ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮೋಹಿತ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ತಾಲೂಕಿನ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಲ್ಲ ಪ್ರತಿಭೆಗಳನ್ನು ಒಂದೆಡೆ ಸೇರಿಸಿ ಶೀಘ್ರದಲ್ಲೇ ಅದ್ಧೂರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಮೋಹಿತ್ ಅವರು ಮುಂದಿನ ದಿನಗಳಲ್ಲಿ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಹಾರೈಸಿದ ಶಾಸಕ ಬಾಲಕೃಷ್ಣ, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಕ್ರೀಡಾಪಟುಗಳಾದ ಕ್ರಿಕೆಟ್‌ನ ಜಾವಗಲ್ ಶ್ರೀನಾಥ್ ಹಾಗೂ ಪ್ಯಾರಾ ಒಲಿಂಪಿಕ್ಸ್‌ನ ಗಿರೀಶ್ ಅವರನ್ನು ಸ್ಥರಿಸಿದರು. ಅವರ ಸಾಲಿಗೆ ಮೋಹಿತ್ ಕೂಡ ಸೇರ್ಪಡೆಯಾಗಿದ್ದು, ಇನ್ನಷ್ಟು ಸಾಧನೆ ಮಾಡುವ ವಿಶ್ವಾಸವಿದೆ ಎಂದರು.ವಾಲಿಬಾಲ್‌ನಿಂದ ಹಾಕಿ ಗೋಲ್ ಕೀಪರ್‌ವರೆಗೆ:
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರೀಡಾ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು. ಕ್ರೀಡಾ ವಸತಿನಿಲಯಗಳನ್ನು ಉನ್ನತೀಕರಿಸುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಉತ್ತಮ ತರಬೇತಿ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಶಾಸಕ ಬಾಲಕೃಷ್ಣ ಒತ್ತಾಯಿಸಿದರು.ಮೋಹಿತ್ ತಂದೆ ಶಶಿಕುಮಾರ್ ಮಾತನಾಡಿ, ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದರೆ ಪಾಲಕರಿಗೆ ಅದಕ್ಕಿಂತ ಸಂತಸದ ವಿಚಾರ ಮತ್ತೊಂದಿಲ್ಲ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಸಂಸ್ಕಾರ, ಮೌಲ್ಯಯುತ ಶಿಕ್ಷಣ ಹಾಗೂ ಕ್ರೀಡೆಗೆ ಪ್ರೋತ್ಸಾಹ ನೀಡಿದರೆ ಅವರೇ ದೇಶದ ಆಸ್ತಿಯಾಗುತ್ತಾರೆ. ನನ್ನ ಮಗ ದೇಶದ ಪರವಾಗಿ ಆಡುತ್ತಿರುವುದು ಪೂರ್ವಜರ ಪುಣ್ಯ. ಇದು ನನಗೆ ಅಪಾರ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
೨೦೨೨ ಮತ್ತು ೨೦೨೩ರಲ್ಲಿ ಮಲೇಷ್ಯಾದಲ್ಲಿ ನಡೆದ ಸುಲ್ತಾನ್ ಜುವಾರ್ ಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಭಾರತ ತಂಡದ ಗೆಲುವಿನಲ್ಲಿ ಗೋಲ್ ಕೀಪರ್ ಆಗಿ ಪ್ರಮುಖ ಪಾತ್ರ ವಹಿಸಿದ ಅವರು ಚಿನ್ನದ ಪದಕದೊಂದಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದರು.
೨೦೨೪ ಹಾಗೂ ೨೦೨೫ರಲ್ಲಿ ಹಾಕಿ ಇಂಡಿಯಾ ಲೀಗ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ ಮೋಹಿತ್, ಇದೀಗ ೨೦೨೬ರ ಸೀನಿಯರ್ ವಿಶ್ವಕಪ್ ತಂಡಕ್ಕೆ ನೇರವಾಗಿ ಆಯ್ಕೆಯಾಗುವ ಮೂಲಕ ತಮ್ಮ ಕ್ರೀಡಾ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.
ಮಗ ದೊಡ್ಡ ಕ್ರೀಡಾಪಟುವಾಗಬೇಕು ಎಂಬ ಕನಸನ್ನು ಹೊಂದಿದ್ದ ತಂದೆ ಶಶಿಕುಮಾರ್, ಬಾಲ್ಯದಿಂದಲೇ ಮೋಹಿತ್‌ಗೆ ಅಗತ್ಯ ತರಬೇತಿ ಹಾಗೂ ಸೌಲಭ್ಯ ಕಲ್ಪಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಚ್. ಹೊನ್ನೇನಹಳ್ಳಿ ಗ್ರಾಮದ ಎಚ್.ವಿ. ಶಶಿಕುಮಾರ್ ಹಾಗೂ ಆಶಾರಾಣಿ ದಂಪತಿಯ ಪುತ್ರರಾದ ಮೋಹಿತ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಮಾರು ೧೨ ವರ್ಷಗಳ ಬಳಿಕ ಕರ್ನಾಟಕದಿಂದ ಭಾರತೀಯ ಸೀನಿಯರ್ ಹಾಕಿ ತಂಡಕ್ಕೆ ಆಯ್ಕೆಯಾದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷ ಮೋಹನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ್ ಸೇರಿ ಇತರರು ಉಪಸ್ಥಿತರಿದ್ದರು. ಮೋಹಿತ್ ಅವರ ತಂದೆ ಶಶಿಕುಮಾರ್, ತಾಯಿ ಹಾಗೂ ಕ್ರೀಡಾಭಿಮಾನಿಗಳು ಇದ್ದರು.