ಮಠಗಳಿಂದ ಸಮಾಜದಲ್ಲಿ ನೆಮ್ಮದಿಯ ವಾತಾವರಣ

KannadaprabhaNewsNetwork | Published : Mar 25, 2024 12:54 AM

ಸಾರಾಂಶ

ದಾಬಸ್‌ಪೇಟೆ: ಮಠಗಳು ಧರ್ಮ ಕೇಂದ್ರಗಳಾಗಿದ್ದು ಭಕ್ತರಿಗೆ ಮಾರ್ಗದರ್ಶನ ನೀಡಿ, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತಹ ವಾತಾವರಣ ನಿರ್ಮಿಸುತ್ತಿವೆ ಎಂದು ನೊಣವಿನಕೆರೆ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಹೇಳಿದರು.

ದಾಬಸ್‌ಪೇಟೆ: ಮಠಗಳು ಧರ್ಮ ಕೇಂದ್ರಗಳಾಗಿದ್ದು ಭಕ್ತರಿಗೆ ಮಾರ್ಗದರ್ಶನ ನೀಡಿ, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತಹ ವಾತಾವರಣ ನಿರ್ಮಿಸುತ್ತಿವೆ ಎಂದು ನೊಣವಿನಕೆರೆ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಹೇಳಿದರು.

ಸೋಂಪುರ ಹೋಬಳಿಯ ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಠ ಶೂನ್ಯದಿಂದ ಎತ್ತರಕ್ಕೆ ಬೆಳೆಯುತ್ತಿದೆ. ಕಳೆದ ಹತ್ತು ವರ್ಷಗಳಿಂದ ಶಿವಗಂಗಾ ಶ್ರೀ ಪ್ರಶಸ್ತಿಗೆ ಸಮಾಜದ ವಿವಿಧ ಸಾಧಕರಿಗೆ ಪ್ರದಾನ ಮಾಡಿದೆ. ಎಲ್ಲಾ ಜನಾಂಗದ ಬಾಂಧವರಿಗೆ ಆಶ್ರಯ ನೀಡಿದ್ದು ವೀರಶೈವ ಧರ್ಮ ಎಂದರು.

ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಭಾವೈಕ್ಯತೆಯ ಪ್ರತೀಕರಾಗಿದ್ದವರು, ಸಹಸ್ರ ಶಾಖಾ ಮಠ ತೆರೆದು, ಭಕ್ತಿ-ಸಂತ ಪರಂಪರೆಯನ್ನು ಜಗತ್ತಿಗೆ ಸಾರಿದ್ದಾರೆ. ಮುಂದಿನ ವರ್ಷ ಶಿವಗಂಗಾ ಶ್ರೀ ಪ್ರಶಸ್ತಿಯನ್ನು ನೊಣವಿನ ಕೆರೆ ಶ್ರೀಗಳ ಪಾದಕಮಲಗಳಿಗೆ ಅರ್ಪಿಸಲಿದ್ದೇವೆ ಎಂದು ಘೋಷಿಸಿದರು.

ಮಠಗಳ ಪಾತ್ರ ಹಿರಿದು:

ಶಾಸಕ ಶ್ರೀನಿವಾಸ್ ಮಾತನಾಡಿ, ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲಾ ಮಠಗಳು ಜನರಿಗೆ ತ್ರಿವಿಧ ದಾಸೋಹವನ್ನು ನೀಡುತ್ತಿವೆ. ಮೇಲಣಗವಿ ಮಠದ ಶಿವಗಂಗಾ ಶ್ರೀ ಪ್ರಶಸ್ತಿ ತನ್ನದೇ ಆದ ಹಿರಿಮೆ ಹೊಂದಿದೆ. ಸದ್ದು ಮಾಡದೆ ಸಾಧನೆ ಶಿಖರವನ್ನು ಮಠ ಏರುತ್ತಿದೆ ಎಂದರು.

ಶಿವಗಂಗಾ ಶ್ರೀ ಪ್ರಶಸ್ತಿ ಸ್ವೀಕರಿಸಿ ಎನ್.ಎಸ್. ನಟರಾಜು ಅವರಿಗೆ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು. ಶ್ರೀ ಮಠದ ಕ್ಯಾಲೆಂಡರ್ ಮತ್ತು ಎಂ.ವಿ.ನೆಗಳೂರ ರಚಿಸಿದ ವಿಚಾರ-ಆಚಾರ-ವಿಹಾರ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗೀಶ್ವರ ಸ್ವಾಮೀಜಿ, ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಕವಲೇದುರ್ಗದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಬಂಡೇಮಠದ ಶ್ರೀ ಮಹಾಲಿಂಗ ಸ್ವಾಮೀಜಿ, ವನಕಲ್ಲು ಮಠದ ಡಾ.ಬಸವರಮಾನಂದ ಸ್ವಾಮೀಜಿ, ವೀರಶೈವ ಮಹಾಸಭಾದ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ನಿವೃತ್ತ ಸೈನಿಕರಾದ ಸುಭಾಷ್ ಬಾಳೆಕಾಯಿ, ಹವಾಲ್ದಾರ್ ಶರವಣ್, ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು, ಉಪಸ್ಥಿತರಿದ್ದರು.

ಪೋಟೋ 2 :

ಕಾರ್ಯಕ್ರಮದಲ್ಲಿ ಶಿವಗಂಗಾ ಶ್ರೀ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ಎನ್.ಎಸ್.ನಟರಾಜು ಅವರಿಗೆ ನೀಡಿ ಸನ್ಮಾನಿಸಲಾಯಿತು.

Share this article