ದೋಟಿಹಾಳದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಕನ್ನಡಪ್ರಭ ವಾರ್ತೆ ಕುಷ್ಟಗಿ
ಬಿಜೆಪಿಯ ನರೇಂದ್ರ ಮೋದಿ ಅವರು ಅಭಿವೃದ್ಧಿ ಮಾಡುವ ಬದಲು ಕೇವಲ ಆಶ್ವಾಸನೆಗಳನ್ನು ನೀಡುತ್ತ ಹತ್ತು ವರ್ಷಗಳ ಕಾಲ ಆಡಳಿತ ಮಾಡಿದ್ದಾರೆ. ನಮ್ಮ ರಾಜ್ಯಕ್ಕೆ ಅವರ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಮಠದ ಆವರಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿಯವರು ಹತ್ತು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯ ಬದಲು ಜನರ ಕೈಗೆ ಖಾಲಿ ಚೊಂಬು ನೀಡಿದ್ದಾರೆ. ಈ ಬಾರಿ 200 ಸೀಟ್ ಗೆಲ್ಲುವುದು ಬಿಜೆಪಿಗೆ ಕಠಿಣ ಇದೆ ಎಂದು ಹೇಳಿದರು.
ಬಣ್ಣ ಬಣ್ಣದ ಬಟ್ಟೆ ಬದಲಿಸುವ ಮೋದಿ ಎಂದರೆ ಬರಿ ಶೋಕಿವಾಲಾ ಎಂದು ಜನರೇ ಹೇಳುತ್ತಾರೆ. ಒಂದು ಕಡೆ ಅಮಿತ್ ಶಾ ಬಿಜೆಪಿ ಅಧಿಕಾರಕ್ಕೆ ಬಂದರೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ಹಾಕುತ್ತೇನೆ ಎನ್ನುತ್ತಾರೆ. ಖಾಲಿ ಜಮೀನಿಗೂ ಟ್ಯಾಕ್ಸ್ ಹಾಕುವ ಕೆಲಸ ಬಿಜೆಪಿ ಮಾಡಲಿದೆ. ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಾರೆ. ಬಿಜೆಪಿ ರೈತರಿಗಾಗಿ ಏನು ಮಾಡಿದೆ? ಅವರ ಆಡಳಿತದಲ್ಲಿ ಯಾವ ಡ್ಯಾಂ ಕಟ್ಟಿದ್ದಾರೆ? ಅವರ ಹತ್ತು ವರ್ಷಗಳಲ್ಲಿ ಸರಿಯಾಗಿ ಚೆಕ್ ಡ್ಯಾಂ ಸಹ ನಿರ್ಮಾಣ ಮಾಡಿಲ್ಲ. ಇಂತಹ ಬಿಜೆಪಿಯಿಂದ ಅಚ್ಚೆ ದಿನ್ ಬಂದಿಲ್ಲ, ಮುಂದೆ ಬರೋದೂ ಇಲ್ಲ ಎಂದರು.ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಸುಳ್ಳು ಹೇಳುವ ಪಕ್ಷ. ಅರವತ್ತು ವರ್ಷ ಏನೂ ಮಾಡಿಲ್ಲ ಎನ್ನುವ ಅವರಿಗೆ ಶಾಲೆ, ಕಾಲೇಜು, ಕೃಷಿ ಯೋಜನೆಗಳು, ಕಟ್ಟಡಗಳು, ರಸ್ತೆ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯ ನಡೆದಿರುವುದು ಕಾಣುವುದಿಲ್ಲವೇ? ಇವೆಲ್ಲ ಆಗಿರುವುದು ಕಾಂಗ್ರೆಸ್ ಆಡಳಿತದಲ್ಲಿ. ದೇಶದಲ್ಲಿ ಬರ ಪರಿಸ್ಥಿತಿ ಇದ್ದಾಗ ಅಮೆರಿಕದಿಂದ ಗೋದಿ, ಮೆಕ್ಕೆಜೋಳ, ರಷ್ಯಾದಿಂದ ಕೆಂಪು ಜೋಳ ತರಿಸಿ ರೈತರ ಹಿತ ಕಾಪಾಡಿದ್ದು ನಮ್ಮ ಕಾಂಗ್ರೆಸ್ ಎಂದು ಹೇಳಿದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ನರೇಂದ್ರ ಮೋದಿ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ಮನಸ್ಸುಗಳನ್ನು ಕೆಡಿಸುವ ಮೂಲಕ ಪ್ರಧಾನಿಯಾಗಿದ್ದಾರೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಯಾವುದೆ ಅಭಿವೃದ್ಧಿ ಕಂಡಿಲ್ಲ, ಬಡವರ-ರೈತರ ಉದ್ಧಾರ ಆಗಲಿಲ್ಲ. ಯುವಕರು ಉದ್ಯೋಗದ ಭರವಸೆ ನಂಬಿ ಬಿಜೆಪಿಗೆ ಮತ ನೀಡಿದರೆ ಯುವಕರಿಗೆ ಬಿಜೆಪಿಯವರು ಮೋಸ ಮಾಡಿದರು ಎಂದರು.ಜಿಪಂ ಮಾಜಿ ಸದಸ್ಯ ವಿಜಯ ನಾಯಕ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಶೇಖರಗೌಡ ಮಾಲಿಪಾಟೀಲ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ರಾಮನಗೌಡ ಬಿಜ್ಜಲ, ಲಾಡ್ಲೆಮಷಾಕ ದೋಟಿಹಾಳ, ಗುರುಸಿದ್ದಯ್ಯ ಮಳಿಮಠ, ಶಿವಪುತ್ರಪ್ಪ ಕರಡಿ, ಶೇಖರಪ್ಪ ದೊಡ್ಡಮನಿ, ಹನುಮಂತರಾವ್ ದೇಸಾಯಿ, ಶುಖಮುನಿ ಈಳಗೇರ, ಉಮೇಶ ಮಡಿವಾಳರ, ಬಸವರಾಜ ಶೆಟ್ಟರ, ಪಂಪಾಪತಿ ಅರಳಿಕಟ್ಟಿ, ಚನ್ನಬಸವ ಚೌರಿ ಇದ್ದರು.