ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಐದು ಗ್ಯಾರಂಟಿಗಳಿಗೆ ಹಾಕುವ ಹಣ ಬೀದಿಗೆ ಹಾಕುವ ಹಣ ಅಲ್ಲ, ಜನರ ಹೊಟ್ಟೆಗೆ ಹಾಕುವ ಹಣವಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ತೆರಿಗೆ ಹಣ ನೇರ ಜನರಿಗೆ: ದೇಶದ ಯಾವ ರಾಜ್ಯದಲ್ಲೂ ಜನರ ತೆರಿಗೆ ಹಣ ನೇರ ಜನರ ಜೇಬಿಗೆ ಹೋಗುವಂತಹ ಯೋಜನೆ ರೂಪಿಸಲಾಗಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಕಾರ್ಯ ಮಾಡಿದೆ. ಐದು ಗ್ಯಾರಂಟಿಗಳಿಂದ ಮನೆ ಮನೆಗೆ ಸರ್ಕಾರದ ಯೊಜನೆಗಳನ್ನು ತಲುಪಿಸಿದೆ. 1,20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿದೆ. ಇನ್ನೂ ಏಳು ಲಕ್ಷ ಮಹಿಳೆಯರು ಉಳಿದಿದ್ದಾರೆ. ಅವರಿಗೂ ಈ ಯೋಜನೆ ಶೀಘ್ರ ಸಿಗಲಿದೆ ಎಂದರು.
ವಿಜಯನಗರ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆ ಸಮಾವೇಶ ನಡೆಸಲಾಗುವುದು. ಸ್ಥಳೀಯ ನಗರಸಭೆಗೆ ಜಿಲ್ಲಾಧಿಕಾರಿ ಜತೆಗೂಡಿ ಶೀಘ್ರ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸುವೆ. ಈಗ ಹೊಸ ಪೌರಾಯುಕ್ತರು ಬಂದಿದ್ದಾರೆ. ಎಂಜಿನಿಯರ್ ಸೇರಿದಂತೆ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬದಲಿಸಲಾಗುವುದು. ನಗರಸಭೆ ಆಡಳಿತ ಸುಧಾರಣೆಗೆ ಎಲ್ಲ ಬಗೆಯ ಕ್ರಮ ವಹಿಸಲಾಗುವುದು. ನಗರಸಭೆಗೆ ಖಂಡಿತ ನಾನು ಹೋಗಿ; ಸಭೆ ನಡೆಸಿ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವೆ ಎಂದರು.ವಿಜಯನಗರ ಕ್ಷೇತ್ರದಲ್ಲಿ ಶಾಸಕರ ಕೆಲಸಗಳು ಹಿಂದೆ ಬೀಳುತ್ತಿವೆ ಎಂಬ ಆರೋಪಗಳು ಕೂಡ ಇವೆ ಎಂದು ಕೇಳಲಾದ ಪ್ರಶ್ನೆಗೆ, ಹಾಗೇನಿಲ್ಲ, ಈಗಾಗಲೇ ₹40 ಕೋಟಿಯ ವಿವಿಧ ಅನುದಾನಗಳು ಬಂದಿವೆ. ಟೀಕೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುವೆ. ಬರಗಾಲ ಇದೆ. ಕುಡಿಯುವ ನೀರಿನ ಸಮಸ್ಯೆ ಕೂಡ ಪರಿಹರಿಸುವೆ. ಪ್ರತಿ, ಓಣಿ, ವಾರ್ಡ್‌ಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.
ಮುಖಂಡರಾದ ಗುಜ್ಜಲ ನಿಂಗಪ್ಪ, ಅಂಜಿನಪ್ಪ, ಜಿ. ಮಂಜುನಾಥ, ಗೌಡರ ರಾಮಣ್ಣ, ಕೆ. ಬಡಾವಲಿ, ಕೆ. ರವಿಕುಮಾರ, ಸೋಮಶೇಖರ ಬಣ್ಣದಮನೆ, ಯೋಗಲಕ್ಷ್ಮಿ, ನಗರಸಭೆ ಸದಸ್ಯರಾದ ಮುನ್ನಿ ಕಾಸಿಂ, ಕೆ. ಮಹೇಶ್ ಕುಮಾರ, ಸಾರಿಗೆ ಇಲಾಖೆಯ ವಿಭಾಗಿಯ ನಿಯಂತ್ರಣಾಧಿಕಾರಿ ಜಗದೀಶ್ ವಿ.ಎಸ್., ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮತ್ತಿತರರಿದ್ದರು.