ಬಳ್ಳಾರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಇನ್ ಪ್ಯಾಂಟ್ರಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಕುಮಾರಸ್ವಾಮಿ ದೇವಸ್ಥಾನದಿಂದ ಕಾಂಗ್ರೆಸ್ ಪಕ್ಷ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಘೋಷಣೆಗಳನ್ನು ಕೂಗಿಕೊಂಡು ಮೆರವಣಿಗೆ ಹೊರಟ ಬಿಜೆಪಿ ಕಾರ್ಯಕರ್ತರನ್ನು ದಾರಿ ಮಧ್ಯದಲ್ಲಿ ಪೊಲೀಸರು ತಡೆಯಲು ಯತ್ನಿಸಿದರು. ಇದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಬಳಿಕ, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಮಾಜಿ ಶಾಸಕ ಜಿ. ಸೋಮಶೇಖ ರೆಡ್ಡಿ, ದೇಶದ ಪ್ರಧಾನಮಂತ್ರಿಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಯೋತ್ಪಾದಕ ಎಂದು ಕರೆದಿರುವುದು ಅತ್ಯಂತ ಖಂಡನೀಯ ಹಾಗೂ ಖರ್ಗೆ ಅವರ ನೀಚ ಸಂಸ್ಕೃತಿ ತೋರಿಸುತ್ತದೆ ಎಂದು ಟೀಕಿಸಿದರು.ಹಿಂದುಳಿದ ಸಮುದಾಯದಿಂದ ಬಂದಿರುವ ನರೇಂದ್ರ ಮೋದಿ ಅವರು ಸತತ 12 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇಡೀ ಜಗತ್ತೇ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸುತ್ತಿದೆ. ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆಯನ್ನು ನೋಡಿ ಸಹಿಸದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿಗಳನ್ನು ಭಯೋತ್ಪಾದಕ ಎಂದು ಹಿಯಾಳಿಸಿರುವುದು ಇಡೀ ದೇಶಕ್ಕಾದ ಅಪಮಾನ. ದೇಶಾದ್ಯಂತ ಕಾಂಗ್ರೆಸ್ ಪಕ್ಷವು ದಿನದಿನಕ್ಕೆ ಕುಸಿಯುತ್ತಿದ್ದು, ನೆಲೆ ಕಂಡುಕೊಳ್ಳಲು ಒದ್ದಾಡುತ್ತಿದೆ. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತನ್ನ ಪಕ್ಷ ಇಡೀ ದೇಶದಲ್ಲಿ ಹೀನಾಯ ಸ್ಥಿತಿ ತಲುಪುತ್ತಿರುವುದನ್ನು ಸಹಿಸಲು ಸಾಧ್ಯವಾಗದೆ ಪ್ರಧಾನಮಂತ್ರಿಗಳ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನವರು ಮೋದಿ ಅವರ ಬಗ್ಗೆ ಬಳಸುವ ಅಸಂವಿಧಾನಿಕ ಪದಗಳು ಅವರ ಸಂಸ್ಕೃತಿ ಏನೆಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರಲ್ಲದೆ, ಖರ್ಗೆ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷವನ್ನು ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ಬಳಿಕ ಬಿಡುಗಡೆಗೊಳಿಸಿದರು.