ಶಿವಮೊಗ್ಗ: ಕರ್ನಾಟಕದ ರೈಲ್ವೆ ಯೋಜನೆಗಳು ಮತ್ತು ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಒಟ್ಟು 42,517 ಕೋಟಿ ರು. ವೆಚ್ಚದಲ್ಲಿ ಒಟ್ಟು 3,264 ಕಿ.ಮೀ ಗಳ 25 ಪ್ರಮುಖ ಯೋಜನೆಗಳನ್ನು (ಹೊಸ ಮಾರ್ಗಗಳು ಮತ್ತು ದ್ವಿಮುಖ ಮಾರ್ಗ) ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ರೈಲ್ವೆ ಜಾಲದ ರೂಪದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅತ್ಯಂತ ಆಸಕ್ತಿ ವಹಿಸಿದ್ದು, ಆ ನಿಟ್ಟಿನಲ್ಲಿ ಅದರ ಬದ್ಧತೆಯನ್ನು ಈ ಅಂಕಿ ಅಂಶಗಳು ಸ್ಪಷ್ಟವಾಗಿ ಸಾರಿ ಹೇಳಿದೆ. ಇದು ಪ್ರಧಾನಮಂತ್ರಿಗಳ ಕಾಳಜಿ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಎರಡು ಮಹತ್ವಪೂರ್ಣ ಯೋಜನೆಗಳಲ್ಲಿ ತನ್ನ ದಾಯಿತ್ವವನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗ (96 ಕಿ.ಮೀ) ಮತ್ತು ಶಿವಮೊಗ್ಗ-ಹರಿಹರ ಹೊಸ ಮಾರ್ಗ (79 ಕಿ.ಮೀ), ಯೋಜನೆಗಳು ಜಾರಿಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾತ್ರವಲ್ಲ, ಇದಕ್ಕಾಗಿ ಮೇಲಿಂದ ಮೇಲೆ ಪತ್ರ ಬರೆದು, ಸಚಿವರುಗಳನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರವನ್ನು ನಿಯತವಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. 50:50 ವೆಚ್ಚ ಹಂಚಿಕೆ ಆಧಾರದ ಮೇಲೆ ಮಂಜೂರಾದ ಶಿವಮೊಗ್ಗ-ರಾಣೆಬೆನ್ನೂರು ಯೋಜನೆಯು ಸದ್ಯಕ್ಕೆ ಸ್ಥಗಿತಗೊಂಡಿದೆ. ಏಕೆಂದರೆ ಕರ್ನಾಟಕ ಸರ್ಕಾರವು ಯೋಜನೆಗೆ ಅಗತ್ಯವಿರುವ 559 ಹೆಕ್ಟೇರ್‌ನಲ್ಲಿ 226 ಹೆಕ್ಟೇರ್ ಅನ್ನು ಮಾತ್ರ ಸ್ವಾಧೀನಪಡಿಸಿಕೊಂಡಿದ್ದು, ಇನ್ನೂ 333 ಹೆಕ್ಟೇರ್ ಬಾಕಿ ಉಳಿದಿದೆ. ವೆಚ್ಚ ಹಂಚಿಕೆ ಆಧಾರದ ಮೇಲೆ (ಒಟ್ಟು 488 ಹೆಕ್ಟೇರ್ ಭೂಮಿ ಅಗತ್ಯವಿರುವ) ಮಂಜೂರಾಗಿದ್ದ ಶಿವಮೊಗ್ಗ-ಹರಿಹರ ಯೋಜನೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳಿಸಲಾಗಿದೆ. ಏಕೆಂದರೆ ರಾಜ್ಯ ಸರ್ಕಾರವು ವೆಚ್ಚ ಹಂಚಿಕೆ ಮತ್ತು ಯೋಜನೆಗೆ ಉಚಿತವಾಗಿ ಭೂಮಿ ಒದಗಿಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕದ ರೈಲ್ವೆ ಜಾಲದಲ್ಲಿ ಮತ್ತಷ್ಟು ಪರಿವರ್ತನೆ ತರುವ ನಿಟ್ಟಿನಲ್ಲಿ ಮತ್ತು ರಾಜ್ಯದ ಜನತೆಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಈ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಸರ್ಕಾರ ಸಂಪೂರ್ಣವಾಗಿ ಸಜ್ಜಾಗಿದ್ದರೂ, ಅವುಗಳ ಯಶಸ್ಸು "ಕರ್ನಾಟಕ ಸರ್ಕಾರದ ಬೆಂಬಲವನ್ನು ಅವಲಂಬಿಸಿದೆ ", ಅದಕ್ಕಾಗಿ ಸಹಕರಿಸಿ ಎಂದು ಸಂಸದರು ಒತ್ತಾಯಪೂರ್ವಕವಾಗಿ ಮನವಿ ಮಾಡಿದ್ದಾರೆ.
ಬಾಕಿ ಇರುವ 3341 ಹೆಕ್ಟೇರ್ (ಒಟ್ಟು ಅಗತ್ಯವಿರುವ ಭೂಮಿಯ ಶೇ.37) ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಬೇಕಾಗಿದೆ. ಭೂಸ್ವಾಧೀನದಲ್ಲಿ ಆಗುತ್ತಿರುವ ವಿಳಂಬವೇ ಯೋಜನೆಗಳ ಸ್ಥಗಿತಕ್ಕೆ ಮೂಲ ಕಾರಣವೆಂದು ಉಲ್ಲೇಖಿಸಲಾಗಿದ್ದು, ಇದು ಶಿವಮೊಗ್ಗ ಮಾತ್ರವಲ್ಲದೆ, ರಾಜ್ಯದ ಒಟ್ಟಾರೆ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಜ್ಯದ ಪ್ರಗತಿಯ ನಿಟ್ಟಿನಲ್ಲಿ ಎಲ್ಲ ಪರಿವರ್ತನಾತ್ಮಕ ರೈಲ್ವೆ ಮಾರ್ಗಗಳು ಮತ್ತಷ್ಟು ವಿಳಂಬವಿಲ್ಲದೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ಮಲೆನಾಡು ಮತ್ತು ಮಧ್ಯ ಕರ್ನಾಟಕ ಪ್ರದೇಶಕ್ಕೆ ಹೆಚ್ಚು ಅಗತ್ಯವಿರುವ ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಯನ್ನು ತರಬಲ್ಲ ಈ ರೈಲ್ವೆ ಯೋಜನೆಗಳ ಜಾರಿಗೆ ಎಲ್ಲಾ ಆಡಳಿತಾತ್ಮಕ ಅಡೆತಡೆಗಳನ್ನು ತಕ್ಷಣವೇ ಪರಿಹರಿಸಬೇಕು, ಯೋಜನೆ ಅನುಷ್ಠಾನಕ್ಕೆ ತನ್ನ ಪಾಲಿನ ಹಣಕಾಸು ಬದ್ಧತೆಗಳನ್ನು ಗೌರವಿಸಬೇಕು ಎಂದು ಸಂಸದರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.