ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಭೇದವಿಲ್ಲ, ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ರಾಜ್ಯ, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ದಿಸೆಯಲ್ಲಿ ವಿದ್ಯಾರ್ಥಿ ಬದುಕಿನಲ್ಲಿ ಛಲ, ಪರಿಶ್ರಮದಿಂದ ಮಾತ್ರ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರ: ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಭೇದವಿಲ್ಲ, ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ರಾಜ್ಯ, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ದಿಸೆಯಲ್ಲಿ ವಿದ್ಯಾರ್ಥಿ ಬದುಕಿನಲ್ಲಿ ಛಲ, ಪರಿಶ್ರಮದಿಂದ ಮಾತ್ರ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ರಾಧಾಕೃಷ್ಣ ಆಡಿಟೋರಿಯಂನಲ್ಲಿ ನಡೆದ 2025-2026ನೇ ಸಾಲಿನ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದ್ದು, ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿ ಅನುದಾನ ನೀಡುತ್ತಿವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನಾದ್ಯಂತ ನೂತನ ಶಾಲಾ ಕಾಲೇಜು, ವಸತಿ ಶಾಲೆ, ಹಾಸ್ಟೆಲ್ ನಿರ್ಮಿಸಿ ಸಕಲ ಸೌಲಭ್ಯದ ಮೂಲಕ ರಾಜ್ಯದಲ್ಲಿಯೇ ಶಿಕಾರಿಪುರ ಶೈಕ್ಷಣಿಕ ಕೇಂದ್ರವಾಗಿ ಗುರುತಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ದೆಸೆಯಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಸ್ಥಳೀಯ ಕಾಲೇಜಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ಕೆ ನೀಡಿದ ಮಹತ್ವವನ್ನು ಪಠ್ಯೇತರ ಚಟುವಟಿಕೆಗೆ ನೀಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಬಹು ಮುಖ್ಯವಾಗಿದೆ. ಆಸಕ್ತಿಗೆ ಪೂರಕವಾದ ಕ್ಷೇತ್ರ ಆಯ್ಕೆ ಮೂಲಕ ಸಾಧನೆಯಿಂದ ಗುರುತಿಸಿಕೊಳ್ಳಲು ತಿಳಿಸಿದರು.
ಸಾಮಾಜಿಕ ಜಾಲತಾಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಮಾತ್ರ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ, ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಡಿ.ಮಧುಕೇಶವ, ಪ್ರ.ಕಾ.ಬಸನಗೌಡ ಕೊಣ್ತಿ, ಸಮಾಜ ಕಲ್ಯಾಣಾಧಿಕಾರಿ ಮಧುಸೂದನ್, ಸಮನ್ವಯಾಧಿಕಾರಿ ರಂಗನಾಥ್, ಕಾಲೇಜಿನ ಉಪಪ್ರಾಚಾರ್ಯ ಶ್ರೀನಿವಾಸ್, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು ಸಹಿತ ತಾಲೂಕಿನ ವಿವಿಧ ಶಾಲೆಗಳಿಂದ ಕಿರಿಯ ವಿಭಾಗಕ್ಕೆ 260, ಹಿರಿಯ ಪ್ರಾಥಮಿಕ ವಿಭಾಗಕ್ಕೆ 325, ಹಾಗೂ ಪ್ರೌಡಶಾಲಾ ವಿಭಾಗಕ್ಕೆ 165 ವಿದ್ಯಾರ್ಥಿಗಳು ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.