ಸಾಮಾಜಿಕ ಅಸಮಾನತೆ ತೆರೆದಿಡುವ ಮೊಗಳ್ಳಿ ಗಣೇಶ್ ಕೃತಿಗಳು

KannadaprabhaNewsNetwork |  
Published : Oct 30, 2025, 02:00 AM IST
ಬಳ್ಳಾರಿಯ ಸರಳಾದೇವಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ‘ಮೊಗಳ್ಳಿ ಗಣೇಶರ ಕಥೆಗಳು :ಅಭಿವ್ಯಕ್ತಿ ಮತ್ತು ವಿನ್ಯಾಸ ‘  ಎನ್ನುವ ವಿಷಯದ ಕುರಿತು ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಲಿಂಗಪ್ಪ ಚಿಕ್ಕನಗನೂರು ಮಾತನಾಡಿದರು.  | Kannada Prabha

ಸಾರಾಂಶ

ಅನ್ಯಾಯ, ಅವಮಾನ, ಹಸಿವು,ಸಂಕಟ, ತಳಮಳಗಳೇ ಅವರ ಕಥೆಗಳ ಭಿತ್ತಿಯನ್ನು ರೂಪಿಸಿವೆ.

ಬಳ್ಳಾರಿ: ತಳ ಸಮುದಾಯದ ಬದುಕನ್ನು, ತೀವ್ರ ಸಂವೇದನೆಯನ್ನು ಕಥೆಗಳ ಮೂಲಕ ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವ ಮೊಗಳ್ಳಿ ಗಣೇಶ್ ಕನ್ನಡ ಕಥನ ಪರಂಪರೆಗೆ ಕಸುವು ಮತ್ತು ಹೊಸತನವನ್ನು ತಂದು ಕೊಟ್ಟ ಶ್ರೇಷ್ಠ ಕಥೆಗಾರ ಎಂದು ಸಹಾಯಕ ಪ್ರಾಧ್ಯಾಪಕ ಲಿಂಗಪ್ಪ ಚಿಕ್ಕನಗನೂರು ನುಡಿದರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮೊಗಳ್ಳಿ ಗಣೇಶರ ಕಥೆಗಳು: ಅಭಿವ್ಯಕ್ತಿ ಮತ್ತು ವಿನ್ಯಾಸ ಎನ್ನುವ ವಿಷಯದ ಕುರಿತು ಮಾತನಾಡಿದರು.

ಅನ್ಯಾಯ, ಅವಮಾನ, ಹಸಿವು,ಸಂಕಟ, ತಳಮಳಗಳೇ ಅವರ ಕಥೆಗಳ ಭಿತ್ತಿಯನ್ನು ರೂಪಿಸಿವೆ. ಬದುಕಿನ ಕಹಿ ಸತ್ಯ, ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ ಮತ್ತು ವ್ಯವಸ್ಥೆ ಮೇಲಿನ ತಕರಾರುಗಳನ್ನು ಅವರ ಕೃತಿಗಳು ಎಳೆ ಎಳೆಯಾಗಿ ತೆರೆದಿಡುತ್ತವೆ. ಸಹಜ ಪ್ರತಿಭೆಯನ್ನು ಹೊಂದಿದ್ದ ಮೊಗಳ್ಳಿ ಗಣೇಶ ಅವರನ್ನು ಸಾಹಿತ್ಯ ಜಗತ್ತು ನಿಷ್ಠುರವಾಗಿ ಕಂಡಿತ್ತು. ಅವರ ಬಗೆಗೆ ವಿಮರ್ಶಾ ಲೋಕ ಮೌನ ತಾಳಿದ್ದು, ಅವರಿಗೆ ಸಿಗಬೇಕಾಗಿದ್ದ ನ್ಯಾಯ ಸಿಗದೆ ಹೋದದ್ದು ಸಾಂಸ್ಕೃತಿಕ ಲೋಕದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೊಗಳ್ಳಿ ಗಣೇಶ್ ಅವರ ಸಾಹಿತ್ಯವು ಗ್ರಾಮೀಣ ಬದುಕು. ದಲಿತ ಚಳವಳಿ ಮತ್ತು ಸಾಮಾಜಿಕ ಅಸಮಾನತೆಯ ಒಳನೋಟಗಳ ಕುರಿತು ಬೆಳಕು ಚೆಲ್ಲುತ್ತವೆ. ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಪ್ರಬಂಧ ಸಂಕಲನ, ಸಾಂಸ್ಕೃತಿಕ ವಿಮರ್ಶೆಯ ಅನೇಕ ಕೃತಿಗಳನ್ನು ಮೊಗೊಳ್ಳಿ ಅವರು ರಚಿಸಿದ್ದಾರೆ. ಜಾಗತೀಕರಣ ಹಾಗೂ ಉದಾರೀಕರಣ ನೀತಿಗಳಿಂದಾಗುತ್ತಿರುವ ಅಪಾಯಗಳ ಕುರಿತು ಅವರ ನಿಲುವು ಸ್ಪಷ್ಟವಾಗಿತ್ತು. ಉದಾರೀಕರಣ ನೀತಿ ದುಡಿವ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಿದ್ದರು ಎಂದು ತಿಳಿಸಿದರಲ್ಲದೆ, ಮೊಗಳ್ಳಿ ಅವರ ಪ್ರತಿಯೊಂದು ಕೃತಿಗಳ ಹಿಂದಿನ ಆಳ ಅಧ್ಯಯನ ಕುರಿತು ಲಿಂಗಪ್ಪ ಚಿಕ್ಕನಗನೂರು ಅವರು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನು ನುಡಿದ ಕನ್ನಡ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ಮೊಗಳ್ಳಿ ಗಣೇಶ ಅವರ ಸಾಹಿತ್ಯದಲ್ಲಿ ಅಭಿವ್ಯಕ್ತಿಗೊಂಡ ಸಂಕಟ ಅದು ವೈಯಕ್ತಿಕವಾಗಿರದೆ ಸಾಮುದಾಯಿಕ ಪ್ರಜ್ಞೆಯನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿದುದಾಗಿದೆ.ಅವರ ಕಥೆಗಳು ಬಹಳ ಮುಖ್ಯವಾಗಿ ಮನುಷ್ಯ ಸಂಬಂಧಗಳನ್ನು ಮರುರೂಪಿಸಲು ಯತ್ನಿಸಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಜಿ.ಪ್ರಹ್ಲಾದ ಚೌದ್ರಿ ಮೊಗಳ್ಳಿಯವರ ಕಥೆಗಳಲ್ಲಿ ಗ್ರಾಮೀಣ ಬದುಕಿನ ಸಂಕೀರ್ಣತೆ ಮತ್ತು ಆಧುನಿಕ ಚಿಂತನೆ ಹಾಸುಹೊಕ್ಕಾಗಿದೆ. ನಿಕೃಷ್ಟ ನೋವಿನ, ಕ್ರೌರ್ಯದ ಬದುಕಿನ ನಡುವೆ ಅರಳಿದ ಮೊಗಳ್ಳಿ ಗಣೇಶ್ ಅವರದು ಸಹಜ ಪ್ರತಿಭೆ ಎಂದರು.

ವೇದಿಕೆಯ ಮೇಲೆ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಇದ್ದರು. ಅತಿಥಿ ಉಪನ್ಯಾಸಕರಾದ ಹನುಮಂತರಾಯ,ಮಂಜುನಾಥ್, ಮಹಾಂತೇಶ್,ವಿಷ್ಣು ಹಡಪದ್ ಉಪಸ್ಥಿತರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು