ಬಸವ ಪ್ರತಿಮೆ ನಿರ್ಮಾಣಕ್ಕೆ ದುಡ್ಡು ?

KannadaprabhaNewsNetwork |  
Published : Jan 16, 2024, 01:49 AM IST
ಬಸವಪುತ್ಥಳಿ ಪುರಾಣ-ಭಾಗ-5 | Kannada Prabha

ಸಾರಾಂಶ

ಪ್ರತಿಮೆ ನಿರ್ಮಾಣದ ಹಿಂದಿನ ಆಶಯ, ಉದಾತ್ತ ಚಿಂತನೆಯ ಥಿಯರಿ ಕೇಳಲು ಸೊಗಸಾಗಿದೆ. ಆದರೆ ಬಸವಣ್ಣನ ಪ್ರತಿಮೆ ಕಡೆದು ನಿಲ್ಲಿಸೋಕೆ ದುಡ್ಡಿಗೇನು ಮಾಡುತ್ತೆ? ಎಂಬ ಸಹಜ ಪ್ರಶ್ನೆಗಳು ಜನರ ಬಳಿ ಸುಳಿದಾಡುತ್ತಿವೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹೆಣ್ಣು ಕೇಳೋಕೆ ಹೋದ ವರನ ತಂದೆ ತನ್ನ ಮಗನ ಬಗ್ಗೆ ಸಿಕ್ಕಾಪಟ್ಟೆ ಹೊಗಳಿಕೊಳ್ಳುತ್ತಿದ್ದ. ಮಗ ಉತ್ತಮ ಭಾಷಣಕಾರ, ಹಳ್ಳಿ ಸುತ್ತಿ ಜನರ ಸಂಘಟನೆ ಮಾಡ್ತಾನೆ, ಹೋರಾಟಕ್ಕೆ ಧುಮುಕುತ್ತಾನೆ, ಜನರ ಜಾಗೃತಿ ಮೂಡಿಸ್ತಾನೆ ಎಂದೆಲ್ಲ ಹೇಳಿದ್ದು ಕೇಳಿದ ಎದುರಿಗೆ ಕುಳಿತಿದ್ದವ ಎಲ್ಲಾ ಸರಿ ಸ್ವಾಮಿ, ಆದರೆ ಉಣ್ಣೋಕೆ ಏನು ಮಾಡಿಕೊಂಡಿದ್ದಾನೆ ಎಂದು ಪ್ರಶ್ನಿಸಿದನಂತೆ. ಮುರುಘಾಮಠದ ಬಸವ ಪ್ರತಿಮೆ ನಿರ್ಮಾಣದ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಇದೆ. ಪ್ರತಿಮೆ ನಿರ್ಮಾಣದ ಹಿಂದಿನ ಆಶಯ, ಉದಾತ್ತ ಚಿಂತನೆಯ ಥಿಯರಿ ಕೇಳಲು ಸೊಗಸಾಗಿದೆ. ಮೈ ನವಿರೇಳಿಸುತ್ತದೆ. ಆದರೆ ಪ್ರಾಕ್ಟಿಕಲ್ ವಿಚಾರಕ್ಕೆ ಬಂದಾಗ ಆಕಾಶವೇ ಕಳಚಿ ಬಿದ್ದ ಅನುಭವವಾಗುತ್ತದೆ. ಬಸವಣ್ಣನ ಪ್ರತಿಮೆ ನಿಲ್ಲಿಸೋಕೆ ದುಡ್ಡಿಗೇನು ಮಾಡುತ್ತೆ ಎಂಬ ಸಹಜ ಪ್ರಶ್ನೆಗಳು ಜನರ ಬಳಿ ಸುಳಿದಾಡುತ್ತಿವೆ.

ಪ್ರತಿಮೆ ನಿರ್ಮಾಣ ಕೈಗೆತ್ತಿಕೊಂಡಾಗ ಮಠದ ಭಕ್ತರು, ಹಳೇ ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು ಎಲ್ಲರೂ ಸಹಾಯ ಮಾಡುತ್ತಾರೆ. ಸರ್ಕಾರ ಕೂಡಾ ಆರ್ಥಿಕ ನೆರವು ನೀಡುತ್ತದೆ ಎಂದು ಮುರುಘಾಮಠ ಭಾವಿಸಿತ್ತು. ಸರ್ಕಾರೇತರ ನೆರವು ಅಗಾದ ಪ್ರಮಾಣದಲ್ಲಿ ಸಿಗುತ್ತದೆ ಎಂದು ಮುರುಘಾಮಠ ಯಾವ ನೆಲೆಯಲ್ಲಿ ನಂಬಿತೋ ಅರ್ಥವಾಗುತ್ತಿಲ್ಲ. ಪ್ರತಿ ವರ್ಷ ಮಠದ ವತಿಯಿಂದ ನಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ಏನೆಲ್ಲಾ ಮನವಿ ಮಾಡಿಕೊಂಡರೂ ದೇಣಿಗೆ ಮೊತ್ತ ಕೋಟಿ ರು. ದಾಟುವುದಿಲ್ಲ. ಅಂತಹುದರಲ್ಲಿ 300 ಕೋಟಿ ರು (ಬರಿ ಪ್ರತಿಮೆಗೆ) ವೆಚ್ಚದ ಪುತ್ಥಳಿ ನಿರ್ಮಾಣದ ಸಾಹಸಕ್ಕೆ ಏಕೆ ಕೈ ಹಾಕಿತೆಂಬ ಪ್ರಶ್ನೆ ಮೂಡುತ್ತವೆ.

ದೇಶದ ಜನ ಸ್ಪಂದಿಸಿದ್ದರು

ಗುಜರಾತ್ ನಲ್ಲಿ ಸರ್ದಾರ್ ವಲ್ಲಭಬಾಯಿ ಪ್ರತಿಮೆ ನಿರ್ಮಾಣ ಮಾಡುವ ಹೊತ್ತಿನಲ್ಲಿ ಇಡೀ ದೇಶದ ಜನರು ಸ್ಪಂದಿಸಿದ್ದರು. ಸ್ವತಹ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಗಾಗಿ ನಿಮ್ ಮನೇಲಿ ಇರುವ ತುಂಡು ಕಬ್ಬಿಣವ ಕೊಡಿ ಎಂದು ಜನರಲ್ಲಿ ವಿನಂತಿಸಿದ್ದರು. ಹಳೇ ಕಬ್ಬಿಣ ಸಂಗ್ರಹದ ಆಂದೋಲನವೇ ನಡೆದಿತ್ತು. ತುಂಡಾದ ಕುಡುಕೋಲು, ಕುಳ ಸೇರಿದಂತೆ ಗುಜರಿಯಲ್ಲಿ ಸಿಕ್ಕ ಸಿಕ್ಕ ಕಬ್ಬಿಣದ ತುಂಡುಗಳನ್ನು ರಾಷ್ಟ್ರವ್ಯಾಪಿ ಜನ ಕಳಿಸಿಕೊಟ್ಸಿದ್ದರು. ಅದನ್ನು ಕರಗಿಸಿ ಪೀಠಕ್ಕೆ ಬಳಸಿಕೊಳ್ಳಲಾಗಿತ್ತು. ಹತ್ತಾರು ಕಂಪ‌ನಿಗಳು ಸಿಎಸ್ ಆರ್ ಫಂಡ್ ನಲ್ಲಿ ಧಾರಾಳ ದೇಣಿಗೆ ನೀಡಿದ್ದರು. ಕೇಂದ್ರ ಸರ್ಕಾರ ಕೂಡಾ ನೆರವು ನೀಡಿತ್ತು. ಆದರೆ ಅಂತಹ ಪರಿಸ್ಥಿತಿ ಮುರುಘಾಮಠದ ಬಸವ ಪುತ್ಥಳಿಗೆ ಇಲ್ಲ. ಪೂರ್ತಿ ಹಣವ ಸರ್ಕಾರ ಕೊಡಲು ಸಾಧ್ಯವಿಲ್ಲ. ಹೊಂದಾಣಿಕೆ(ಮ್ಯಾಚಿಂಗ್) ಗ್ರಾಂಟ್ ಕೊಡಬಹುದಷ್ಟೇ. ಉಳಿದಂತೆ ಬೇಕಿರುವ ಅಗಾಧ ಪ್ರಮಾಣದ ಹಣಕ್ಕೆ ಏನು ಮಾಡುತ್ತೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮುರುಘಾಮಠದ ಅಧಿಕಾರಿಗಳು ತನಿಖೆಗಾಗಿ ಆಗಮಿಸಿದ್ದ ಜಿಲ್ಲಾಡಳಿತದ ಮುಂದೆ ಮೌಖಿಕಿಕವಾಗಿ ಮಂಡಿಸಿದ ವರದಿ ಅನ್ವಯ ರಾಜ್ಯ ಸರ್ಕಾರ ಇದುವರೆಗೂ 35 ಕೋಟಿ ಅನುದಾನ ಕೊಟ್ಟಿದ್ದು ಅದರಲ್ಲಿ 24 ಕೋಟಿ ಖರ್ಚಾಗಿದೆ, ಆರು ಕೋಟಿ ಕಂಪನಿಯೊಂದಕ್ಕೆ ಮುಂಗಡ ನೀಡಲಾಗಿದೆ, ಐದು ಕೋಟಿ ಡಿಪಾಜಿಟ್ ಇದೆ ಎಂಬುದಾಗಿದೆ.

ಹಿಂದೊಮ್ಮೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಸವ ಪುತ್ಥಳಿ ನಿರ್ಮಾಣ ಪೂರಕ ಶೆಡ್ ಉದ್ಘಾಟನೆಗೆ ಆಗಮಿಸಿದಾಗ ಸಹಜವಾಗಿಯೇ ಅನುದಾನದ ಬಗ್ಗೆ ಪ್ರಶ್ನಿಸಿದ್ದರು. ಇಷ್ಟೊಂದು ಪ್ರಮಾಣದ ಸಂಪನ್ಮೂಲ ಹೇಗೆ ಕ್ರೂಡೀಕರಿಸುತ್ತೀರ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸರ್ಕಾರ, ಸಾರ್ವಜನಿಕರ ನೆರವು ಕೋರಿದ್ದೇವೆ. ಹಾಗೊಂದು ವೇಳೆ ಸ್ಪಂದನೆಗಳು ಬಾರದಿದ್ದರೆ ಮಠ ಮಾರಿಯಾದರೂ ಪುತ್ಥಳಿ ಕಟ್ಟಿಸುತ್ತೇವೆಂಬ ಮಾತುಗಳು ಮುರುಘಾಮಠದ ಕಡೆಯಿಂದ ಬಂದಿದ್ದವು. ಮಠ ಮಾರುವುದು ಕಾನೂನಾತ್ಮಕವಾಗಿ ಅಷ್ಟು ಸರಳ, ಸುಲಲಿತವಲ್ಲವೆಂಬ ಸಂಗತಿ ಗೊತ್ತಿಲ್ಲದೇ ಇರುವುದೇನಲ್ಲ. ಬೆಂಗಳೂರಿನ ಪುಟ್ಟಶೆಟ್ಟಿ ಮಠ ಮಾರಲು ಹೋದಾಗ ಆದ ಕಹಿ ಅನುಭವಗಳು ಇನ್ನೂ ಮಾಸಿಲ್ಲ.ಹಟ್ಟಿ ಜನಕ್ಕೆ ಎಷ್ಟೊಂದು ಮನೆ ಕಟ್ಟಬಹುದಿತ್ತು!

ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಬಸವೇಶ್ವರ ಪುತ್ಥಳಿ ನಿರ್ಮಾಣದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಖುದ್ದು ಅವಲೋಕಿಸಿದ್ದರು. ದುಬಾರಿ ಮೊತ್ತದ ಬಸವ ಪುತ್ಥಳಿ ನಿರ್ಮಾಣದ ತಯಾರಿಗೆ ದಂಗಾಗಿದ್ದರು. ಇಷ್ಟೊಂದು ಅನುದಾನ ಸಿಗುವ ಹಾಗಿದ್ದರೆ ನಮ್ ಹಟ್ಟಿ ಜನಕ್ಕೆ ಎಷ್ಟೊಂದು ಮನೆಗಳ ಕಟ್ಟಿಸಬಹುದೆಂದು ಉದ್ಗಾರ ತೆಗೆದಿದ್ದರು. ಅಂದಹಾಗೆ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಹೋಗಲು ಸಿಸಿ ರಸ್ತೆ ಮಾಡಿಸಲಾಗಿದ್ದು ಅದೂ ಕೂಡಾ ಸರ್ಕಾರದ ಯಾವುದೋ ಇಲಾಖೆಯ ಬಾಬತ್ತಾಗಿದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ