ಕನ್ನಡಪ್ರಭ ವಾರ್ತೆ ಬೀದರ್
ಚುನಾವಣಾ ಕಣಕ್ಕೆ ಧುಮುಕುವಂತೆ ಮಂತ್ರಿಗಳಿಗೆ ಹೇಳಿ ಸುಸ್ತಾಗಿ, ಎದ್ದೇಳು ಮಂಜುನಾಥ ಎಂಬಂತೆ ಸುಪ್ರಭಾತ ಹಾಕಿದರೂ ಮಕಾಡೆ ಮಲಗಿದ ಅವರ ಮಗ, ಮಗಳು, ಅತ್ತೆ, ಸೊಸೆ, ಪತ್ನಿಯನ್ನು ಕಣಕ್ಕಿಳಿಸಿರೋ ಕಾಂಗ್ರೆಸ್, ಕಾರ್ಯಕರ್ತರನ್ನು ಕಡೆಗೆಣಿಸಿದ್ದು, ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಅದೇ ಪಕ್ಷ ಎದುರಿಸಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ವ್ಯಂಗ್ಯವಾಡಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ಟಾರ್ಗೆಟ್‌ಗೆ ಹೆದರಿ ಒಬ್ಬ ಮಂತ್ರಿಯೂ ಧೈರ್ಯ ಮಾಡಲಿಲ್ಲ. ತಮ್ಮ ಕುಟುಂಬಸ್ಥರಿಗೇ ಟಿಕೆಟ್ ಕೊಡಿಸಿದ್ದು, ಬಿಜೆಪಿ ವಿರುದ್ಧ ಚುನಾವಣೆ ಎದುರಿಸುವಂಥ ಕಾರ್ಯಕರ್ತನೇ ಕಾಂಗ್ರೆಸ್ ಪಕ್ಷದಲ್ಲಿಯೇ ಇಲ್ಲವೇ ಎಂಬ ಅನುಮಾನ ಮುಂದಿಟ್ಟಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ, ಭಯೋತ್ಪಾದನೆ, ಬಾಂಬ್ ದಾಳಿ ಹೆಚ್ಚಳ: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬರ, ಕುಡಿಯುವ ನೀರಿನ ಹಾಹಾಕಾರ ರಾಜ್ಯದ ಜನರನ್ನು ಕಾಡುತ್ತಿದೆ. ಭಯೋತ್ಪಾದನೆ, ಬಾಂಬ್ ದಾಳಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರದಿಂದ ಬಾಂಬ್ ಗ್ಯಾರಂಟಿ, ಭ್ರಷ್ಟಾಚಾರದ ಗ್ಯಾರಂಟಿ ಆರಂಭವಾಗಿದೆ ಎಂದು ಆರೋಪಿಸಿದರು.ಬರ ಪರಿಹಾರದ ವಿಷಯವಾಗಿ ಕೇಂದ್ರವನ್ನು ದೂಷಿಸುವ ಕಾಂಗ್ರೆಸ್‌ನವರು, ನಾವು ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರದ ಪಾಲಿನ 14628.95ಕೋಟಿ ರು.ಗಳ ಎಸ್‌ಟಿಆರ್‌ಎಫ್ ನಿಧಿಯನ್ನು ಕೇವಲ ಒಂದು ತಿಂಗಳ ಒಳಗಾಗಿ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ನೇರ ಪಾವತಿ ಮಾಡಿದ್ದೇವು, 2013-14ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 9 ತಿಂಗಳ ವಿಳಂಬವಾಗಿತ್ತು ಅದರ ಬಗ್ಗೆ ಮಾತೇ ಎತ್ತಲ್ಲ ಕಾಂಗ್ರೆಸ್ ಎಂದು ಅವರು ವಿವರ ನೀಡಿ ಕೇಂದ್ರದ ವಿರುದ್ಧ ಸುಪ್ರಿಂಕೋರ್ಟ್‌ಗೆ ಹೋಗಿದ್ದು ಸರಿಯಲ್ಲ ಎಂದರು.
ಇನ್ನು ರಾಜ್ಯದಲ್ಲಿ ಕೋವಿಡ್ ಸಂಕಷ್ಟವಿದ್ದಾಗ ಹೊರತುಪಡಿಸಿದರೆ ಕೊರತೆ ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ ಮಾತ್ರ. ಗ್ಯಾರಂಟಿಗಳ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದಲ್ಲಿ ಹಣವೇ ಇಲ್ಲ. 1.5 ಲಕ್ಷ ಕೋಟಿ ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಿಕ್ಕಿದೆ ಎಂದು ಹೇಳಿದರು. ನಮ್ಮ ಬಿಜೆಪಿಯ ಸರ್ಕಾರದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ 25 ಸಾವಿರ ಕೋಟಿ ರು. ಉಳಿತಾಯ ಬಜೆಟ್‌ನಿಂದಲೇ ಇವರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಶಾಸಕ ಗುಬ್ಬಿ ಶ್ರೀನಿವಾಸ್ ಅವರು ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ ಈ ಸರ್ಕಾರ ಎಂದು ಹೇಳಿದ್ದನ್ನೇ ನಾವು ಪುನರುಚ್ಚರಿಸಿ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬೀದಿಗೆ ಬಿದ್ದು ಹೋಗ್ತದೆ ಎಂದು ಭವಿಷ್ಯ ನುಡಿಯುತ್ತಿದ್ದೇವೆ ಎಂದರು.ಕಾಂಗ್ರೆಸ್ ಹಿರಿಯರಲ್ಲಿ ಭಾರಿ ಅಸಮಾಧಾನ: ಕಾಂಗ್ರೆಸ್ ಹಿರಿಯ ನಾಯಕ ಪರಮೇಶ್ವರ 6 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದರೂ ಅವರಿಗೆ ಮುಖ್ಯಮಂತ್ರಿ ಪಟ್ಟ ದಕ್ಕಲಿಲ್ಲ. ಸಿದ್ದರಾಮಯ್ಯ ಯಾರೋ ಕಟ್ಟಿದ ಪಕ್ಷ, ಅದರ ಹುತ್ತದಲ್ಲಿ ಕುಳಿತು ಅಧಿಕಾರ ಗದ್ದುಗೆ ಹಿಡಿದುಕೊಂಡಿದ್ದಾರೆ. ಹೀಗಾಗಿಯೇ ಪರಮೇಶ್ವರ, ಡಿ.ಕೆ ಶಿವಕುಮಾರ, ಜಾರಕಿಹೊಳಿ ಹಾಗೂ ಗುಬ್ಬಿ ಶ್ರೀನಿವಾಸ ಅವರೆಲ್ಲ ಸಭೆ ನಡೆಸಿ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಹುಳುಕುಗಳನ್ನು ಹೊರಗೆಡವಿದರು.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ, ಬಿಜೆಪಿ ಘೋಷಿತ ಅಭ್ಯರ್ಥಿ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್, ಡಾ. ಅವಿನಾಶ ಜಾಧವ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಎಂಜಿ ಮೂಳೆ, ಅಮರನಾಥ ಪಾಟೀಲ್, ಸುಭಾಷ ಗುತ್ತೇದಾರ್, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಬಸವರಾಜ ಪವಾರ್, ಈರಪ್ಪ ಔರಾದೆ, ಕಿರಣ ಪಾಟೀಲ್, ಅರಹಂತ ಸಾವಳೆ ಹಾಗೂ ಮಾಧವ ಹೊಸೂರೆ ಸೇರಿದಂತೆ ಮತ್ತಿತರರು ಇದ್ದರು.