ಭಗವಂತನ ಕೃಪೆಯಿಂದ ಹಣ,ಗೌರವ ಪ್ರಾಪ್ತಿ

KannadaprabhaNewsNetwork | Published : Mar 5, 2025 12:31 AM

ಸಾರಾಂಶ

ಅಗತ್ಯಕ್ಕಿಂತ ಹೆಚ್ಚು ಚಿಂತನೆ ಮಾಡುವುದರಿಂದ ಮನುಷ್ಯ ತನ್ನ ಆರೋಗ್ಯ ಹಾಗೂ ಆಧ್ಯಾತ್ಮ ಚಿಂತನೆ ನಾಶ ಮಾಡಿಕೊಳ್ಳುತ್ತಿದ್ದಾನೆ

ಭಟ್ಕಳ: ತಾಲೂಕಿನ ಕರಿಕಲ್ ನಲ್ಲಿರುವ ಶ್ರೀರಾಮ ಕ್ಷೇತ್ರದ ಧ್ಯಾನ ಮಂದಿರದ ವರ್ಧಂತ್ಯುತ್ಸವ ಮಂಗಳವಾರ ಉಜಿರೆ ಶ್ರೀರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಹಣ ಮತ್ತು ಗೌರವ ಭಗವಂತನ ಕೃಪೆಯಿಂದ ಲಭ್ಯವಾಗುತ್ತದೆ. ಆದರೆ ಮನುಷ್ಯ ಹಣ ಮತ್ತು ಅಧಿಕಾರ ಬಂದಾಗ ಎಲ್ಲವನ್ನೂ ಮರೆಯುತ್ತಿದ್ದು, ಇದು ಸರಿಯಲ್ಲ. ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣಬೇಕು. ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿ ಜಾಗೃತಗೊಳ್ಳಬೇಕು. ಗುರುಗಳು, ದೇವರ ಬಗ್ಗೆ ಶ್ರದ್ಧಾಭಕ್ತಿ ಬೆಳೆಸಿಕೊಳ್ಳಬೇಕು ಎಂದ ಶ್ರೀಗಳು, ಅಗತ್ಯಕ್ಕಿಂತ ಹೆಚ್ಚು ಚಿಂತನೆ ಮಾಡುವುದರಿಂದ ಮನುಷ್ಯ ತನ್ನ ಆರೋಗ್ಯ ಹಾಗೂ ಆಧ್ಯಾತ್ಮ ಚಿಂತನೆ ನಾಶ ಮಾಡಿಕೊಳ್ಳುತ್ತಿದ್ದಾನೆ. ತನ್ನ ಬಗ್ಗೆ ಚಿಂತನೆ ಮಾಡದೆ ಪರರ ಬಗ್ಗೆ ಸದಾ ಚಿಂತನೆ ಮಾಡುವುದು, ಬೇರೆಯವರನ್ನು ದೂಷಿಸುತ್ತಾ ತನ್ನ ಶಕ್ತಿ ಹಾಗೂ ಆರೋಗ್ಯ ನಾಶಪಡಿಸಿಕೊಳ್ಳುತ್ತಿದ್ದಾನೆ. ಇದು ಸರಿಯಾದ ಮಾರ್ಗವಲ್ಲ. ಪ್ರೀತಿ ವಿಶ್ವಾಸ, ಭಕ್ತಿ ಭಾವದಿಂದ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದರು. ಧಾರ್ಮಿಕ ಸಭೆಯ ಪೂರ್ವದಲ್ಲಿ ಭಟ್ಕಳ ಶ್ರೀನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾರದಹೊಳೆ ಶ್ರೀಹಳೇಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.

ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಭಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಡಿ.ಎಲ್.ನಾಯ್ಕ, ವಾಸುದೇವ ನಾಯ್ಕ, ಸುಬ್ರಾಯ ನಾಯ್ಕ, ವಾಮನ ನಾಯ್ಕ, ಮಂಕಿ, ಗೋವಿಂದ ನಾಯ್ಕ, ಹೊನ್ನಾವರ, ಆರ್.ಎಚ್,. ನಾಯ್ಕ ಕುಮಟಾ, ಮಂಜುನಾಥ ನಾಯ್ಕ, ಹೊನ್ನಾವರ, ಅರವಿಂದ ಪೂಜಾರಿ ಬೈಂದೂರು, ಡಿ.ಬಿ. ನಾಯ್ಕ, ಜಯಂತ ಕೋಟ್ಯಾನ್, ಬೆಳ್ತಂಗಡಿ, ಸದಾನಂದ ಪೂಜಾರಿ, ಜಿಲ್ಲೆಯ ವಿವಿಧೆಡೆಯಿಂದ ಬಂದ ನಾಮಧಾರಿ ಸಮಾಜದ ಮುಖಂಡರು, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಸ್ವಾಗತಿಸಿದರು.ಶಿಕ್ಷಕ ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ನಿರೂಪಿಸಿದರು.

ವರ್ಧಂತಿ ಉತ್ಸವದ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಶ್ರೀರಾಮತಾರಕ ಮಹಾಯಜ್ಞ ನಡೆಯಿತು. ನಂತರ ಭಕ್ತಮಂಡಳಿಯವರಿಂದ ಭಜನೆ, ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ನೆರವೇರಿತು.

Share this article