ನೀರಿನ ಸಮಸ್ಯೆ ಪರಿಹಾರಕ್ಕೆ 210 ಖಾಸಗಿ ಟ್ಯಾಂಕರ್‌ ವಶ; ಸಮಸ್ಯೆ ಇರುವೆಡೆ ನೀರಿನ ಟ್ಯಾಂಕ್‌ ಅಳವಡಿಕೆ

KannadaprabhaNewsNetwork | Updated : Mar 05 2024, 10:07 AM IST

ಸಾರಾಂಶ

ನಗರದಲ್ಲಿ ಸಮಸ್ಯೆ ಇರುವ ಪ್ರದೇಶಗಳಿಗೆ ನೀರು ಪೂರೈಕೆಗಾಗಿ 210 ಟ್ಯಾಂಕರ್‌ ಬಳಕೆ, ಕೊಳಗೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೀರಿನ ಟ್ಯಾಂಕ್‌ ಅಳವಡಿಕೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸಮಸ್ಯೆ ಇರುವ ಪ್ರದೇಶಗಳಿಗೆ ನೀರು ಪೂರೈಕೆಗಾಗಿ 210 ಟ್ಯಾಂಕರ್‌ ಬಳಕೆ, ಕೊಳಗೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೀರಿನ ಟ್ಯಾಂಕ್‌ ಅಳವಡಿಕೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳು ಮತ್ತು ನೀರಿನ ಸಮಸ್ಯೆ ಉಲ್ಬಣಗೊಂಡ 256 ಪ್ರದೇಶಗಳ ನೀರಿನ ಬೇಡಿಕೆಯನ್ನು ಪೂರೈಸಲು ಬೆಂಗಳೂರು ಜಿಲ್ಲಾಧಿಕಾರಿಗಳ ಮತ್ತು ಸಾರಿಗೆ ಇಲಾಖೆಯ ಮೂಲಕ 210 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕೊಳೆಗೇರಿ ಪ್ರದೇಶ, ಜನನಿಬಿಡ ಪ್ರದೇಶ, ತಗ್ಗು ಮತ್ತು ಎತ್ತರ ಪ್ರದೇಶಗಳಲ್ಲಿ 1-3 ಸಾವಿರ ಲೀಟರ್‌ ಸಾಮರ್ಥ್ಯದ 336 ಟ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. 

ಈ ಪ್ರದೇಶಗಳಲ್ಲಿನ ಸಾರ್ವಜನಿಕರು ಟ್ಯಾಂಕ್‌ಗಳ ಮುಖಾಂತರ ಕುಡಿಯುವ ನೀರನ್ನು ಉಚಿತವಾಗಿ ನೀಡಲಾಗುವುದು. ಜಲಮಂಡಳಿಯು ಆರು ಸಾವಿರ ಲೀಟರ್ ಸಾಮರ್ಥ್ಯದ ಸುಮಾರು 76 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ವಿವಿಧ ಕಡೆ ಅಳವಡಿಸಿರುವ ಟ್ಯಾಂಕ್‌ಗಳಿಗೆ ನೀರನ್ನು ಮರುಪೂರಣ ಮಾಡಲಾಗುತ್ತಿದೆ. 

ಜಲಮಂಡಳಿಯು ಈಗಾಗಲೇ 68 ನೀರಿನ ಟ್ಯಾಂಕರ್‌ಗಳನ್ನು ಹೊಂದಿದೆ. ಇದಲ್ಲದೇ 16 ಹೊಸ ನೀರಿನ ಟ್ಯಾಂಕರ್‌ಗಳನ್ನು ಖರೀದಿಸಲು ಕ್ರಮವಹಿಸಲಾಗಿದೆ. 

ಜಲಮಂಡಳಿಯು ಗುರುತಿಸಲಾದ 313 ಸ್ಥಳಗಳಲ್ಲಿ ಬೋರ್‌ವೆಲ್ ಕೊರೆಯಲಾಗುತ್ತಿದೆ. ನಿಷ್ಕ್ರಿಯಗೊಂಡ ಕೊಳವೆಬಾವಿಗಳನ್ನು ಮತ್ತೆ ಕೊರೆಸಲು ಅಥವಾ ಪುನರ್‌ಜ್ಜೀವನಗೊಳಿಸಲು ಮುಂದಾಗಿದೆ.ಬಾಕ್ಸ್...

ಕುಡಿಯುವ ನೀರನ್ನು ವಾಹನ ಸ್ವಚ್ಛತೆಗೆ ಬಳಸಲು ನಿಷೇಧ

ಜಲಮಂಡಳಿಯು ‘ನೀರು ಉಳಿಸಿ ಬೆಂಗಳೂರು ಉಳಿಸಿ’ ಎಂಬ ಅಭಿಯಾನವನ್ನು ಕೈಗೊಳ್ಳಲಾಗಿದೆ. ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಮಾಡಲು, ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲು ಹಾಗೂ ಇತ್ಯಾದಿ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ನಿಷೇಧ ಆದೇಶ ಜಾರಿ ಮಾಡಲು ಮುಂದಾಗಿದೆ.

ಅಂತರ್ಜಲದ ಮೇಲಿನ ಬೇಡಿಕೆಯನ್ನು ಕಡಿಮೆ ಮಾಡಲು ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. 

ಕೈಗಾರಿಕೆಗಳಲ್ಲಿ ಕುಡಿಯುವುದಕ್ಕೆ ಹೊರತುಪಡಿಸಿ ಇತರ ಬಳಕೆಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಸೂಚಿಸಲು ಕ್ರಮವಹಿಸಲಾಗುತ್ತಿದೆ ಎಂದು ಜಲಮಂಡಳಿ ತಿಳಿಸಿದೆ.

ಹಳ್ಳಿಗಳಲ್ಲಿ ನೀರಿಗೆ ತೊಂದರೆ ಇದ್ದರೆ 1533ಕ್ಕೆ ಕರೆ ಮಾಡಿ; ಇನ್ನುಳಿದ ವಾರ್ಡ್‌ನವರು 1916ಕ್ಕೆ ದೂರು ನೀಡಿಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಹೊರವಲಯದ 110 ಹಳ್ಳಿಯ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ ‘1533’ ಗೆ ಕರೆ ಮಾಡಬಹುದು. 

ಸಮಸ್ಯೆ ಪರಿಹಾರಕ್ಕೆ ವಾರ್ಡವಾರು 35 ನೋಡಲ್‌ ಅಧಿಕಾರಿಗಳನ್ನು ಬಿಬಿಎಂಪಿ ನೇಮಿಸಿದೆ.ಬಿಬಿಎಂಪಿ ಹೊರ ವಲಯದ 35 ವಾರ್ಡ್‌ ವ್ಯಾಪ್ತಿಗೆ ಬರುವ 110 ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ನಿಯಂತ್ರಣ ಕೊಠಡಿ ಸ್ಥಾಪಿಸಿದೆ.

 ಮೇಲುಸ್ತುವಾರಿಗಾಗಿ ದಾಸರಹಳ್ಳಿ ವಲಯದ ಕಾರ್ಯಪಾಲಕ ಅಭಿಯಂತರ ಧರಣೇಂದ್ರಕುಮಾರ್ ಅವರನ್ನು ಮುಖ್ಯ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.

ಇನ್ನುಳಿದ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಗೆ ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share this article