ಮೊಹರಂ ಹುಲಿಗಳಿಗೆ ಬಣ್ಣ ಬಳಿಯುವ ರೈತ ಹೋರಾಟಗಾರ

KannadaprabhaNewsNetwork |  
Published : Jun 25, 2026, 02:00 AM IST
ರಾಣಿಬೆನ್ನೂರಿನ ಗ್ರಾಮೀಣ ಭಾಗದಲ್ಲಿ ರೈತ ಹೋರಾಟಗಾರ ಹನುಮಂತಪ್ಪ ಕಬ್ಬಾರ ಮೊಹರಂ ಹಬ್ಬದ ಹುಲಿ ವೇಷಧಾರಿಗೆ ಬಣ್ಣ ಬಳಿದು ಅಂತಿಮ ಸ್ಪರ್ಶ ನೀಡುತ್ತಿರುವುದು.  | Kannada Prabha

ಸಾರಾಂಶ

ಸದಾ ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ರೈತ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷರೊಬ್ಬರು ಮೊಹರಂ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಹುಲಿ ವೇಷ ಧರಿಸುವವರಿಗೆ ಬಣ್ಣ ಬಳೆಯುವ ಕಾಯಕ ಮಾಡುತ್ತ ಬಂದಿದ್ದಾರೆ.

ಬಸವರಾಜ ಸರೂರ

ರಾಣಿಬೆನ್ನೂರು: ಸದಾ ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ರೈತ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷರೊಬ್ಬರು ಮೊಹರಂ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಹುಲಿ ವೇಷ ಧರಿಸುವವರಿಗೆ ಬಣ್ಣ ಬಳೆಯುವ ಕಾಯಕ ಮಾಡುತ್ತ ಬಂದಿದ್ದಾರೆ. ರಾಣಿಬೆನ್ನೂರು ತಾಲೂಕು ಮಣಕೂರ ಗ್ರಾಮದ ಹನುಮಂತಪ್ಪ ಕಬ್ಬಾರ ಈ ಹವ್ಯಾಸವನ್ನು ರೂಢಿಸಿಕೊಂಡ ರೈತ ಮುಖಂಡನಾಗಿದ್ದಾರೆ.

ಹನುಮಂತಪ್ಪ ಬಾಲ್ಯದಿಂದಲೇ ತನ್ನ ಸಹೋದರ ಮತ್ತು ದೊಡ್ಡಪ್ಪನವರು ಹುಲಿ ವೇಷ ಧರಿಸುವವರಿಗೆ ಬಣ್ಣ ಬಳಿಯುವುದನ್ನು ಆಸಕ್ತಿಯಿಂದ ಗಮನಿಸುತ್ತಿದ್ದರು. ಬರ ಬರುತ್ತ ಇದು ಹನುಮಂತಪ್ಪನ ಆವರಿಸಿಕೊಂಡು ಬಣ್ಣ ಬಳಿಯಲು ಪ್ರೇರೇಪಿಸಿತು. ಕಳೆದ 29 ವರ್ಷಗಳಿಂದಲೂ ಈ ಕೆಲಸವನ್ನು ಮಾಡಿಕೊಂಡು ಬಂದಿರುವ ಹನುಮಂತಪ್ಪ ಇದುವರೆಗೂ ಸುಮಾರು 150ಕ್ಕೂ ಅಧಿಕ ಹುಲಿ ವೇಷ ಧರಿಸುವವರಿಗೆ ಬಣ್ಣ ಬಳೆದಿದ್ದಾರೆ. ಲಾಭದ ಆಸೆಯ ಬದಲಾಗಿ ದೇವರಿಗೆ ತಾನು ಸಲ್ಲಿಸುವ ಸೇವೆ ಎಂದುಕೊಂಡು ಈ ಕೆಲಸವನ್ನು ಮಾಡುತ್ತ ಬಂದಿದ್ದಾರೆ.

ದುಬಾರಿ ಬಣ್ಣ: ಪ್ರಾರಂಭದಲ್ಲಿ ₹80ಗಳ ಬಣ್ಣದಲ್ಲಿ ಮೂರರಿಂದ ನಾಲ್ಕು ಜನರಿಗೆ ಬಣ್ಣ ಬಳೆಯಲು ಸಾಧ್ಯವಾಗುತ್ತಿತ್ತು. ಆದರೆ, ಬಣ್ಣದ ದರದಲ್ಲಿ ಏರಿಕೆಯಾಗಿರುವ ಕಾರಣ ಸದ್ಯ ₹600 ಬಣ್ಣದಲ್ಲಿ ಇಬ್ಬರಿಗೆ ಬಣ್ಣ ಬರೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಹನುಮಂತಪ್ಪ ಅಭಿಮತವಾಗಿದೆ.

ಗ್ರಾಮೀಣ ಭಾಗಗಳಲ್ಲಿ ವೇಷ: ಪ್ರತಿ ವರ್ಷ ಹನುಮಂತಪ್ಪ ಗ್ರಾಮೀಣ ಭಾಗದ ಹುಲಿ ವೇಷಧಾರಿಗಳಿಗೆ ಬಣ್ಣ ಬಳಿಯುತ್ತ ಬಂದಿದ್ದಾರೆ. ತಾಲೂಕಿನ ಹೊಳೆ ಆನ್ವೇರಿ, ಮುದೇನೂರ, ಮುಷ್ಟೂರ, ಲಿಂಗದಹಳ್ಳಿ, ಮಾಗೋಡ ಗ್ರಾಮಗಳಲ್ಲಿ ಬಣ್ಣ ಬಳೆಯುವ ಕೆಲಸ ಮಾಡುತ್ತಿದ್ದಾರೆ.

ಇತರೇ ಜನರೇ ಹೆಚ್ಚು: ಹನುಮಂತಪ್ಪನ ಪ್ರಕಾರ ಹುಲಿ ವೇಷ ಧರಿಸಲು ಮುಸಲ್ಮಾನರಿಗಿಂತ ಹೆಚ್ಚಿಗೆ ಹಿಂದೂಗಳೇ ಮುಂದೆ ಬರುತ್ತಿದ್ದಾರೆ. ಮುಸಲ್ಮಾನರಲ್ಲಿ ಪಿಂಜಾರ (ನದಾಫ್) ಸಮಾಜದವರು ವೇಷ ಧರಿಸುತ್ತಾರೆ.

ಹುಲಿ ವೇಷ ಧರಿಸುವವರಿಗೆ ಬಣ್ಣ ಬಳಿಯುವ ಕೆಲಸ ನನಗೆ ತೃಪ್ತಿ ನೀಡಿದೆ. ಇದರಿಂದ ಹಣ ಗಳಿಸುವುದಕ್ಕಿಂತ ದೇವರ ಸೇವೆ ಮಾಡಿದಂತಾಗುತ್ತದೆ ಎನ್ನುತ್ತಾರೆ ರೈತ ಹೋರಾಟಗಾರ ಹನುಮಂತಪ್ಪ ಕಬ್ಬಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ