ಹೊಸಕೋಟೆ: ವರ್ಕ್ ಫ್ರಂ ಹೋಮ್ ಹೆಸರಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿರುವ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಹೆಸರಿನ ಸಂಸ್ಥೆ ವಿರುದ್ಧ ನೂರಾರು ಮಹಿಳೆಯರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ
ಹೊಸಕೋಟೆ: ವರ್ಕ್ ಫ್ರಂ ಹೋಮ್ ಹೆಸರಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿರುವ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಹೆಸರಿನ ಸಂಸ್ಥೆ ವಿರುದ್ಧ ನೂರಾರು ಮಹಿಳೆಯರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ಮನೆಗಳಿಂದಲೇ ಕೆಲಸ ಮಾಡಿಕೊಡುವ ನೆಪದಲ್ಲಿ ಊದುಬತ್ತಿ ಮನೆಗಳಿಗೆ ತಲುಪಿಸಿ ಪ್ಯಾಕಿಂಗ್‌ಗೆ ಪ್ರತಿ ತಿಂಗಳು 18 - 20 ಸಾವಿರ ವೇತನ ನೀಡುವುದಾಗಿ ಹಾಗೂ ಕೆಲಸಕ್ಕೆ ನೀಡುವ ವಸ್ತುಗಳ ಸುರಕ್ಷತೆಗಾಗಿ ಡಿಪಾಸಿಟ್ ಹಣ ಇಡಬೇಕು. ಆ ಹಣವನ್ನು 6 ತಿಂಗಳ ನಂತರ ವಾಪಸ್ ನೀಡುವುದಾಗಿ ನಂಬಿಸಿ ಮಹಿಳೆಯರಿಂದ 20 ಸಾವಿರ ರುಪಾಯಿಯಿಂದ ಆರಂಭಿಸಿ ಲಕ್ಷಾಂತರ ರುಪಾಯಿವರೆಗೆ ಹಣ ಸಂಗ್ರಹಿಸಲಾಗುತ್ತಿತ್ತು. ಆರಂಭದಲ್ಲಿ ಕೆಲವರಿಗೆ ಹಣ ಸಮಯಕ್ಕೆ ಸರಿಯಾಗಿ ವಾಪಸ್ ನೀಡಿದ್ದರಿಂದ ಸಂಸ್ಥೆ ಮೇಲಿನ ವಿಶ್ವಾಸ ಹೆಚ್ಚಾಗಿತ್ತು.
ಬಳಿಕ 1 ಲಕ್ಷ ರುಪಾಯಿ ಠೇವಣಿಗೆ 3 ಗ್ರಾಂ ಚಿನ್ನ, 2 ಲಕ್ಷ ಠೇವಣಿಗೆ 6 ಗ್ರಾಂ ಚಿನ್ನ ಸೇರಿದಂತೆ ವಿವಿಧ ಆಕರ್ಷಕ ಆಫರ್‌ಗಳನ್ನು ಘೋಷಿಸಿ ಹೆಚ್ಚಿನ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದರೆನ್ನಲಾಗಿದೆ. ಈ ಆಫರ್‌ಗಳ ಆಕರ್ಷಣೆಗೆ ಒಳಗಾದ ಅನೇಕ ಮಹಿಳೆಯರು 10 ಲಕ್ಷ, 20 ಲಕ್ಷ ಹಾಗೂ ಕೆಲವರು 1 ಕೋಟಿ ರುಪಾಯಿವರೆಗೆ ಠೇವಣಿ ಇಟ್ಟಿದ್ದರೆನ್ನಲಾಗಿದೆ.
ಆದರೆ ಕಳೆದ ಮೂರು ತಿಂಗಳಿಂದ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಕಚೇರಿ ಬಾಗಿಲು ತೆರೆಯದೇ ಕಂಪನಿಯ ಮಾಲೀಕರ ಹಾಗೂ ವ್ಯವಸ್ಥಾಪಕರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಹಣ ಹೂಡಿಕೆ ಮಾಡಿದ ನಾಗರಿಕರು ಆತಂಕಕ್ಕೆ ಸಿಲುಕಿ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
ರಾಜ್ಯದ ಎಲ್ಲಾ ಶಾಖೆಗಳ ನಂಬರ್ ಸ್ವಿಚ್ ಆಫ್:
ಎಸ್‌ಎಲ್‌ವಿ ಮಹಿಳಾ ಮಾರ್ಟ್ ಮಾಲೀಕ ಆಂಧ್ರ ಪ್ರದೇಶದ ನೆಲ್ಲೂರಿನ ಬೊಮ್ಮಲ ರಾಜೇಶ್. ಕೇಂದ್ರ ಕಚೇರಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿದ್ದು ಬಳಿಕ ತುಮಕೂರು, ಹೊಸಕೋಟೆ, ರಾಯಚೂರು, ಚಿತ್ರದುರ್ಗ, ಹಾವೇರಿ ಸೇರಿದಂತೆ ತಮಿಳುನಾಡಿನ ಹೊಸೂರಿನಲ್ಲಿ ಪ್ರಾರಂಭ ಮಾಡಿದ್ದರು. ಹೀಗೆ ವರ್ಕ್ ಫ್ರಂ ಹೋಂ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಯೂ ಟ್ಯೂಬ್ ಇನ್ಸ್ಟಾಗ್ರಾಮ್‌ಗಳಲ್ಲಿ ಜಾಹಿರಾತು ನೀಡಿ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದರು. ರಾಜ್ಯದ ಎಲ್ಲಾ ಶಾಖೆಗಳಿಂದ ಏಳೆಂಟು ಸಾವಿರ ಜನರಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿದ್ದಾರೆ. ಈಗ ರಾಜ್ಯದ ಎಲ್ಲಾ ಶಾಖೆಗಳ ದೂರವಾಣಿ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ. ಹೊಸಕೋಟೆ ನಗರದ ಕೆಕೆ ಬಡಾವಣೆಯಲ್ಲಿ ಮೂರು ವರ್ಷಗಳ ಹಿಂದೆ ಕಚೇರಿ ತೆರೆದು ಪ್ರಾರಂಭದ ವರ್ಷದಲ್ಲಿ ಸಕಾಲಕ್ಕೆ ಮರುಪಾವತಿಸಿ ಜನರ ವಿಶ್ವಾಸ ಗಳಿಸಿದ ಬಳಿಕ ನೂರಾರು ಮಹಿಳೆಯರು ಕೋಟ್ಯಂತರ ಹಣ ಠೇವಣಿ ಇಟ್ಟು ಮೋಸ ಹೋಗಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಟೋ: 17 ಹೆಚ್ ಎಸ್‌ಕೆ 1 ಮತ್ತು 2
1: ಹೊಸಕೋಟೆ ನಗರದ ಕೆಕೆ ಬಡಾವಣೆಯಲ್ಲಿರುವ ಎಸ್‌ಎಲ್‌ಬಿ ಮಹಿಳಾ ಮಾರ್ಟ್ ಕಚೇರಿ ಮುಚ್ಚಿರುವುದು.
2: ಹೊಸಕೋಟೆಯಲ್ಲಿ ಎಸ್‌ಎಲ್‌ವಿ ಮಹಿಳಾ ಮಾರ್ಟ್‌ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ನಾಗರಿಕರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.