ಯೋಗೀಶಗೌಡ ಕೊಲೆ ಅತ್ಯಂತ ಭೀಭತ್ಸ್‌, ಭೀಕರ

KannadaprabhaNewsNetwork |  
Published : Apr 29, 2026, 02:00 AM IST
ಯೋಗೀಶ ಗೌಡ | Kannada Prabha

ಸಾರಾಂಶ

ಧಾರವಾಡ ಸಾರಸ್ವತಪುರದಲ್ಲಿ ಸ್ವಂತ ಜಿಮ್‌ ಹೊಂದಿದ್ದ ಯೋಗೀಶಗೌಡ ನಿತ್ಯ ಜಿಮ್‌ ಮಾಡುತ್ತ ಕಟ್ಟುಮಸ್ತ ಮೈಕಟ್ಟು ಹೊಂದಿದ್ದ. ಒಬ್ಬಿಬ್ಬರಿಗೆ ಮಣಿಯುವ ಆಸಾಮಿ ಅಲ್ಲ ಎನ್ನುವುದನ್ನು ಮನಗಂಡ ಆಗಂತುಕರು ವ್ಯವಸ್ಥಿತ ಪ್ಲ್ಯಾನ್‌ ಮಾಡಿಯೇ ಕೊಲೆಗೈದಿದ್ದಾರೆ ಎನ್ನುವುದನ್ನು ಎತ್ತಿ ಹೇಳಿದ್ದಾರೆ.

ಹುಬ್ಬಳ್ಳಿ:

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ್‌ ಅವರ ಕೊಲೆ ಅತ್ಯಂತ ಭೀಭತ್ಸ್‌, ಭೀಕರ...

ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿ ಇತ್ತೀಚೆಗಷ್ಟೇ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ತಮ್ಮ 623 ಪುಟಗಳ ತೀರ್ಪಿನಲ್ಲಿ ಬಣ್ಣಿಸಿದ ಪರಿ ಇದು.

ಪ್ರಕರಣದ ತನಿಖೆ ನಡೆಸಿದ ಸಿಬಿಐ ವರದಿ ಮತ್ತು ವಕೀಲರ ವಾದ-ಪ್ರತಿವಾದದ ವಿಚಾರಣೆ ಆಧರಿಸಿ ತಮ್ಮ ತೀರ್ಪಿನಲ್ಲಿ ನ್ಯಾಯಾಧೀಶರು ಇಡೀ ಘಟನೆಯನ್ನು ಎಳೆ-ಎಳೆಯಾಗಿ ವಿವರಿಸಿದ್ದಾರೆ.

ಧಾರವಾಡ ಸಾರಸ್ವತಪುರದಲ್ಲಿ ಸ್ವಂತ ಜಿಮ್‌ ಹೊಂದಿದ್ದ ಯೋಗೀಶಗೌಡ ನಿತ್ಯ ಜಿಮ್‌ ಮಾಡುತ್ತ ಕಟ್ಟುಮಸ್ತ ಮೈಕಟ್ಟು ಹೊಂದಿದ್ದ. ಒಬ್ಬಿಬ್ಬರಿಗೆ ಮಣಿಯುವ ಆಸಾಮಿ ಅಲ್ಲ ಎನ್ನುವುದನ್ನು ಮನಗಂಡ ಆಗಂತುಕರು ವ್ಯವಸ್ಥಿತ ಪ್ಲ್ಯಾನ್‌ ಮಾಡಿಯೇ ಕೊಲೆಗೈದಿದ್ದಾರೆ ಎನ್ನುವುದನ್ನು ಎತ್ತಿ ಹೇಳಿದ್ದಾರೆ.

ಮುತ್ತಗಿ ಕೈಗೆ ಕಂಟ್ರಿ ಪಿಸ್ತೂಲ್‌:

2016 ಜೂನ್‌ 15ರ ಬೆಳಗ್ಗೆ 7 ಗಂಟೆ ಸುಮಾರು ಉದಯ ಜಿಮ್‌ ಬಳಿ ಬಂದ 6 ಜನ ಕೊಲೆಗಾರರ ಗುಂಪು ಜಿಮ್‌ ಒಳಗೆ ಯಾರ್ಯಾರು ಇದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಂಡು ಒಮ್ಮೆಲೇ ಒಳ ನುಗ್ಗಿದೆ. 16ನೇ ಆರೋಪಿ ಚಂದ್ರಶೇಖರ ಇಂಡಿ ಅಕ್ರಮವಾಗಿ ತಂದಿದ್ದ ಕಂಟ್ರಿ ಪಿಸ್ತೂಲನ್ನು ಒಂದನೇ ಆರೋಪಿ ಬಸವರಾಜ ಮುತ್ತಗಿ ಕೈಗೆ (ಮಾಫಿ ಸಾಕ್ಷಿಯಾದ ಆರೋಪಿ) ಕೊಟ್ಟಿದ್ದ. ಉಳಿದವರು ಚಾಕು, ಚೂರಿ, ಲಾಂಗ್‌, ಡ್ಯಾಗರ್‌, ಹಾಕಿ ಸ್ಟಿಕ್‌, ಕಬ್ಬಿಣದ ರಾಡ್‌ ಮುಂತಾದ ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ವಿವರಿಸಿದ್ದಾರೆ.

ಕಣ್ಣಿಗೆ ಖಾರದ ಪುಡಿ:

ಈ ಗುಂಪು ಒಳನುಗ್ಗಿದಾಗ ಕಾಲಿನ ಸಪ್ಪಳಕ್ಕೆ ಆಗ ಯಾರು? ಎಂದು ನೋಡುವ ಹೊತ್ತಿಗೆ ಎದುರು ಬಂದ ಕೊಲೆಗಾರರು ಮೊದಲು ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ. ಈ ಆಕಸ್ಮಿಕ ದಾಳಿಯಿಂದ ವಿಚಲಿತನಾದ ಯೋಗೀಶಗೌಡ ಪ್ರತಿ ದಾಳಿಗೆ ಇಳಿಯುವ ಮುನ್ನವೇ ಹೊಟ್ಟೆ, ಎದೆ, ಕುತ್ತಿಗೆ, ಬೆನ್ನಿಗೆ ಚಾಕು, ಚೂರಿ, ಲಾಂಗ್‌, ಡ್ಯಾಗರ್‌ಗಳಿಂದ ಇರಿದಿದ್ದಾರೆ. ಬಳಿಕ ಕಬ್ಬಿಣದ ರಾಡ್‌, ಹಾಕಿ ಸ್ಟಿಕ್‌ನಿಂದ ಮನಸೋ ಇಚ್ಚೆ ಹೊಡೆದಿದ್ದಾರೆ. ಜಿಮ್‌ನಲ್ಲಿನ ಭಾರವಾದ ಕಬ್ಬಿಣದ ಸಾಮಗ್ರಿಗಳನ್ನು ಆತನ ಮೇಲೆ ಎತ್ತಿ ಹಾಕಿದ್ದಾರೆ. ಈ ದಾಳಿಗೆ ತತ್ತರಿಸಿದ ಯೋಗೀಶಗೌಡ ನಿತ್ರಾಣಗೊಂಡು ಕೆಲವೇ ನಿಮಿಷಗಳಲ್ಲಿ ರಕ್ತದ ಮಡುವಿನಲ್ಲಿ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಜಿಮ್‌ನ ಬಹುತೇಕ ನೆಲ ರಕ್ತಮಯವಾಗಿದೆ. ಯೋಗೀಶಗೌಡನ ಸಾವು ಖಚಿತಪಡಿಸಿಕೊಂಡೆ ಈ ಗುಂಪು ಅಲ್ಲಿಂದ ಕಾಲ್ಕಿತ್ತಿದೆ. ಬೆಳ್ಳಂಬೆಳಗ್ಗೆ ನಡೆದ ಈ ಭೀಕರ ಹತ್ಯೆ ವಿದ್ಯಾಕಾಶಿ ಧಾರವಾಡವಲ್ಲಿ ಕೆಲಹೊತ್ತು ತಲ್ಲಣಿಸುವಂತೆ ಮಾಡಿತು ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಂಇ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್
ಮೋದಿ ಭಯೋತ್ಪಾದ ಹೇಳಿಕೆ: ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ