರು ಅಪರೂಪಕ್ಕೆ ಸಿಕ್ಕ ಒಂದು ವಜ್ರ. 2024ರ ಲೋಕಸಭೆ ಚುನಾವಣೆಯಲ್ಲಿ ಉಳಿಸಿಕೊಳ್ಳುವ ಪ್ರತಿಜ್ಞೆಯನ್ನು ಪ್ರತಿಯೊಬ್ಬರು ಮಾಡಬೇಕು. ಕೇವಲ ಉಚಿತ, ಗ್ಯಾರಂಟಿಗಳಿಗಾಗಿ ಕಾಂಗ್ರೆಸ್‌ ಗೆಲ್ಲಿಸಿದರೆ ನಿಮ್ಮ ಮುಖ ನೀವೇ ನೋಡಿಕೊಂಡು ಅಸಹ್ಯ ಪಡುವ ಮಟ್ಟಕ್ಕೆ ಹೋಗಬೇಡಿ. ಇಂದು ಪಾಕಿಸ್ಥಾನ, ಚೀನಾ ನಮ್ಮ ದೇಶದ ಕಡೆ ತಿರುಗಿ ನೋಡಲು ಹೆದರುವ ಸ್ಥಿತಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಡಾ.ಮಹಾಂತೇಶ ಕಡಪಟ್ಟಿ, ವೀರೇಶ ಉಂಡೋಡಿ, ಬಸವರಾಜ ನಾಡಗೌಡ್ರ, ಗುರುನಾಥ ಚಳ್ಳಮರದ, ಶ್ರೀಶ ನಿರಂಜನ, ಪಪಂ ಸದಸ್ಯರಾದ ವಿಜಯಕುಮಾರ ಕನ್ನೂರ ಇತರರು ಪಾಲ್ಗೊಂಡಿದ್ದರು.

ಹಣ ಆಮಿಷಕ್ಕಾಗಿ ಬಂದಿಲ್ಲ:

ಯುವ ಬ್ರಿಗೇಡ್ ತಂಡ ಮೋದಿಜಿಯವರಿಂದ ಹಣ ಪಡೆದು ಪ್ರಚಾರಕ್ಕಾಗಿ ಬಂದಿಲ್ಲ, ಯಾವುದೇ ಒಬ್ಬ ಸಂಸದರಿಂದ ಒಂದೇ ಒಂದು ನಯಾಪೈಸೆ ಪಡೆಯದೇ, ಕೇವಲ ದೇಶಕ್ಕಾಗಿ, ದೇಶದ ಸಂರಕ್ಷಣೆಯಲ್ಲಿ ಹಗಲಿರುಳು ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನದಿಂದ ಹಗಲುರಾತ್ರಿ ನಾನು ನಮ್ಮ ತಂಡ ಪ್ರಚಾರ ಮಾಡುತ್ತಿದೆ. ಪ್ರತಿಯೊಬ್ಬರೂ ಮೋದೀಜಿಯವರ ಕಾರ್ಯವನ್ನು ಹತ್ತು ಜನಕ್ಕೆ, ಕನಿಷ್ಠ ಒಬ್ಬರಿಗಾದರೂ ತಿಳಿಸುವ ಮೂಲಕ ಮತ್ತೊಮ್ಮೆ ಮೋದೀಯವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಹಕಾರ ನೀಡಬೇಕು ಎಂದರು.

Share this article