ತಂದೆ ಇಲ್ಲದ ಮಗುಗೆ ದುಡ್ಡು: ಮಧ್ಯವರ್ತಿಗಳಿಂದ ಸುಲಿಗೆ ಸದ್ದು!

KannadaprabhaNewsNetwork |  
Published : Sep 12, 2024, 01:58 AM IST
ಪೋಟೋ: 11ಎಚ್‌ಎಚ್‌ಆರ್‌01: ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಸಂದೇಶ. | Kannada Prabha

ಸಾರಾಂಶ

ದುರುಳ ಮಧ್ಯವರ್ತಿಗಳು ಅಮಾಯಕ, ಮುಗ್ಧ ಜನರನ್ನು ಸುಲಿಗೆ ಮಾಡಲು ಶುರು ಮಾಡಿದ್ದಾರೆ. ಒಂದೊಂದು ಅರ್ಜಿಗೆ ಕನಿಷ್ಠ 5 ರಿಂದ 10 ಸಾವಿರ ರು.ವಸೂಲಿ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ.

ಅರಹತೊಳಲು ಕೆ.ರಂಗನಾಥ್

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

‘ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24 ಸಾವಿರ ಸ್ಕಾಲರ್‌ಶಿಪ್‌ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ’ ಎಂಬ ಸಂದೇಶ ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು, ಜನರನ್ನು ಗೊಂದಲಕ್ಕೀಡು ಮಾಡಿದೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ದಕ್ಷಿಣ ಕನ್ನಡ, ಮಂಗಳೂರು ಎಂಬ ಮೊಹರು ಹಾಕಿರುವ ಒಂದು ಅರ್ಜಿಯ ಫೊಟೋ ಹೊಂದಿರುವ ಈ ವಾಟ್ಸಸ್ ಸಂದೇಶ ಜನರ ಫೋನ್‌ಗಳಲ್ಲಿ ಒಂದು ತಿಂಗಳಿಂದ ಹರಿದಾಡುತ್ತಿದೆ.

ಈ ಸಂದೇಶವನ್ನು ನೋಡಿದ ಜನ ಪ್ರತಿನಿತ್ಯ ಗ್ರಾಮ ಪಂಚಾಯಿತಿ, ಕಂದಾಯ ಅಧಿಕಾರಿಗಳ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮಕ್ಕಳ ರಕ್ಷಣಾ ಇಲಾಖೆ ಕಚೇರಿ ಸೇರಿ ಎಲ್ಲಾ ಕಡೆ ಅಲೆದಾಡುತ್ತಿದ್ದಾರೆ. ಮಕ್ಕಳ ರಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರತಿದಿನ ನೂರಾರು ಬಂದು ಜನರು ಯೋಜನೆಯ ಬಗ್ಗೆ ಬಂದು ವಿಚಾರಿಸುತ್ತಿರುವುದು ಮತ್ತು ನೂರಾರು ಪೋನ್ ಕರೆಗಳು ಬರುತ್ತಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಮಧ್ಯವರ್ತಿಗಳ ಹಗಲು ದರೋಡೆ:

ಈ ಸಂದೇಶವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಮಾಯಕ, ಮುಗ್ಧ ಜನರನ್ನು ಸುಲಿಗೆ ಮಾಡಲು ಶುರು ಮಾಡಿದ್ದಾರೆ. ಒಂದೊಂದು ಅರ್ಜಿಗೆ ಕನಿಷ್ಠ 5 ರಿಂದ 10 ಸಾವಿರ ರು.ವಸೂಲಿ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಬಡವರು ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿ ಸುಮ್ಮ ನಾಗುತ್ತಿದ್ದಾರೆ.

ಈ ಸೌಲಭ್ಯದ ವಾಸ್ತವತೆಯೇ ಬೇರೆ ಇದೆ. ಈ ಯೋಜನೆಯನ್ನು 2011ರಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ವ್ಯಾಪ್ತಿಗೆ ತರಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಸಾವಿರಾರು ಜನ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಇದನ್ನು ಸರ್ಕಾರಿ ಅನುದಾನಿತ ಪ್ರಾಯೋಜಕತ್ವ ಯೋಜನೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡು ವರ್ಗಗಳಿವೆ.

1) ತಡೆಗಟ್ಟುವ ಯತ್ನ: ಸಂಕಷ್ಟಕ್ಕೆ ಈಡಾಗುವ ಕುಟುಂಬಕ್ಕೆ, ಮಗು ಜೈವಿಕ ಕುಟುಂಬದಲ್ಲೇ ಮುಂದುವರಿಯಲು, ಮಗು ಶಿಕ್ಷಣವನ್ನು ಮುಂದುವರಿಸಲು ಪ್ರಾಯೋಜಕತ್ವ ಬೆಂಬಲ ಒದಗಿಸುವುದು. ಮಕ್ಕಳು ನಿರ್ಗತಿಕರಾಗುವುದನ್ನು, ಸಂಕಷ್ಟಕ್ಕೀಡಾಗುವುದನ್ನು, ಓಡಿಹೋಗುವುದು, ಬಲವಂತದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಮುಂತಾದುವುಗಳಿಂದ ತಡೆಗಟ್ಟುವ ಪ್ರಯತ್ನ ಇದಾಗಿದೆ.

2) ಪುನರ್ವಸತಿ: ಸಂಸ್ಥೆಗಳ ಒಳಗಿನ ಮಕ್ಕಳನ್ನು ಪ್ರಾಯೋಜಕತ್ವ ಸಹಾಯದೊಂದಿಗೆ ಕುಟುಂಬಗಳ ಜೊತೆಗೆ ಪುನರ್ ಸ್ಥಾಪಿಸುವುದು.

ಫಲಾನುಭವಿಯಾಗಲು ಇರುವ ಮಾನದಂಡಗಳು:

ಈ ಯೋಜನೆಯ ಪ್ರಕಾರ ಫಲಾನುಭವಿಯಾಗಲು ಕೆಲವು ವಿಶೇಷ ಮಾನದಂಡಗಳಿವೆ. ಇಬ್ಬರೂ ಪೋಷಕರನ್ನು ಕಳೆದು ಕೊಂಡ ಮಕ್ಕಳು, ಪೋಷಕರು ಕಾರಾಗೃಹದಲ್ಲಿರುವ ಮಕ್ಕಳು, ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಪಟ್ಟಿರುವವರ ಮಕ್ಕಳು, ಪಿಎಂ ಕೇರ್ ಚಿಲ್ಡ್ರನ್ ಯೋಜನೆಯ ಅನುಮೋದಿತ ಮಕ್ಕಳು, ಬಾಲ ಕಾರ್ಮಿಕ ಸಂತ್ರಸ್ತರು, ಮಕ್ಕಳ ಕಳ್ಳಸಾಗಾಣಿಕೆಗೆ ಒಳಗಾದ ಮಕ್ಕಳು, ಬಾಲ್ಯ ವಿವಾಹಕ್ಕೊಳಗಾದ ಮಕ್ಕಳು, ಪೋಕ್ಸೋ ಸಂತ್ರಸ್ತ ಮಕ್ಕಳು, ಪೋಷಕರಿಬ್ಬರೂ ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವವರ ಮಕ್ಕಳು, ಬಾಲ ಸ್ವರಾಜ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮಕ್ಕಳು, ಪಾಲನೆ ಮತ್ತು ರಕ್ಷಣೆಯ ಅತ್ಯವಿರುವ ಪಾಲನಾ ಸಂಸ್ಥೆಯ ಮಕ್ಕಳು ಹಾಗೂ ಇತರೆ ದುಡಿಯುವ ಪೋಷಕಕನ್ನು ಕಳೆದುಕೊಂಡ ವಿಧವೆ, ವಿಚ್ಚೇದಿತ ಮತ್ತು ವಿಸ್ತೃತ ಕುಟುಂಬದ ಮಕ್ಕಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುವರು.

ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾತನಾಡಿ ಆರ್.ಮಂಜುನಾಥ್, ಜನರು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗಬಾರದು. ಈ ಯೋಜನೆಯ ಬಗ್ಗೆ ಸರಿಯಾಗಿ ಅರಿತುಕೊಳ್ಳ ಬೇಕು. ಇದು ಕೆಲವು ವಿಶೇಷ ಸಮಸ್ಯೆಗಳುಳ್ಳ ಮಕ್ಕಳಿಗಾಗಿ ಇರುವ ಒಂದು ಉಪಯುಕ್ತ ಯೋಜನೆಯಾಗಿದೆ. ಸಂತ್ರಸ್ತರು ಯಾವುದೇ ಮಧ್ಯವರ್ತಿಯ ಕೈಗೆ ಹಣ ಕೊಟ್ಟು ಮೋಸ ಹೋಗದಿರಿ ಎಂದು ಕಿವಿಮಾತು ಹೇಳಿದರು.

ಸರ್ಕಾರಿ ನೌಕರರಿಂದಲೇ ಹೆಚ್ಚು ಷೇರ್!

ಈ ವಾಟ್ಸಪ್ ಸಂದೇಶವು ವಿದ್ಯಾವಂತರು ಮತ್ತು ಕೆಲವು ಸರ್ಕಾರಿ ನೌಕರರಿಂದಲೇ ಹೆಚ್ಚು ಷೇರ್ ಆಗುತ್ತಿದೆ. ಕಾರಣ ಯಾರಾದರೂ ಬಡವರ ಮಕ್ಕಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಹೆಚ್ಚು ಫಾರ್ವರ್ಡ್ ಆಗುತ್ತಿದೆ. ಆದರೆ ಯಾರೂ ಕೂಡ ನೈಜತೆಯನ್ನು ಅರಿತುಕೊಳ್ಳದಿರುವುದು ವಿಪರ್ಯಾಸ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ